ಸೂರ್ಯ, ಚಂದ್ರರಿರುವಷ್ಟೇ ಸತ್ಯ ಈ ಬಾರಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ; ಬಿಎಸ್‌ವೈ

0 42

ಶಿಕಾರಿಪುರ : ಆಕಾಶದಲ್ಲಿ ಸೂರ್ಯ ಚಂದ್ರರಿರುವುದು ಎಷ್ಟು ಸತ್ಯವೋ ಅಷ್ಟೇ ಸತ್ಯ ಈ ಬಾರಿ ರಾಜ್ಯದಲ್ಲಿ ಬಿಜೆಪಿ ಪಕ್ಷವು 145 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿ ತನ್ನ ಸ್ವಂತ ಬಲದಿಂದ ಅಧಿಕಾರಕ್ಕೆ ಬರುವುದು ‌‌‌‌‌ಸತ್ಯಎಂದು ನಿಕಟಪೂರ್ವ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪರವರು ಘಂಟಾಘೋಷವಾಗಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇಂದು ಶಿಕಾರಿಪುರ ಕ್ಷೇತ್ರದಿಂದ ಬಿ ವೈ ವಿಜಯೇಂದ್ರರವರು ಬಿಜೆಪಿ ಅಭ್ಯರ್ಥಿಯಾಗಿ ತಮ್ಮ ಉಮೇದುವಾರಿಕೆ ಸಲ್ಲಿಸಿದ ನಂತರ ಪಟ್ಟಣದ ಹಳೆ ಸಂತೆ ಮೈದಾನದಲ್ಲಿ ಬಹಿರಂಗ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಭವ್ಯ ಭಾರತದ ಸರ್ವಾಂಗೀಣ ಅಭಿವೃದ್ಧಿಗಾಗಿ, ಬಡವರ ದೀನ ದಲಿತರ ಹಾಗೂ ರೈತರ ಉದ್ಧಾರಕ್ಕಾಗಿ ಭಾರತೀಯ ಜನತಾ ಪಾರ್ಟಿ ಪ್ರಧಾನಿ ನೇತೃತ್ವದಲ್ಲಿ ದೇಶದ ಉದ್ದಗಲಕ್ಕೂ ಕೆಲಸ ಮಾಡುತ್ತ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಾ ದೇಶದಲ್ಲಿ ಬದಲಾವಣೆ ಮಾಡುವ ಮಹತ್ಕಾರ್ಯಕ್ಕೆ ಕೈ ಹಾಕಿದೆ. ಇದರಿಂದಾಗಿ ಆಕಾಶದಲ್ಲಿ ಸೂರ್ಯ ಚಂದ್ರರು ಇರುವುದು ಎಷ್ಟು ಸತ್ಯವೋ ಅಷ್ಟೇ ಸತ್ಯವಾಗಿ 145 ಸೀಟನ್ನು ಗೆದ್ದು ಕರ್ನಾಟಕದಲ್ಲಿ ಮತ್ತೆ ಬಿಜೆಪಿ ಸರ್ಕಾರ ರಚನೆ ಮಾಡುವುದು ನಿಶ್ಚಿತ ಎಂದರು.

