ಇತ್ತೀಚೆಗೆ ನಿಧನರಾದ ರೈತ ನಾಯಕರಿಗೆ ಶ್ರದ್ಧಾಂಜಲಿ

0 9

ಶಿವಮೊಗ್ಗ: ಇತ್ತೀಚೆಗೆ ನಿಧನರಾದ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಜಿ.ಎಂ. ಮುರುಗೇಂದ್ರಪ್ಪ ಹಾಗೂ ಕಾರ್ಯಾಧ್ಯಕ್ಷ ಡಿ.ಎಚ್.ರಾಮಚಂದ್ರಪ್ಪ ಅವರ ಶ್ರದ್ಧಾಂಜಲಿ ಸಭೆ ರೈತ ಸಂಘದ ಕಚೇರಿಯಲ್ಲಿ ಇಂದು ಬೆಳಿಗ್ಗೆ ನಡೆಯಿತು.


ಡಿ.ಎಚ್.ರಾಮಚಂದ್ರಪ್ಪ ಮತ್ತು ಜಿ.ಎಂ. ಮುರುಗೇಂದ್ರಪ್ಪ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ರೈತ ಸಂಘದ ರಾಜ್ಯಾಧ್ಯಕ್ಷ ಹೆಚ್.ಆರ್. ಬಸವರಾಜಪ್ಪ, ಮುರುಗೇಂದ್ರಪ್ಪ ಮತ್ತು ರಾಮಚಂದ್ರಪ್ಪ ರೈತ ಸಂಘದ ಹೋರಾಟಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡವರು ಇವರ ರೈತ ಪರವಾದ ಸೇವೆಗಳು ಪ್ರಶಂಸನೀಯ. ಇವರ ಅಕಾಲಿಕ ಮರಣ ರೈತ ಸಂಘಕ್ಕೆ ತುಂಬಲಾರದ ನಷ್ಟ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದರು.


ಈ ವರ್ಷ ರಾಜ್ಯದಲ್ಲಿ ಭೀಕರ ಬರಗಾಲವಿದೆ. ಮಳೆಯ ತೀವ್ರ ಕೊರತೆ ಉಂಟಾಗಿ ಅಣೆಕಟ್ಟೆಗಳು ಸಹ ತುಂಬಿಲ್ಲ. ಆದ್ದರಿಂದ ಕೇಂದ್ರ ಸರ್ಕಾರದ ಹಣವನ್ನು ಕಾಯದೆ ರಾಜ್ಯ ಸರ್ಕಾರ ಬೆಳೆ ಪರಿಹಾರವಾಗಿ ಎಕರೆಗೆ 25,000 ರೂ.ಗಳನ್ನು ಘೋಷಿಸಿ, ಬಗರ್‌ಹುಕುಂ ಸಾಗುವಳಿದಾರರಿಗೂ ಬರಗಾಲ ಪರಿಹಾರ ನೀಡಬೇಕು.
ಬ್ಯಾಂಕ್, ಸಹಕಾರಿ ಸಂಸ್ಥೆ, ಫೈನಾನ್ಸ್ ಗಳು ಸಾಲ ವಸೂಲಾತಿಯನ್ನು ತಡೆಹಿಡಿಯಬೇಕು. ಸಂಪೂರ್ಣ ಸಾಲ ಮನ್ನಾ ಮಾಡಬೇಕು. ಅರಣ್ಯ ಇಲಾಖೆ ರೈತರನ್ನು ಒಕ್ಕಲೆಬ್ಬಿಸಬಾರದು, ಸರ್ಕಾರ ಅರಣ್ಯ ಕಾಯ್ದೆಗೆ ತಿದ್ದುಪಡಿ ತಂದು ಅನುಭವದಲ್ಲಿರುವವರಿಗೆ ಸಾಗುವಾಳಿ ಪತ್ರ ನೀಡಬೇಕು, ಬೆಳೆ ವಿಮೆ ಪಡೆದ ರೈತರಿಗೆ ಮಧ್ಯಂತರ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.


ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷ ಹಿಟ್ಟೂರು ರಾಜು, ಟಿ.ಎಂ. ಚಂದ್ರಪ್ಪ, ಜಿಲ್ಲಾಧ್ಯಕ್ಷ ಎಸ್.ಶಿವಮೂರ್ತಿ,
ಜಿಲ್ಲಾ ಕಾರ್ಯಾಧ್ಯಕ್ಷ ಕೆ.ರಾಘವೇಂದ್ರ, ಪಿ.ಡಿ. ಮಂಜಪ್ಪ, ಜಿಲ್ಲಾ ಉಪಾಧ್ಯಕ್ಷ ಪಿ.ಶೇಖರಪ್ಪ, ಆರ್.ಚಂದ್ರಶೇಖರ್, ಮಹದೇವಪ್ಪ, ನಂಜುಂಡಪ್ಪ, ಗ್ರಾಮಾಂತರ ಅಧ್ಯಕ್ಷರಾದ ಕಸಟ್ಟಿ ರುದ್ರೇಶ್, ಶಿವಮೊಗ್ಗ ತಾ. ಅಧ್ಯಕ್ಷರಾದ ಸಿ.ಚಂದ್ರಪ್ಪ, ಭದ್ರಾವತಿ ತಾ. ಅಧ್ಯಕ್ಷರಾದ ಪಂಚಾಕ್ಷರಿ, ಶಿಕಾರಿಪುರ ತಾ.ಅಧ್ಯಕ್ಷರಾದ ಶಿವಮೂರ್ತಿ, ಮೊದಲಾದವರು ಹಾಜರಿದ್ದರು.

Leave A Reply

Your email address will not be published.

error: Content is protected !!