ಶಿಕಾರಿಪುರ: ರಾಜ್ಯ ಬಿಜೆಪಿ ಸರ್ಕಾರ ಇತ್ತೀಚೆಗಷ್ಟೆ ಸದಾಶಿವ ಆಯೋಗದ ಪ್ರಕಾರ ಒಳಮೀಸಲಾತಿಯನ್ನು ಜಾರಿಗೆಗೆ ಕೇಂದ್ರಕ್ಕೆ ಸಿಪಾರಸ್ಸು ಮಾಡಲಾಗಿದೆಯಲ್ಲದೇ, ಇದನ್ನೇ ದೊಡ್ಡ ಸಾಧನೆ ಎಂಬಂತೆ ರಾಜ್ಯದುದ್ದಕ್ಕೂ ಪ್ರಚಾರ ಪಡಿಸಿ ಹೆಚ್ಚಿನ ಲಾಭ ಪಡೆಯಲು ಮುಂದಾಗಿರೋದು ಒಂದೆಡೆಯಾದರೆ, ಇನ್ನೊದೆಡೆ ರಾಜ್ಯದ ವಿವಿಧ ಜಿಲ್ಲಾ ಕೇಂದ್ರಗಳ ಅನೇಕ ತಾಲ್ಲೂಕುಗಳಲ್ಲಿ, ಬಂಜಾರ, ಭೋವಿ ಕೊರಚ, ಕೊರಮ ಜನಾಂಗದವರು ಬುಗಿಲೆದ್ದು, ಸರ್ಕಾರದ ನೀತಿಯನ್ನು ಖಂಡಿಸಿ ಬೃಹತ್ ಪ್ರತಿಭಟನೆ ನಡೆಯುತ್ತಿದೆ.
ಅಂತೆಯೇ ಶಿಕಾರಿಪುರ ತಾಲ್ಲೂಕಿನಲ್ಲಿ ಒಳಮೀಸಲಾತಿ ವಿರೋಧಸಿ ಸೋಮವಾರ ಪಟ್ಟಣದಲ್ಲಿ ನಡೆದ ಬಂಜಾರ, ಬೋವಿ, ಕೊರಚ, ಕೊರಮ ಸಮುದಾಯದ ಪ್ರತಿಭಟನೆ ತಾಲ್ಲೂಕಿನ ಮುಂಬರುವ ವಿಧಾನಸಭೆ ಚುನಾವಣೆಯ ಮೇಲೂ ಕರಿನೆರಳು, ಬೇಸಿಗೆಯ ಬಿರು ಬಿಸಿಲಿನಲ್ಲೂ ವಿವಿಧ ರಾಜಕೀಯ ಪಕ್ಷಗಳಲ್ಲಿ ಗಡಗಡ ನಡುಕ ಹುಟ್ಟುವಂತೆ ಮಾಡಿದೆ. ನಿಕಟಪೂರ್ವ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪರವರ ಮನೆಮೇಲೆ ಕಲ್ಲು ಚಪ್ಪಲಿಗಳ ತೂರಾಟ ನಡೆಸಿದ್ದಲ್ಲದೆ, ಬಿಜೆಪಿ ಪಕ್ಷದ ಕಾರ್ಯಾಲಯದ ಮೇಲೆ ಹಾರಾಡುತ್ತಿದ್ದ ಪಕ್ಷದ ಬಾವುಟ ಕಿತ್ತೊಗೆಯುವ ಮೂಲಕ ರಾಜ್ಯದಾದ್ಯಂತ ಒಳಮೀಸಲಾತಿ ಹೋರಟದ ಕಿಚ್ಚು ಹಚ್ಚಿದೆ.