ಶಿವಶರಣರ ನಾಡು ಶಿಕಾರಿಪುರ ಕ್ಷೇತ್ರದ ಜನತೆ ನನಗೆ ಆಶೀರ್ವಾದ ಮಾಡಿ ಏಳು ಬಾರಿ ಶಾಸಕನನ್ನಾಗಿ ಮಾಡಿ, ನಾಲ್ಕು ಬಾರಿ ಮುಖ್ಯಮಂತ್ರಿಯನ್ನಾಗಿ ಮಾಡಿ ಈ ರಾಜ್ಯದ ಜನತೆಯ ಸೇವೆ ಮಾಡಲು ಅವಕಾಶ ಮಾಡಿಕೊಟ್ಟಿದ್ದೀರಿ. ಚುನಾವಣೆ ಈ ಸಂದರ್ಭದಲ್ಲಿ ನರೇಂದ್ರ ಮೋದಿ ಅವರು ರಾಜ್ಯದಲ್ಲಿ ಮತ್ತೊಮ್ಮೆ ಪ್ರವಾಸವನ್ನು  ಮಾಡಿ ಬಿಜೆಪಿಯನ್ನು ಅಧಿಕಾರಕ್ಕೆ ತರುವವರಿದ್ದಾರೆ. ನಾನು ಮುಖ್ಯಮಂತ್ರಿಯಗಿದ್ದಾಗ ಭಾಗ್ಯಲಕ್ಷ್ಮಿ ಯೋಜನೆ ಮೊದಲ ಬಾರಿಗೆ ಜಾರಿಗೆ ತಂದೇ, ರೈತರಿಗಾಗಿ ಪ್ರತ್ಯೇಕ ಬಜೆಟ್ ಮಂಡನೆ ಮಾಡಿದೆ. ರೈತರಿಗೆ ಉಚಿತ ವಿದ್ಯುತ್, ಶೂನ್ಯ ಬಡ್ಡಿ ದರದಲ್ಲಿ ಸಾಲ, ಗ್ರಾಮೀಣ ಪ್ರದೇಶದ ಶಾಲಾ ಮಕ್ಕಳಿಗೆ ಉಚಿತ ಬೈಸಿಕಲ್, ನಿರುದ್ಯೋಗಿ ಯುವಕರಿಗೆ ಉದ್ಯೋಗವನ್ನು ಕೊಡುವ ಕೆಲಸವನ್ನು ಮಾಡಿದ್ದೇನೆ. 

ಇಲ್ಲಿ ಸೇರಿರುವಂತಹ ಪ್ರತಿಯೊಬ್ಬರೂ ತಮ್ಮ ಕುಟುಂಬದ ವೋಟುಗಳ ಜೊತೆಗೆ ಬೇರೆಯವರಿಂದ ಐದು ಜೋಕುಗಳನ್ನು ಬಿಜೆಪಿಗೆ ಕೊಡಿಸುವ ಮೂಲಕ ಸಹಕಾರಿಸಿದರೆ ವಿಜಯೇಂದ್ರ ಐವತ್ತು ಸಾವಿರಕ್ಕೂ ಹೆಚ್ಚಿನ ಅಂತರದಿಂದ ಗೆಲುವು ಸಾಧಿಸುವುದು ನಿಶ್ಚಿತ ಎಂದ ಅವರು, ಈ ಚುನಾವಣೆಯಲ್ಲಿ ಶೃತಿ ಅವರ ಜೊತೆಗೋಡಿ ರಾಜ್ಯದ್ಯಂತ ನಾನು ಪ್ರವಾಸ ಮಾಡಲಿದ್ದೇನೆ ಶಿಕಾರಿಪುರ ತಾಲೂಕಿನಲ್ಲಿ ಆಗಬೇಕಾದಂತ ಯಾವುದಾದರೂ ಕೆಲಸ ಬಾಕಿ ಉಳಿದಿದೆಯೇ ? ಎಂದು ಪ್ರಶ್ನಿಸಿದ ಅವರು, ನೀರಾವರಿಗೆ ಹೆಚ್ಚಿನ ಆದ್ಯತೆಯನ್ನು ಕೊಟ್ಟಿದ್ದೇನೆ. 

ಮಳೆ ವಿಳಂಬದಿಂದಾಗಿ ಶಿವಮೊಗ್ಗ ಜಿಲ್ಲೆಯ ತುಂಗಭದ್ರಾ ಜಲಾಶಯದ ನೀರಿನ ಪ್ರಮಾಣ ಕಡಿಮೆಯಾಗಿದ್ದು ಇದರಿಂದಾಗಿ ಗ್ರಾಮೀಣ ಪ್ರದೇಶಗಳಲ್ಲಿ ನೀರಿನ ಸಮಸ್ಯೆ ಕಂಡುಬರುತ್ತಿದೆ. ನಾನು ಇವತ್ತೇ ಮುಖ್ಯಮಂತ್ರಿಗಳ ಜೊತೆ ಮಾತನಾಡಿ ಬೇರೆ ಎಲ್ಲಿಂದ ನಾರು ನೀರು ತಂದು ಕೆರೆಕಟ್ಟೆಗಳನ್ನು ತುಂಬಿಸಲು ಸಾಧ್ಯವಿದೆ ಎಂಬುದನ್ನು ಚರ್ಚಿಸುತ್ತೇನೆ. ವಿಜೇಂದ್ರ ಈಗಾಗಲೇ ತಮ್ಮ ಊರಿಗೆ ತಮ್ಮ ಬೂತ್ ಗಳಿಗೆ ಬಂದು ತಮಗೆ ಭೇಟಿ ಮಾಡಿ ಮಾತನಾಡಿದ್ದಾನೆ. ಪ್ರತಿಯೊಂದು ಬೂತ್ ನಲ್ಲೂ ಶೇಕಡಾ 70% ರಷ್ಟು ಮತವನ್ನು ಬಿಜೆಪಿಗೆ ಕೊಡಿಸುವುದರ ಮೂಲಕ ವಿಜಯೇಂದ್ರರನ್ನು ವಿರೋಧ ಪಕ್ಷದವರಿಗಿಂತ 50,000 ಕ್ಕೂ ಹೆಚ್ಚು ಅಂತರದಲ್ಲಿ ಗೆಲ್ಲಿಸುವಂತೆ ಮನವಿ ಮಾಡಿದರು.

