ಆರ್ಯ ಈಡಿಗ ಸಮಾಜದಕ್ಕಾಗಿ ರಾಜ್ಯದಲ್ಲಿ ಒಂದೇ ಒಂದು ಸಮುದಾಯ ಭವನವಿಲ್ಲ ; ಪ್ರಕಾಶ್ ವಿಷಾದ

0 74

ಶಿಕಾರಿಪುರ : ಮೂಲತಃ ಗುಡ್ಡಗಾಡು ಪ್ರದೇಶಗಳಲ್ಲಿ ವಾಸಿಸಿಕೊಂಡು ಬಂದಿರುವ ಆರ್ಯ ಈಡಿಗ ಸಮಾಜದವರು ಆರ್ಥಿಕವಾಗಿ ಶೈಕ್ಷಣಿಕವಾಗಿ ರಾಜಕೀಯವಾಗಿ ಮುಂದುವರೆದಿದ್ದರೂ, ತಾಲ್ಲೂಕು ಸೇರಿದಂತೆ ರಾಜ್ಯದಲ್ಲಿ ಸಮಾಜಕ್ಕಾಗಿ ಒಂದೇ ಒಂದು ಸಮುದಾಯ ಭವನವಿಲ್ಲ ಎಂದು ಆರ್ಯ ಈಡಿಗ ಸಮಾಜದ ತಾಲ್ಲೂಕು ಅಧ್ಯಕ್ಷ ಪ್ರಕಾಶ್ ವಿಷಾದ ವ್ಯಕ್ತಪಡಿಸಿದರು.

ಪಟ್ಟಣದ ಸುದ್ದಿಮನೆಯಲ್ಲಿ ಗುರುವಾರದಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನಮ್ಮ ಸಮಾಜದ ಅನೇಕರು ಆರ್ಥಿಕವಾಗಿ ಶೈಕ್ಷಣಿಕವಾಗಿ ರಾಜಕೀಯವಾಗಿ, ಧಾರ್ಮಿಕವಾಗಿ ಎಲ್ಲಾ ಕ್ಷೇತ್ರದಲ್ಲಿಯೂ ಮುಂಚೂಣಿಯಲ್ಲಿದ್ದರೂ, ನಾವು ಸಾಮಾಜಿಕವಾಗಿ ಹಿಂದುಳಿದಿದ್ದೇವೆ. ಶೋಷಣೆಗೆ ಒಳಪಟ್ಟ ಎಲ್ಲಾ ಜನಾಂಗಕ್ಕೂ ಒಂದೇ ಜಾತಿ ಒಂದೇ ಕುಲ ಎಂದು ನ್ಯಾಯ ಒದಗಿಸಲು  ನಮ್ಮ ಸಮಾಜದ ಗುರುಗಳಾದ ನಾರಾಯಣ ಗುರುಗಳು ಶ್ರಮಿಸಿದ್ದಾರೆ. ರಾಜಕೀಯವಾಗಿ ಜಾಲಪ್ಪರವರು, ಗವಿಯಪ್ಪರವರು ಬಂಗಾರಪ್ಪರವರು ಸೇರಿದಂತೆ ಅನೇಕರು ನಮ್ಮ ರಾಜ್ಯದಲ್ಲಿ ಮಾತ್ರವಲ್ಲದೇ, ತಮಿಳುನಾಡು, ಆಂಧ್ರ, ಕೇರಳ ಹೀಗೆ ವಿವಿಧ ರಾಜ್ಯಗಳಲ್ಲಿ ರಾಜಕೀಯವಾಗಿ ಮುಂಚೂಣಿಯಲ್ಲಿದ್ದರಲ್ಲದೇ, ಈಗಲೂ ಕೂಡ ಅನೇಕ ಚುನಾಯಿತ ಜನಪ್ರತಿನಿಧಿಗಳಿದ್ದಾರೆ. ಹಾಗೆಯೇ ಸಿನಿಮಾರಂಗದಲ್ಲಿಯೂ ಡಾ.ರಾಜ್‍ಕುಮಾರ್, ಶಿವರಾಜ್ ಕುಮಾರ್, ಸೇರಿದಂತೆ ಅನೇಕರು ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನ ತಾವು ತೊಡಗಿಸಿಕೊಂಡು ಎಲ್ಲಾ ಸಮುದಾಯಗಳ ಪರವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅಲ್ಲದೇ, ರಾಜ್ಯಕ್ಕೆ ಬೆಳಕು ನೀಡುವುದಕ್ಕಾಗಿ ವಿವಿಧ ಭಾಗಗಳಿಗೆ ವಲಸೆ ಹೋಗಿರುವ ಶರಾವತಿ ಸಂತ್ರಸ್ಥರಲ್ಲಿ ಹೆಚ್ಚಿನ ಪಾಲು ನಮ್ಮ ಸಮಾಜದವರೆ ಆಗಿದ್ದಾರೆ. ಹೀಗೆ ಎಲ್ಲಾ ಸಮುದಾಯಗಳ ಎಲ್ಲಾ ರೀತಿಯ ಏಳ್ಗೆಗೆ ನಮ್ಮನ್ನು ನಾವು ತೊಡಗಿಸಿಕೊಂಡರೂ, ನಮ್ಮ ಸಮಾಜದ ನಾರಾಯಣ ಗುರುಗಳ ಮಠವಿಲ್ಲ ಮತ್ತು ಒಂದೇ ಒಂದು ಸಮುದಾಯ ಭವನವಿಲ್ಲ ಎಂದರು.