ಸರ್ಕಾರ ಒಳಮೀಸಲಾತಿಗೆ ಶಿಫಾರಸು ಮಾಡಿದ ದಿನದಿಂದಲೂ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ದಿನಂಪ್ರತಿ ತಾಂಡಾಗಳಲ್ಲಿ ಪಕ್ಷಾತೀತವಾಗಿ ಬಂಜಾರ ಸಮಾಜದ ಅನೇಕ ಮುಖಂಡರು ಪ್ರತಿಭಟನೆಯ ರೂಪುರೇಷೆಗಳ ಕುರಿತು ಹಲವಾರು ಸಭೆ ನಡೆಸಿ ಬಿಎಸ್‌ವೈ ರವರ ಮನೆಗೆ ಮುತ್ತಿಗೆ ಹಾಕುವ ಮತ್ತು ಕಲ್ಲು ಹೊಡೆಯುವ ತೀರ್ಮಾನ ಕೈಗೊಳ್ಳಲಾಗಿತ್ತು. ಇದನ್ನು ತಡೆಯಲು ಪ್ರಯತ್ನಿಸುವ ಬಿಜೆಪಿ ಮುಖಂಡರನ್ನು ಧಿಕ್ಕರಿಸುವ ಕುರಿತು ಕೂಡ ಸಭೆಯಲ್ಲಿ ಚರ್ಚೆ ನಡೆದಿದೆ.
ಹೆಚ್ಚಿನದಾಗಿ ಮೀಸಲಾತಿಯ ಲಾಭ ಪಡೆದ ಅನೇಕ ನೌಕರರಿಂದಲೇ, ಪ್ರತಿಭಟನಾಕಾರರಿಗೆ ನೀರು ಮಜ್ಜಿಗೆ ಹಣ ಹೆಂಡ ನೀಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಪಟ್ಟಣದ ವಿವಿಧ ಭಾಗಗಳಲ್ಲಿ ಮೆರವಣಿಗೆ ಮೂಲಕ ತಹಶೀಲ್ದಾರ್ ಕಚೇರಿಗೆ ಮನವಿ ಸಲ್ಲಿಸಲು ಆಗಮಿಸಿದ ಪ್ರತಿಭಟನಾಗಾರರು, ಇಲ್ಲಿ ಬ್ಯಾರಿಕೇಡ್ ಹಾಕಿರುವುದನ್ನು ಗಮನಿಸಿ ಇನ್ನಷ್ಟು ಉದ್ವೇಗದಿಂದ ಬ್ಯಾರಿಕೇಡ್ ಮುರಿದು ಮುನ್ನುಗ್ಗಿದರು. ಅತ್ಯಲ್ಪ ಪ್ರಮಾಣದಲ್ಲಿದ್ದ ಕೆಲ ಪೊಲೀಸರು ಲಾಠಿಚಾರ್ಜ್ ನಡೆಸಲು ಯತ್ನಿಸಿದರಾದರೂ, ಪ್ರತಿಭಟನಾಕಾರರು ಪೂರ್ವ ತಯಾರಿಯಂತೆ ಪೊಲೀಸರ ಮೇಲೆ ಕಲ್ಲು ಚಪ್ಪಲಿ ತೂರಾಟ ನಡೆಸಿ ಮುನ್ನುಗ್ಗಿದರು.ಇದರಿಂದಾಗಿ ಪೊಲೀಸ್ ಸಿಬ್ಬಂದಿಗಳು ಮೌನಕ್ಕೆ ಶರಣಾದರು. ಪೊಲೀಸರ ಮೇಲೆ ಕಲ್ಲೆಸೆದು ಅಂದಿನ ಪರಿಸ್ಥಿತಿಯ ಲಾಭ ಪಡೆದಿರುವ ಮಾತುಗಳು ಕೇಳಿಬರುತ್ತಿವೆ.
