Ramadan 2023 | Karnataka CM | ಈ ಬಾರಿಯ ರಂಜಾನ್ ಹಬ್ಬದ ಉಡುಗೊರೆಯಾಗಿ ಮುಸ್ಲಿಂ ಸಮುದಾಯಕ್ಕೆ ಸಿಎಂ ನೋವಿನ ಉಡುಗೊರೆ ನೀಡಿದ್ದಾರೆ

0 38

ಶಿಕಾರಿಪುರ : ಈ ಬಾರಿಯ ರಂಜಾನ್ ಹಬ್ಬದ ಉಡುಗೊರೆಯಾಗಿ ರಾಜ್ಯ ಸರ್ಕಾರದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿರವರು ಸಮಸ್ತ ಮುಸ್ಲಿಂ ಸಮುದಾಯಕ್ಕೆ ನೋವಿನ ಉಡುಗೊರೆ ನೀಡಿದ್ದಾರೆ ಎಂದು ಶಿಕಾರಿಪುರ ಅಂಜುಮನ್ ಇಸ್ಲಾಂ ಸಮಿತಿಯ ಅಧ್ಯಕ್ಷರಾದ ಡಾ. ಹಾಫಿಜ್ ಕರ್ನಾಟಕಿ ಹೇಳಿದರು. 

ಸಮಿತಿ ವತಿಯಿಂದ ಪಟ್ಟಣದ ತಾಲ್ಲೂಕು ಕಛೇರಿ ಎದುರು ಪ್ರತಿಭಟನೆ ನಡೆಸಿ ತಹಶೀಲ್ದಾರ್ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, 1994 ರಲ್ಲಿ ಮುಖ್ಯಮಂತ್ರಿಯಾಗಿದ್ದ ವೀರಪ್ಪ ಮೊಯ್ಲಿ ರವರು ಶೇಕಡ 2% ಹಾಗೂ ಹೆಚ್.ಡಿ.ದೇವೇಗೌಡರ ಅವಧಿಯಲ್ಲಿ ಶೇಕಡ 2% ಹೀಗೆ ಒಟ್ಟು 4% ಮೀಸಲಾತಿ ದೊರೆಯುತ್ತಿತ್ತು. ಈಗ ಸದರಿ ಮೀಸಲಾತಿಯನ್ನು ಬಸವರಾಜ ಬೊಮ್ಮಾಯಿರವರ ಸರ್ಕಾರ ರದ್ದುಪಡಿಸಿರುವುದು ಅತ್ಯಂತ ನೋವಿನ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದ್ದರು. 

ಜಸ್ಟೀಸ್ ರಾಜೇಂದ್ರ ಸಾಚಾರ್ ವರದಿ ಅನ್ವಯ ಅಲ್ಪಸಂಖ್ಯಾತರು ಶೈಕ್ಷಣಿಕವಾಗಿ ಹಾಗೂ ಆರ್ಥಿಕವಾಗಿ ಹಿಂದುಳಿದವರಾಗಿದ್ದು ಅವರ ಏಳಿಗೆಗೆ ಮೀಸಲಾತಿ ಪ್ರಮಾಣ ಇನ್ನಷ್ಟು ಏರಿಕೆಯಾಗಬೇಕಾಗಿತ್ತು. ದುರಾದೃಷ್ಟಕರ.ಇರುವ ಮೀಸಲಾತಿಯನ್ನೇ ಕಿತ್ತು ಹಾಕಿರುವುದು ಸಮುದಾಯಕ್ಕೆ ವಿಶೇಷವಾಗಿ ಮಧ್ಯಮ ವರ್ಗದ ಸಮುದಾಯಕ್ಕೆ ಮರ್ಮಘಾತವನ್ನು ಉಂಟು ಮಾಡಿದೆ. ಈ ನಿರ್ಧಾರ ಕೈಗೊಳ್ಳುವ ಮುನ್ನ ಬೊಮ್ಮಾಯಿ ರವರು ಒಂದಷ್ಟು ಸಮಾಲೋಚನೆ ಮಾಡಬಹುದಾಗಿತ್ತು. 

