“ಆಯುರ್ವೇದದಿಂದ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ” ;
‘ಆಪ್ತ’ ಆಯುರ್ವೇದ ಶಿಬಿರ ಉದ್ಘಾಟಿಸಿದ ಹೊಂಬುಜ ಶ್ರೀಗಳು
ರಿಪ್ಪನ್‌ಪೇಟೆ : ನಿತ್ಯ ಜೀವನದಲ್ಲಿ ಆಯುರ್ವೇದ ಪದ್ಧತಿಯನ್ನು ಆಹಾರದಲ್ಲಿ ಮತ್ತು ವಿಹಾರಗಳಲ್ಲಿ ಬಳಸಿಕೊಳ್ಳಬೇಕಾದ ಅಗತ್ಯವಿದೆ. ಆಧುನಿಕ ಜನಜೀವನದ ಜಂಜಾಟದಲ್ಲಿ ಭಾರತೀಯ ಅನಾದಿ, ಸನಾತನ ವೈದ್ಯ ಪದ್ಧತಿ, ಆಯುರ್ವೇದ ಪ್ರಸಕ್ತ ವಿಶ್ವಮಾನ್ಯವಾಗಿದೆ. ಸರ್ವರೋಗಗಳಿಗೂ ಚಿಕಿತ್ಸಾ ಪರಿಹಾರ ಉಲ್ಲೇಖಿಸಿದ ಋಷಿಮುನಿಗಳು ಪ್ರತಿಯೋರ್ವರ ಆರೋಗ್ಯ ರಕ್ಷಣೆಗೆ ಪರಿಸರದ ಗಿಡಮೂಲಿಕೆಗಳ ಬಳಕೆಯನ್ನು ದಾಖಲಿಸಿರುವುದನ್ನು ಸಂಶೋಧನಾ ವಿದ್ಯಾರ್ಥಿಗಳು ಇನ್ನಪುಟ ಅಧ್ಯಯನ ಮಾಡಿ ಆಯುರ್ವೇದ ಶಾಸ್ತ್ರವನ್ನು ನೊಬೆಲ್ ಪ್ರಶಸ್ತಿ ಗಳಿಸುವಷ್ಟು ವಿಶಿಷ್ಠ ಸ್ಥಾನಕ್ಕೇರಿಸಬೇಕು ಎಂದು ಹೊಂಬುಜ ಜೈನ ಮಠದ ಪೀಠಾಧೀಶರಾದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಗಳವರು ತಿಳಿಸಿದರು.
ಒಂದು ವಾರ ಅವಧಿಯಲ್ಲಿ ಜರುಗುವ ಆಯುರ್ವೇದ ಶಿಬಿರ ‘ಆಪ್ತ’ ವನ್ನು ಉದ್ಘಾಟಿಸಿ “ಸಾತ್ವಿಕ ಆಹಾರ ಸೇವಿಸಿ, ಉತ್ತಮ ವಿಹಾರ ಕೈಗೊಳ್ಳುವುದನ್ನು ವೈದ್ಯರಾಗುವ ಆಯುರ್ವೇದ ವಿದ್ಯಾರ್ಥಿಗಳು ಆಯುರ್ವೇದ ತಜ್ಞರಿಂದ ಮಾಹಿತಿ ಪಡೆದು ದೇಶದ ಆರೋಗ್ಯ ಕ್ಷೇತ್ರದಲ್ಲಿ ಆಯುರ್ವೇದ ಚಿಕಿತ್ಸಾ ಪದ್ಧತಿಗೆ ವಿಶಿಷ್ಟ ಸ್ಥಾನ-ಮಾನ-ಗೌರವ ದೊರೆಕಿಸುವಂತಾಗಲಿ” ಎಂದು ಶುಭ ಹಾರೈಸಿದರು.

ಜೈನ ಆಯುರ್ವೇದ ಪದ್ಧತಿ, ಔಷಧ ತಯಾರಿಕೆ, ಕುಂದಾದ್ರಿ ಬೆಟ್ಟದ ಅಮೂಲ್ಯ ಗಿಡಮೂಲಿಕೆಗಳ ಕುರಿತು ಶ್ರೀಗಳು ಉಲ್ಲೇಖಿಸುತ್ತಾ ಪೂಜ್ಯಪಾದ ಮುನಿಶ್ರೀಗಳ ಚಿಕಿತ್ಸಾ ಪದ್ಧತಿ ಸಂಶೋಧನೆಗೆ ಯೋಗ್ಯವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಹೊಂಬುಜ ಅತಿಶಯ ಶ್ರೀಕ್ಷೇತ್ರವು ಮಾನಸಿಕ, ಶಾರೀರಿಕ, ಸ್ವಾಸ್ಥ್ಯ ರಕ್ಷಣೆಗೆ ಪ್ರಥಮ ಪ್ರಾಶಸ್ತ್ಯ ನೀಡುತ್ತಲಿದೆಯೆಂದರು.
ವೈದ್ಯರಾದ ಡಾ. ಜೀವಂಧರ ಜೈನ್ ಉಪಸ್ಥಿತರಿದ್ದು ಮಾತನಾಡಿದರು. ಡಾ. ಅರ್ಹಂತ್ ಕುಮಾರ್ ಎ. ಡಾ. ಆನಂದ ಕಟ್ಟಿಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಿಬಿರದಲ್ಲಿ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಡಾ. ಸುಶ್ರೂತ್ ಜೈನ್ ಸ್ವಾಗತಿಸಿದರು. ಹಿತೇಶ್ ಕಾರ್ಯಕ್ರಮವನ್ನು ನಿರೂಪಿಸಿದರು.