ರಾಜ್ಯ ಬಿಜೆಪಿ ಉಪಾಧ್ಯಕ್ಷ ಹಾಗೂ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ ವೈ ವಿಜಯೇಂದ್ರ ಮಾತನಾಡಿ  ಬಿ ಎಸ್ ಯಡಿಯೂರಪ್ಪರವರಿಗೆ ರಾಜಕೀಯ ಜನ್ಮವನ್ನು ನೀಡಿದ ಕ್ಷೇತ್ರ ರಾಜಕೀಯ ಶಕ್ತಿ ನೀಡಿದ್ದು ಶಿಕಾರಿಪುರ ತಾಲ್ಲೂಕು, ನನಗೂ ಕೂಡ ಜನ್ಮಭೂಮಿ ನನ್ನ ಕರ್ಮ ಭೂಮಿಯಾಗಿದೆ. ಶಿಕಾರಿಪುರದಿಂದ ನನ್ನ ರಾಜಕೀಯ ಬದುಕನ್ನು ಆರಂಭಿಸುತ್ತಿರುವುದು ನನ್ನ ಪೂರ್ವ ಜನ್ಮದ ಪುಣ್ಯ ನನ್ನ ಸೌಭಾಗ್ಯವಾಗಿದೆ. ಯಡಿಯೂರಪ್ಪರವರನ್ನು ಇಂದು ರಾಜ್ಯದಲ್ಲಿ ದೇಶದಲ್ಲಿ ಗುರುತಿಸುತ್ತಿದ್ದಾರೆ ಎಂದರೆ ಅದಕ್ಕೆ ಕಾರಣ ಈ ಕ್ಷೇತ್ರದ ಮತದಾರರು. ಅದಕ್ಕಾಗಿ ನಾಲ್ಕು ಬಾರಿ ಮುಖ್ಯಮಂತ್ರಿಯಾಗಿ ಶಿಕ್ಷಣಕ್ಕೆ ನೀರಾವರಿಗೆ ಒತ್ತು ನೀಡಲು ಸಾಧ್ಯವಾಗಿದೆ. ಬಂಜಾರ ಬೋವಿ ಕೊರಚ ಕೊರಮ ಅಲ್ಪಸಂಖ್ಯಾತರಾಧಿಯಾಗಿ ಎಲ್ಲ ಜಾತಿ ಎಲ್ಲಾ ಸಮುದಾಯ ಎಲ್ಲ ವರ್ಗಗಳನ್ನು ಒಗ್ಗೂಡಿಸಿ ಒಂದೇ ತಾಯಿಯ ಮಕ್ಕಳಂತೆ ಕಾಣುತ್ತಿದ್ದಾರೆ.