ಒಳಮೀಸಲಾತಿ ಕಿಚ್ಚು ಕೇವಲ ಹೋರಾಟಕ್ಕೆ ಮಾತ್ರ ಸೀಮಿತವಾಗೊಳ್ಳದೇ, ತಾಲ್ಲೂಕಿನ ಸಾಲೂರು ತಾಂಡಾ,ಬಿಳ್ಕಿತಾಂಡಾ, ಬೇಗೂರುತಾಂಡಾ, ರಾಗಿಕೊಪ್ಪ, ದೊಡ್ಡಜೋಗಿಹಳ್ಳಿ, ಮರಡಿತಾಂಡಾ, ಬೆಂಡೆಕಟ್ಟೆತಾಂಡಾ, ಶಿರಹಟ್ಟಿ, ಇಟ್ಟಿಗೀಹಳ್ಳಿ ನಾಗಿಹಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಚುನಾವಣೆ ಬಹಿಷ್ಕರಿಸಲು ತೀರ್ಮಾನ ಕೈಗೊಂಡಿದ್ದು, ಎಲ್ಲಾ ತಾಂಡಾಗಳ ಮಹಾದ್ವಾರದಲ್ಲಿ ರಾಜಕಾರಣಿಗಳ ಪ್ರವೇಶಕ್ಕೆ ನಿರ್ಬಂಧ ಹೇರಿದ ನಾಮಫಲಕ ಹಾಕಲಾಗಿದೆ. ತಾಲ್ಲೂಕಿನಲ್ಲಿ ಒಟ್ಟು 160 ಗ್ರಾಮಗಳಲ್ಲಿ 68 ತಾಂಡಾಗಳ್ಳಿದ್ದು, ಇದರಲ್ಲಿ 40 ಸಾವಿರಕ್ಕೂ ಅಧಿಕ ಬಂಜಾರ ಸಮಾಜದವರು, 23 ಸಾವಿರಕ್ಕೂ ಅಧಿಕ ಭೋವಿ ಜನಾಂಗ, 5 ರಿಂದ 6 ಸಾವಿರಕ್ಕೂ ಹೆಚ್ಚು ಕೊರಚ, ಕೊರಮ ಜನಾಂಗಗಳಿದ್ದಾರೆ. ಇನ್ನೂ ಮುಸ್ಲಿಂ ಸಮುದಾಯದವರು ಸೇರಿದಂತೆ ಒಟ್ಟಾರೆಯಾಗಿ 80 ಸಾವಿರಕ್ಕೂ ಅಧಿಕ ಜನರಿಗೆ ಒಳಮೀಸಲಾತಿ ಜಾರಿಗೆಯಿಂದ ಅನ್ಯಾಯವಾಗಲಿದೆ. ಇದರಿಂದಾಗಿ ವಿಧಾನಸಭೆಯ ಚುನಾವಣೆಯು ಹತ್ತರವಾಗುತ್ತಿರುವುದರಿಂದ ಈ ಬಾರಿ ತಾಲ್ಲೂಕಿನಲ್ಲಿ ಬಿಜೆಪಿ ಪಕ್ಷಕ್ಕೆ ದೊಡ್ಡ ಆಘಾತವುಂಟಾಗಲಿದೆ.
ನಿಕಟಪೂರ್ವ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪರವರಿಗೆ ಕ್ಷೇತ್ರದ ಮತದಾರರು ಕಳೆದ ನಾಲ್ಕು ದಶಕಗಳಿಂದ ನಿರಂತರವಾಗಿ ಬೆಂಬಲಿಸುತ್ತಾ ಬಂದಿದ್ದರೂ, ಬಿಎಸ್‌ವೈ ರವರು ಚುನಾವಣಾ ರಾಜಕೀಯ ನಿವೃತ್ತಿ ಘೋಷಿಸಿ ತಮ್ಮ ಪುತ್ರ ಬಿ ವೈ ವಿಜಯೇಂದ್ರಗೆ ಇಲ್ಲಿ ರಾಜಕೀಯ ಭವಿಷ್ಯ ಕಟ್ಟಿಕೊಡಲು ಮುಂದಾಗಿದ್ದು, ಇಲ್ಲಿ ಒಳಮೀಸಲಾತಿ ಹೋರಾಟದ ಪರಿಣಾಮವಾಗಿ ಕೆಲವೇ ಕೆಲವು ಬೆರಳೆಣಿಕೆಯ ಪಕ್ಷದ ಮುಖಂಡರನ್ನು ಹೊರತು ಪಡಿಸಿ, ಅನೇಕ ಸ್ವ ಪಕ್ಷದ ಬಂಜಾರ,ಬೋವಿ ಕೊರಚ ಕೊರಮ ಮುಸ್ಲಿಂ ಜನಾಂಗದ ಜನರು ಬಿಜೆಪಿಯಿಂದ ದೂರವಿದ್ದು, ಪಕ್ಷದ ಅಂತರವನ್ನು ಕಾಯ್ದುಕೊಂಡಿದ್ದಾರೆ. ಚುನಾವಣೆಗೆ ದಿನಗಣನೆ ಆರಂಭವಾಗಿದೆಯಾದರೂ, ತಾಲ್ಲೂಕಿನಲ್ಲಿ ಒಳಮೀಸಲಾತಿಯ ಕಿಚ್ಚು ಬಿಜೆಪಿಗೆ ಎಷ್ಟು ಪರಿಣಾಮ ಬೀರುತ್ತದೆಯೋ ಎಂಬುದು ಕಾದು ನೋಡಬೇಕಿದೆ.