ರಾಜ್ಯದ ಮುಸ್ಲಿಂ ಸಮುದಾಯದ ಸ್ಥಿತಿಗತಿಗಳನ್ನು ಅಧ್ಯಯನ ಮಾಡುವ ಪ್ರಯತ್ನ ಮಾಡಬಹುದಾಗಿತ್ತು‌. ಹಾಗೆಮಾಡದೆ ಒಂದು ರೀತಿ ಸೇಡಿನ ಕ್ರಮ ಎಂಬಂತೆ ತಿನ್ನುವ ಅನ್ನದ ತಟ್ಟೆಯನ್ನೇ ಕಿತ್ತು ಕೊಂಡಿರುವುದು ಅವರಿಗೆ ಶೋಭೆ ತರುವುದಿಲ್ಲ. ಈಗಲೂ ಕಾಲಮಿಂಚಿಲ್ಲ ತಕ್ಷಣವೇ ತಾವು ಕೈಗೊಂಡಿರುವ ನಿರ್ಧಾರವನ್ನು ಹಿಂದಕ್ಕೆ ಪಡೆದು ಅಲ್ಪಸಂಖ್ಯಾತರು ಈ ದೇಶದ ಸಂವಿಧಾನದ ಅಡಿಯಲ್ಲಿ ಬದುಕುತ್ತಿದ್ದಾರೆ ಅವರಿಗೂ ಮೀಸಲಾತಿ ಬೇಕು ಎಂಬ ಕನಿಷ್ಠ ಪ್ರೀತಿಯನ್ನು ತೋರಿಸುವ ನಿಟ್ಟಿನಲ್ಲಿ ಬೊಮ್ಮಾಯಿ ಅವರು ಚಿಂತಿಸುವಂತಾಗಲಿ ಎಂಬುದು ನಮ್ಮ ಬೇಡಿಕೆಯಾಗಿದೆ.

ಬೊಮ್ಮಾಯಿ ರವರು ಈ ನಿಟ್ಟಿನಲ್ಲಿ ಪರ್ಯಾಯ ಆದೇಶ ಮಾಡದಿದ್ದಲ್ಲಿ ಮುಂಬರುವ ಚುನಾವಣೆಯಲ್ಲಿ ಸಮುದಾಯ ಸ್ಪಷ್ಟ ಉತ್ತರ ನೀಡಲಿದೆ ಎಂಬ ಎಚ್ಚರಿಕೆಯನ್ನು ನೀಡುವುದು ನಮಗೆ ಅನಿವಾರ್ಯವಾಗಿದೆ. ದಯಮಾಡಿ ಕೇಂದ್ರ ಸರ್ಕಾರದೊಂದಿಗೆ ಚರ್ಚಿಸಿ ಈಗ ಹಿಂಪಡೆದಿರುವ ಮೀಸಲಾತಿಯನ್ನು ಪುನಃ ನೀಡುವ ಮೂಲಕ ರಂಜಾನ್ ಹಬ್ಬದ ಕೊಡುಗೆ ನೀಡಬೇಕು ಎಂದು ಒತ್ತಾಯಿಸಿದರು. 

ಈ ಸಂದರ್ಭದಲ್ಲಿ ಸಮಿತಿಯ ಪ್ರಧಾನ ಕಾರ್ಯದರ್ಶಿ, ಮಕ್ಬುಲ್ ಅಹಮದ್ ಉಪಾಧ್ಯಕ್ಷರಾದ ಕರೀಂ ಸಾಬ್, ಹಬಿಬುಲ್ಲ, ಖಜಾಂಚಿ ಅಶ್ರಫ್ ಉಲ್ಲಾ ಸೇರಿದಂತೆ ಸಮಿತಿಯ ಪದಾಧಿಕಾರಿಗಳು ಸದಸ್ಯರು ಹಾಜರಿದ್ದರು.

Leave A Reply

Your email address will not be published.

error: Content is protected !!