ಶಿಕಾರಿಪುರ ಕ್ಷೇತ್ರದಿಂದ ವಿಜೇಂದ್ರ ನಾಮಪತ್ರ ಸಲ್ಲಿಸಿದ್ದಾರೆ ಎಂದರೆ ಅದಕ್ಕೆ ಕಾರಣ ಬಿ ಎಸ್ ಯಡಿಯೂರಪ್ಪ ಅಲ್ಲ ಬಿ ವೈ ರಾಘವೇಂದ್ರ ಕಾರಣರಲ್ಲ. ಯಡಿಯೂರಪ್ಪರವರು ತಮ್ಮ ರಾಜಕೀಯ ಚುನಾವಣೆಯಿಂದ ನಿವೃತ್ತಿ ಘೋಷಿಸುವ ಸಂದರ್ಭದಲ್ಲಿ ಇಲ್ಲಿನ ಹಿರಿಯರು ಪಕ್ಷದ ಕಾರ್ಯಕರ್ತರು ಒಟ್ಟಾಗಿ ಯಡಿಯೂರಪ್ಪರನ್ನು ಭೇಟಿ ಮಾಡಿ, ಮುಂಬರುವ ಚುನಾವಣೆಯಲ್ಲಿ ವಿಜೇಂದ್ರರನ್ನೇ ಶಿಕಾರಿಪುರದಿಂದ ಕಣಕ್ಕೆ ಇಳಿಸಬೇಕು ಎಂಬ ಆಗ್ರಹದಿಂದಾಗಿ ಯಡಿಯೂರಪ್ಪರವರು ನನ್ನ ಹೆಸರನ್ನು ಘೋಷಣೆ ಮಾಡಬೇಕಾಯಿತೇ ವಿನಹ ತಮ್ಮ ಕುಟುಂಬ ರಾಜಕಾರಣಕ್ಕಾಗಿ ಅಲ್ಲ.

ದೇಶವನ್ನು ಕಾಯುವ ಸೈನಿಕ ದೇಶದ ಒಂದು ಕಣ್ಣಾದರೆ ದೇಶದ  ಜನರಿಗೆ ಅನ್ನ ನೀಡುವ ರೈತ ಇನ್ನೊಂದು ಕಣ್ಣು ಹಾಗಾಗಿ ನಾನು ಒಬ್ಬ ರೈತನ ಮಗನಾಗಿ ತನ್ನ ಮುಂದಿನ ರಾಜಕೀಯ ಭವಿಷ್ಯವನ್ನು ರೈತರ ಏಳಿಕೆಗಾಗಿ ಮುಡುಪಾಗಿಡುತ್ತೇನೆ. ಕ್ರಿಯಾಶೀಲ ಸಂಸದ ಬಿ ವೈ ರಾಘವೇಂದ್ರ ಅವರ ಪರಿಶ್ರಮದಿಂದ ಶಿವಮೊಗ್ಗ ಶಿಕಾರಿಪುರ ರಾಣೆಬೆನ್ನೂರು ರೈಲು ಕಾಮಗಾರಿ ಆರಂಭವಾಗಲಿದೆ. , ರಾಜ್ಯದಲ್ಲಿಯೇ ಶಿಕಾರಿಪುರ ತಾಲ್ಲೂಕು ಅತಿ ಹೆಚ್ಚು ಬೋರ್ವೆಲ್ ಗಳನ್ನು ಹೊಂದಿದ್ದು, ವಿದ್ಯುತ್ ಸಮಸ್ಯೆ ಇನ್ನೂ ಇದೆ ಅದಕ್ಕಾಗಿ ಇನ್ನು ಹೆಚ್ಚಿನಗಳನ್ನು ಸಬ್ ಸ್ಟೇಷನ್ ಗಳನ್ನು ನಿರ್ಮಾಣ ಮಾಡುವ ಕೆಲಸ,  ಬಡವರಿಗೆ ಸೂರು ನೀಡುವ ಕೆಲಸ, ಮಾಡಲಿದ್ದೇನೆ .

ಬಗರಕುಂ ಬಗ್ಗೆ ವಿರೋಧ ಪಕ್ಷಗಳು ಇಂದು ಟೀಕೆ ಮಾಡುತ್ತಿದ್ದು, ಯಡಿಯೂರಪ್ಪರವರು ಏನು ಮಾಡುತ್ತಿದ್ದಾರೆ ಎಂದು ಟೀಕಿಸುವ  ಅವರು ಯೋಚನೆ ಮಾಡಬೇಕು  ಯಡಿಯೂರಪ್ಪ ರೈತರಿಗೆ ಶಕ್ತಿಯನ್ನು ತುಂಬಿದರ ಫಲವಾಗಿ ಇವತ್ತು ಅವರು ಸಾಗುಳಿದಾರರಾಗಿ ಉಳಿಯಲು ಸಾಧ್ಯವಾಗಿದೆ. ಈಗಿನ ಸರ್ಕಾರಿ ಆದೇಶದಂತೆ ಮೂರು ತಲಮಾರಿನ ಮಾಹಿತಿಯನ್ನು ಮಂಜುರಾತಿಗಾಗಿ  ನೀಡಬೇಕಾಗಿದೆ ಆದರೆ ಮುಂಬರುವ ದಿನಗಳಲ್ಲಿ ಕೇಂದ್ರ ಸರ್ಕಾರದಲ್ಲಿ ಕಾನೂನು ತಿದ್ದುಪಡಿ ಮಾಡಿ ಕೇವಲ ಒಂದು ತಲೆಮಾರಿನ ಮಾಹಿತಿಗೆ  ಸೀಮಿತಗೊಳಿಸಿ ತಿದ್ದುಪಡಿ ತಂದು, ರೈತರಿಗೆ ಜಮೀನು ಕೊಡುವ ಕೆಲಸವನ್ನು ಖಂಡಿತವಾಗಿ ಪ್ರಾಮಾಣಿಕವಾಗಿ ಮಾಡುತ್ತೇನೆ ಎಂದರು.