ನಮ್ಮ ಸಮಾಜದ ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘವು ಆರಂಭವಾಗಿ 75 ವರ್ಷಗಳು ಪೂರೈಸಿದ್ದು, ಇದಕ್ಕೋಸ್ಕರ ಡಿ 10 ರಂದು ಅಮೃತ ಮಹೋತ್ಸವದ ಸವಿ ನೆನಪಿಗಾಗಿ, ಬೆಂಗಳೂರಿನ ಅರಮನೆ ಮೈಧಾನದಲ್ಲಿ ರಾಜ್ಯ ಮಟ್ಟದ ಬೃಹತ್ ಜಾಗೃತ ಸಮಾವೇಶ ನಡೆಸಲು ತೀರ್ಮಾನಿಸಲಾಗಿದೆ. ಇದರಲ್ಲಿ ಸಮಾಜದ ಬಾಂಧವರು, ಯುವ ಮುಖಂಡರುಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸಮಾವೇಶವನ್ನ ಯಶಸ್ವಿಗೊಳಿಸಿಕೊಡುವಂತೆ ವಿನಂತಿಯನ್ನು ಮಾಡಿಕೊಂಡರು.

ಸಮಾಜದ ಏಳಿಗೆಗಾಗಿ 75 ವರ್ಷಗಳಿಂದ ಶ್ರಮಿಸಿರುವಂತಹ ಎಲ್ಲಾ ಮಹನೀಯರನ್ನು ಸ್ಮರಿಸುವಂತಹ ಹಾಗೆಯೇ ಸಮಾಜದ 26 ಪಂಗಡಗಳು ಒಂದೇ ವೇದಿಕೆಯಲ್ಲಿ ಸೇರಿ ನಮ್ಮ ಒಗ್ಗಟ್ಟನ್ನು ಪ್ರದರ್ಶಿಸಿ ನಾವೆಲ್ಲರೂ ಒಟ್ಟಿಗೆ ಎಂಬ ಸ್ಪಷ್ಟ ಸಂದೇಶವನ್ನು ಸರ್ಕಾರಕ್ಕೆ ನೀಡುವಂತಹ ಕೆಲಸ ಈ ಸಮಾವೇಶದಲ್ಲಿ ನಡೆಯಲಿದ್ದು, ಕರ್ನಾಟಕ ಪ್ರದೇಶ ಆರ್ಯ ಈಡಿಗ ಸಮಾಜ ಬಹಳಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದು ಅವುಗಳಿಗೆ ಪರಿಹಾರವನ್ನು ಕಂಡುಕೊಳ್ಳುವ ಪ್ರಯತ್ನ ಇದಾಗಿದೆ. ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳಿಗೆ ಈ ಭಾಗದ ಮುಳುಗಡೆ ಸಂತ್ರಸ್ತರಿಗೆ ಭೂಮಿಯ ಹಕ್ಕನ್ನ ನೀಡುವ ಮತ್ತು ಬಗರ್ ಹುಕುಂ ರೈತರಿಗೆ ಹಕ್ಕುಪತ್ರ ವಿತರಣೆ ಮಾಡುವಂತೆ ಒತ್ತಾಯಿಸುವುದು. ಈಡಿಗ ಅಭಿವೃದ್ಧಿ ನಿಗಮದ ಅಭಿವೃದ್ಧಿಗೆ ಅನುದಾನವನ್ನು ಬಿಡುಗಡೆ ಗೊಳಿಸುವುದು ಮತ್ತು ಇತಿಹಾಸ ಪ್ರಸಿದ್ಧ ಸಿಗಂದೂರು ಚೌಡೇಶ್ವರಿ ದೇವಸ್ಥಾನದ ಭೂ ಸಮಸ್ಯೆ, ಸರ್ಕಾರದ ಹಸ್ತಕ್ಷೇಪ ಕುರಿತಾಗಿ ನ್ಯಾಯವನ್ನು ಒದಗಿಸಿಕೊಡುವಂತೆ ಮನವಿಯನ್ನು ನೀಡಲಾಗುವುದು ಎಂದರು.

ಈ ನಿಟಿನಲ್ಲಿ ಈ ಅಮೃತ ಮಹೋತ್ಸವ ಹಾಗೂ ಬೃಹತ್ ಜಾಗೃತ ಸಮಾವೇಶದಲ್ಲಿ ಪಕ್ಷಾತೀತವಾಗಿ ಸಮಾಜದ ಮುಖಂಡರುಗಳು ಬಾಂಧವರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಮುಖ್ಯಮಂತ್ರಿಗಳ ಗಮನ ಸೆಳೆಯುವ ಮೂಲಕ ನಮ್ಮ ಮೂಲಭೂತ ಸಮಸ್ಯೆಗಳನ್ನು ಶಾಶ್ವತವಾಗಿ ಪರಿಹಾರ ಕಂಡುಕೊಳ್ಳುವಲ್ಲಿ ಸಹಕಾರಿಯಾಗಬೇಕು ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ತಾಲೂಕು ಹಿಂದುಳಿದ ವರ್ಗಗಳ ಒಕ್ಕೂಟದ ಅಧ್ಯಕ್ಷರಾದ ಹುಚ್ಚರಾಯಪ್ಪ , ತಾಲೂಕು ಆದರೆ ಈಗ ಮಹಾಮಂಡಲದ ಅಧ್ಯಕ್ಷ ಈಶ್ವರಪ್ಪ, ಸಮಾಜದ ಮುಖಂಡರಾದ ಚಿಕ್ಕಲವತ್ತಿ ಚೌಡಪ್ಪ, ನಾರಾಯಣ, ಬಸವರಾಜ್ ಇ ಹೆಚ್, ಉಮೇಶ್ ಕೋಡಿಹಳ್ಳಿ ಮುಂತಾದವರು ಪಾಲ್ಗೊಂಡಿದ್ದರು.

Leave A Reply

Your email address will not be published.

error: Content is protected !!