ಶಿಕಾರಿಪುರ ಹಾಗೂ ಶಿವಮೊಗ್ಗ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಸದಾ ಒತ್ತು ನೀಡಿ ಅನೇಕ ತಾಂಡಾಗಳಲ್ಲಿ ಹಿಂದೆಂದೂ ಕಂಡರಿಯದಂತೆ ರಸ್ತೆ ಚರಂಡಿ ನೀರು ಸರಬರಾಜು ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯ ಮಾಡಿದ್ದಲ್ಲದೇ, ಸೂರಗೊಂಡನಕೊಪ್ಪದಲ್ಲಿ ಬಂಜಾರ ಸಮಾಜದವರ ಆರಾಧ್ಯ ದೇವರಾದ ಸೇವಾಲಾಲ್ ರವರ ದೇವಸ್ಥಾನದ ಬಳಿ ಕೋಟಿ ಕೋಟಿ ಹಣ ಬಿಡುಗಡೆ ಮಾಡಿ ಅಲ್ಲಿ ಸಾವಿರಾರು ಭಕ್ತರು ಆಗಮಿಸಿ ಪೂಜಾ ವಿಧಿ ವಿಧಾನಗಳನ್ನು ನಡೆಸಲು ಮತ್ತು ಸುಸಜ್ಜಿತ ಉದ್ಯಾನವನ ನಿರ್ಮಾಣ ಮಾಡುವುದಕ್ಕೆ ಎಲ್ಲಾ ರೀತಿಯ ಅಭಿವೃದ್ಧಿಗೆ ಒತ್ತು ನೀಡಿದ್ದರು. ಅಲ್ಲದೇ ಏತ ನೀರಾವರಿ ಯೋಜನೆ ಮೂಲಕ ತಾಲ್ಲೂಕಿನಲ್ಲಿ ಅತಿಹೆಚ್ಚು ನೀರು ಸರಬರಾಜು ಮಾಡುವ ವ್ಯವಸ್ಥೆ ಮಾಡಿ ಎಲ್ಲಾ ಜನಾಂಗದ ರೈತರಿಗೆ ಕೃಷಿ ಚಟುವಟಿಕೆಗಳಿಗೆ ನೀರು ಪೂರೈಕೆ, ವಿದ್ಯುತ್ ಸ್ಥಾವರ ಸ್ಥಾಪನೆ, ಶಿಕ್ಷಣ ಮತ್ತು ಪ್ರಥಮ ಬಾರಿಗೆ ಮುಖ್ಯಮಂತ್ರಿಯಾಗಿದ್ದಾಗ ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆ ಮಾಡುವ ವ್ಯವಸ್ಥೆ ಹೀಗೆ ತಾಲ್ಲೂಕಿಗೆ ಸಾವಿರಾರು ಕೋಟಿ ರೂಪಾಯಿಗಳ ಅನುದಾನ ಬಿಡುಗಡೆ ಮಾಡಿದ ಶಾಸಕರು ಹಾಗೂ ನಿಕಟಪೂರ್ವ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪರವರ ಮನೆಮೇಲೆ ಕಲ್ಲು ತೂರಾಟದಂತಹ ಘಟನೆ ನಡೆದಿದೆ ಎಂದರೆ ಆಶ್ಚರ್ಯವಾಗಬಹುದು.
ವರದಿ : ರಾಜಾರಾವ್ ಎಂ ಜಾಧವ್ ಶಿಕಾರಿಪುರ