ಅಮ್ಮನಘಟ್ಟ ; ವಿಜೃಂಭಣೆಯಿಂದ ಜರುಗಿದ ಮೊದಲ ದಿನದ ಜಾತ್ರಾ ಮಹೋತ್ಸವ
ರಿಪ್ಪನ್‌ಪೇಟೆ: ಪುರಾಣ ಪ್ರಸಿದ್ದ ಅಮ್ಮನಘಟ್ಟದ ಜೇನುಕಲ್ಲಮ್ಮ ದೇವಿಯ ಜಾತ್ರಾ ಮಹೋತ್ಸವವು ಸಂಭ್ರಮ ಸಡಗರದೊಂದಿಗೆ ಇಂದು ಆರಂಭಗೊಂಡಿತು.
ಮಹಾಲಯ ಪಿತೃಪಕ್ಷದಲ್ಲಿ ನಡೆಯುವ ಈ ಜಾತ್ರಾ ಮಹೋತ್ಸವವು ಪ್ರಕೃತಿಯ ಮಡಿಲಿನಲ್ಲಿ ಕಲ್ಲಿನ ಹೆಬ್ಬಂಡೆಯಲ್ಲಿ ಜೇನುಕಲ್ಲಮ್ಮ ದೇವಿ ವಿರಾಜಮಾನವಾಗಿ ಅಲಂಕೃತ ಭೂಷಿತಳಾಗಿ ಬೇಡಿ ಬರುವ ಭಕ್ತರ ಕಷ್ಟಕಾರ್ಪಣ್ಯವನ್ನು ಪರಿಹರಿಸುವ ಮಹಾತಾಯಿಯಾಗಿದ್ದಾಳೆ.

ಬಹುಸಂಖ್ಯಾತ ಈಡಿಗ ಸಮುದಾಯದ ಕುಲ ದೇವತೆ ಜೇನುಕಲ್ಲಮ್ಮ ದೇವಿಗೆ ಭಾದ್ರಪದ ಪಿತೃ ಮಾಸದಲ್ಲಿ ಪ್ರತಿ ಮಂಗಳವಾರ ಹಾಗೂ ಶುಕ್ರವಾರ ಜೇನುಕಲ್ಲಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿ, ಮನೆಯಲ್ಲಿ ಪಿತ್ರುಗಳಿಗೆ ಎಡೆ ಇಡುವ ಸಂಪ್ರದಾಯ ಬೆಳೆಸಿಕೊಂಡು ಬರುವ ಮೂಲಕ ಜಾತ್ರಾ ಮಹೋತ್ಸವ ಆಚರಣೆ ವಾಡಿಕೆಯಲ್ಲಿದೆ.
ಪ್ರಧಾನ ಅರ್ಚಕ ಭಾಸ್ಕರ್ ಜೋಯ್ಸ್ ಇವರ ನೇತೃತ್ವದಲ್ಲಿ ಶ್ರದ್ಧಾ ಭಕ್ತಿಯೊಂದಿಗೆ ಸಕಲ ಭಕ್ತರ ಸಮ್ಮುಖದಲ್ಲಿ ಧಾರ್ಮಿಕ ವಿಧಿವಿಧಾನದಲ್ಲಿ ಪೂಜಾ ಕೈಂಕರ್ಯಗಳೊಂದಿಗೆ ವಿಶೇಷ ಅಲಂಕಾರ ಪೂಜೆಯಲ್ಲಿ ದೇವಿಯ ದರ್ಶನಾಶೀರ್ವಾದ ಪಡೆದು ಭಕ್ತ ಸಮೂಹ ದೇವಿಗೆ ಹರಕೆ ಹಣ್ಣು-ಕಾಯಿ ಉಡಿ ಸಮರ್ಪಣೆ ಮಾಡಿದರು. ಮೊದಲ ದಿನದ ಜಾತ್ರೆ ಆಗಿದ್ದರಿಂದ ಭಕ್ತ ಸಮೂಹ ವಿರಳವಾಗಿತ್ತು.

ಜೇನುಕಲ್ಲಮ್ಮ ದೇವಸ್ಥಾನ ಧರ್ಮದರ್ಶಿ ಸಮಿತಿಯ ಅಧ್ಯಕ್ಷ, ಮಾಜಿ ಶಾಸಕ ಬಿ.ಸ್ವಾಮಿರಾವ್, ಪ್ರಧಾನ ಕಾರ್ಯದರ್ಶಿ ಸುಧೀರ್ ಭಟ್, ಕೋಡೂರು ವಿಜೇಂದ್ರರಾವ್, ಹರೀಶ್, ಪುಟ್ಟಪ್ಪ, ಯೋಗೇಂದ್ರಪ್ಪ ಕಾರಕ್ಕಿ, ಡಾಕಪ್ಪ ಬೆಳ್ಳೂರು, ರತ್ನಮ್ಮ, ತಿಮ್ಮಪ್ಪ, ಕೋಡೂರು, ಮಾರುತಿಪುರ, ಗ್ರಾಮ ಪಂಚಾಯ್ತಿ ಅಧ್ಯಕ್ಷರು, ಸದಸ್ಯರು, ಇನ್ನಿತರರು ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.