ಮೂವರು ಅಡಿಕೆ ಕಳ್ಳರ ಹೆಡೆಮುರಿ ಕಟ್ಟಿದ ಹೊಸನಗರ ಪೊಲೀಸರು
ಹೊಸನಗರ : ಪಟ್ಟಣದ ಶಿವಪ್ಪನಾಯಕ ರಸ್ತೆಯಲ್ಲಿರುವ ಸುಮೇಧಾ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಗೋದಾಮಿನಿಂದ ಅ.21 ರ ರಾತ್ರಿ ಅಡಿಕೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಖದೀಮರನ್ನು ಹೆಡೆಮುರಿ ಕಟ್ಟುವಲ್ಲಿ ಹೊಸನಗರ ಪೊಲೀಸರು ಯಶಸ್ವಿಯಾಗಿದ್ದಾರೆ.

ಘಟನಾ ವಿವರ :
ಅ. 21ರ ರಾತ್ರಿ ಹೊಸನಗರ ಟೌನ್ ನ ಐ.ಬಿ ರಸ್ತೆಯಲ್ಲಿರುವ ಸುಮೇಧಾ ವಿವಿದೋದ್ದೇಶ ಸೌಹಾರ್ದ ಸಹಕಾರಿ ಸಂಘದ ವಿದ್ಯಾಸಂಘದ ಗೋದಾಮಿನಲ್ಲಿ ಸಂಗ್ರಹಿಸಿದ್ದ 02 ಕ್ವಿಂಟಾಲ್ 72 ಕೆ.ಜಿ ಅಡಿಕೆಯನ್ನು ಕಳ್ಳತನ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಪಟ್ಟಣದ ಸಾಗರ ರಸ್ತೆಯ ಮಾವಿನಕೊಪ್ಪ ನಿವಾಸಿ ರವಿರಾಜ ಎನ್ ಬಿನ್ ಸತ್ಯನಾರಾಯಣ (32), ಸಾಗರ ರಸ್ತೆ ಗ್ಯಾಸ್ ಆಫೀಸ್ ಹತ್ತಿರದ ನಾಗರಾಜ ಪಿ ಬಿನ್ ಲೇಟ್ ಪುಟ್ಟಯ್ಯಾಚಾರಿ (31) ಮತ್ತು ಮಾವಿನಕೊಪ್ಪ ಎಪಿಎಂಸಿ ಮುಂಭಾಗದ ನಿವಾಸಿ ರಾಜೇಶ್ ಬಿನ್ ಲೇಟ್ ವಸಂತ (40) ಇವರುಗಳನ್ನ ಅ. 27 ರಂದು ಹೊಸನಗರ ಪೊಲೀಸರು ಪತ್ತೆಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಗಳಿಂದ ಕಳ್ಳತನ ಮಾಡಿದ್ದ 1.33 ಲಕ್ಷ ರೂ. ಮೌಲ್ಯದ 02 ಕ್ವಿಂಟಾಲ್ 72 ಕೆ.ಜಿ ಅಡಿಕೆಯನ್ನು ಮತ್ತು ಕಳ್ಳತನ ಮಾಡಲು ಬಳಸಿದ 01 ಬೈಕ್ ಅನ್ನು ವಶಪಡಿಸಿಕೊಂಡು ಹೊಸನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.