ಇಬ್ಬರು ಮುಸ್ಲಿಂ ವಿದ್ಯಾರ್ಥಿಗಳಿಗೆ ‘ನೀವು ಪಾಕಿಸ್ತಾನಕ್ಕೆ ಹೋಗಿ, ಇದು ಹಿಂದೂಗಳ ದೇಶ’ ಎಂದ ಶಿಕ್ಷಕಿಗೆ ಸಂಕಷ್ಟ

0 6

ಶಿವಮೊಗ್ಗ : 5ನೇ ತರಗತಿಯ ಇಬ್ಬರು ಮುಸ್ಲಿಂ ವಿದ್ಯಾರ್ಥಿಗಳಿಗೆ “ಪಾಕಿಸ್ತಾನಕ್ಕೆ ಹೋಗಿ” ಎಂದು ಹೇಳುವ ಮೂಲಕ ಶಿಕ್ಷಕಿಯೊಬ್ಬರು ಸಂಕಷ್ಟಕ್ಕೆ ಸಿಲುಕಿರುವ ಘಟನೆ ಶಿವಮೊಗ್ಗ ನಗರದ ಸರ್ಕಾರಿ ಉರ್ದು ಶಾಲೆಯೊಂದರಲ್ಲಿ ನಡೆದಿದ್ದು, ಇದೀಗ ಶಿಕ್ಷಣ ಇಲಾಖೆ ಶಿಕ್ಷಕಿಯನ್ನು ವರ್ಗಾವಣೆ ಮಾಡಿದ್ದು, ತನಿಖೆ ನಡೆಯುತ್ತಿದೆ.

ಏನಿದು ಘಟನೆ ?

5ನೇ ತರಗತಿಯ ಇಬ್ಬರು ವಿದ್ಯಾರ್ಥಿಗಳು ತರಗತಿಯಲ್ಲಿ ಜಗಳವಾಡುತ್ತಿದ್ದರಿಂದ ಶಿಕ್ಷಕಿಗೆ ಕೋಪ ಬಂದಿದೆ. ಆಕೆ ಇಬ್ಬರನ್ನು ಗದರಿಸಿದ ನಂತರವೂ ವಿದ್ಯಾರ್ಥಿಗಳು ಜಗಳ ಮುಂದುವರಿಸಿದಾಗ ಸಿಟ್ಟಿಗೆದ್ದ ಆಕೆ ‘ಇದು ನಿಮ್ಮ ದೇಶ ಅಲ್ಲ, ಪಾಕಿಸ್ತಾನಕ್ಕೆ ಹೋಗಿ’ ಎಂದು ವಿದ್ಯಾರ್ಥಿಗಳಿಗೆ ಸೂಚಿಸಿದ್ದಾರೆ. ವಿದ್ಯಾರ್ಥಿಗಳ ಪೋಷಕರ ಪ್ರಕಾರ, ಶಿಕ್ಷಕಿ ‘ಪಾಕಿಸ್ತಾನಕ್ಕೆ ಹೋಗಿ, ಇದು ಹಿಂದೂಗಳ ದೇಶ’ ಎಂದು ಹೇಳಿದ್ದಾಗಿ ವರದಿಯಾಗಿದೆ.

ಈ ವಿಚಾರವನ್ನು ಮಕ್ಕಳು ಪೋಷಕರಿಗೆ ತಿಳಿಸಿದ್ದಾರೆ. ನಂತರ ಜಾತ್ಯತೀತ ಜನತಾದಳ ಅಲ್ಪಸಂಖ್ಯಾತರ ವಿಭಾಗದ ಜಿಲ್ಲಾ ಘಟಕದ ಅಧ್ಯಕ್ಷ ಎ ನಜ್ರುಲ್ಲಾ ಅವರು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ದೂರು ನೀಡಿದ್ದಾರೆ. ಈ ದೂರಿನ ಆಧಾರದ ಮೇಲೆ ಇಲಾಖೆಯು ಶಿಕ್ಷಕಿಯನ್ನು ವರ್ಗಾವಣೆ ಮಾಡಿದೆ ಎಂದು ಖಾಸಗಿ ಸುದ್ದಿ ಸಂಸ್ಥೆ ಹಿಂದುಸ್ಥಾನ ಟೈಮ್ಸ್ (ಇಂಗ್ಲಿಷ್) ವರದಿ ಮಾಡಿದೆ.

ಮಾಧ್ಯಮದವರೊಂದಿಗೆ ಮಾತನಾಡಿದ ಬ್ಲಾಕ್ ಶಿಕ್ಷಣಾಧಿಕಾರಿ ಬಿ. ನಾಗರಾಜು, ಅವರು ಕನ್ನಡ ಭಾಷೆಯ ಶಿಕ್ಷಕಿಯಾಗಿದ್ದು, ಕಳೆದ 26 ವರ್ಷಗಳಿಂದ ಸಾಮಾನ್ಯ ಉದ್ಯೋಗಿಯಾಗಿದ್ದಾರೆ. ಕಳೆದ ಎಂಟು ವರ್ಷಗಳಿಂದ ಅದೇ ಶಾಲೆಯಲ್ಲಿ ಪಾಠ ಮಾಡುತ್ತಿದ್ದಾರೆ ಎಂದರು. ಶಿಕ್ಷಕಿಯನ್ನು ಸದ್ಯ ಬೇರೆ ಶಾಲೆಗೆ ವರ್ಗಾವಣೆ ಮಾಡಲಾಗಿದ್ದು, ಈ ಕುರಿತು ಇಲಾಖಾ ತನಿಖೆ ನಡೆಸಲಾಗುವುದು. ವಿಚಾರಣೆ ವರದಿ ಬಂದ ನಂತರ ಶಿಕ್ಷಕಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

Leave A Reply

Your email address will not be published.

error: Content is protected !!