ಚಲನಚಿತ್ರ ನಟಿ ಶ್ರುತಿ ಮಾತನಾಡಿ, ಭಾರತದ ಸಂವಿಧಾನದಲ್ಲಿ ಮಹಿಳೆಯರಿಗೆ ಸಮಾನತೆ ನೀಡಿದ ಅಂಬೇಡ್ಕರ್ ರವರು ಮಹಿಳಾ ವಾದಿ ಎಂಬ ಹೆಗ್ಗಳಿಕೆಗೆ ಕಾರಣರಾಗಿದ್ದಾರೆ. ಅದೇ ರೀತಿ ರಾಜ್ಯದಲ್ಲಿ ಹೆಣ್ಣು ಮಕ್ಕಳು ಹುಟ್ಟಿದರೆ ಮೂಗು ಮುರಿಯುವಂತ ಸ್ಥಿತಿಯಲ್ಲಿದ್ದಾಗ, ಹೆಣ್ಣು ಮಕ್ಕಳ ರಕ್ಷಣೆಗಾಗಿ ಭಾಗ್ಯಲಕ್ಷ್ಮಿ ಯೋಜನೆಯನ್ನು ನೀಡಿ ರಾಜ್ಯದಲ್ಲಿ ಮಹಿಳೆಯರಿಗೆ ನ್ಯಾಯ ಒದಗಿಸಿ ಸ್ತ್ರೀವಾದಿ  ಮುಖ್ಯಮಂತ್ರಿ ಆಗಿದ್ದವರು ಬಿ ಎಸ್ ಯಡಿಯೂರಪ್ಪನವರು ಎಂದರು.

ಕಾರ್ಯಕ್ರಮದಲ್ಲಿ ಸಚಿವರಾದ ಎಂಟಿಬಿ ನಾಗರಾಜ್, ಆರಗ ಜ್ಞಾನೇಂದ್ರ, ಛಲವಾದಿ ನಾರಾಯಣಸ್ವಾಮಿ, ಸಂಸದರಾದ  ಉಮೇಶ್ ಜಾದವ್ ಬಿ ವೈ ರಾಘವೇಂದ್ರ ಬಂಜಾರ ಅಭಿವೃದ್ಧಿ  ನಿಗಮದ ಅಧ್ಯಕ್ಷ  ರಾಜೀವ್ ಕುಡುಚಿ,  ಸುರಪುರದ ರಾಜು ಗೌಡ, ಎಂಎಡಿಬಿ ಅಧ್ಯಕ್ಷ ಕೆ ಎಸ್ ಗುರುಮೂರ್ತಿ, ರಾಜ್ಯ ಉಗ್ರಾಣ ನಿಯಮದ ಅಧ್ಯಕ್ಷ ಎಚ್.ಟಿ ಬಳೆಗಾರ್, ವಿಧಾನಪರಿಷತ್ ಸದಸ್ಯರಾದ ರುದ್ರೇಗೌಡ, ಭಾರತಿ ಶೆಟ್ಟಿ, ಶಾಸಕ ಹರತಾಳು ಹಾಲಪ್ಪ, ಕಾಗೋಡು ತಿಮ್ಮಪ್ಪನವರ ಪುತ್ರಿ ಡಾ. ರಾಜನಂದಿನಿ ಹಿರಿಯ ಬಿಜೆಪಿ ಮುಖಂಡ ಪದ್ಮನಾಭ ಭಟ್ ಮುಂತಾದವರು ಉಪಸ್ಥಿತರಿದ್ದರು.

Leave A Reply

Your email address will not be published.

error: Content is protected !!