ಎಂಸಿಎ ಫೆಸ್ಟ್ ನಲ್ಲಿ ಸ್ಟಾಂಡ್ ಅಪ್ ಕಾಮಿಡಿಯನ್ ರಾಘವೇಂದ್ರ ಆಚಾರ್ಯ | ಯುವಕರು ಸಂಭ್ರಮಿಸುವ ಗುಣ ಬೆಳೆಸಿಕೊಳ್ಳಿ
ಶಿವಮೊಗ್ಗ : ಬದುಕಿನಲ್ಲಿ ಎದುರಾಗುವ ಎಲ್ಲಾ ಸನ್ನಿವೇಶಗಳನ್ನು ಸಂಭ್ರಮಿಸುವ ಗುಣ ಯುವ ಸಮೂಹ ಬೆಳೆಸಿಕೊಳ್ಳಬೇಕಿದೆ ಎಂದು ಖ್ಯಾತ ಹಾಸ್ಯ ಭಾಷಣಕಾರರಾದ ರಾಘವೇಂದ್ರ ಆಚಾರ್ಯ ಹೇಳಿದರು.
ನಗರದ ಜೆ.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನ ಎಂಸಿಎ ವಿಭಾಗದ ವತಿಯಿಂದ ಬುಧವಾರ ಪದವಿ ಕಾಲೇಜು ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ‘ಟೆಕ್ ಕ್ರಂಚ್’ ಯುಜಿ ಫೆಸ್ಟ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಆಧುನಿಕ ಶೈಲಿಯ ಬದುಕಿನಲ್ಲಿ ಯುವ ಸಮೂಹ ದ್ವಂದ್ವಗಳೊಳಗೆ ಸಿಲುಕಿಕೊಂಡಿದ್ದಾರೆ. ತನ್ನನ್ನು ತಾನು ಹುಡುಕಿಕೊಂಡು ದೂರದ ಊರುಗಳಿಗೆ ತಿರುಗಾಡುತ್ತಾರೆ ವಿನಃ. ತನ್ನ ಸುತ್ತಲಿನ ವಾತಾವರಣದಿಂದಲೇ ಬದುಕಿಗೆ ಪ್ರೇರಣೆ ಪಡೆಯುವ ಅವಕಾಶಗಳನ್ನು ಹುಡುಕಿಕೊಳ್ಳುವುದರಲ್ಲಿ ಸೋತುಬಿಟ್ಟಿದ್ದಾರೆ ಎಂದು ಹೇಳಿದರು.
ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷರಾದ ಜಿ.ಎಸ್.ನಾರಾಯಣರಾವ್ ಮಾತನಾಡಿ, ಮನುಷ್ಯ ಸದಾ ಚಟುವಟಿಕೆಗಳಿಂದ ಕೂಡಿರಬೇಕು. ಬದುಕು ಹೇಗೊ ಆಯಿತು ಎಂಬ ತಾತ್ಸಾರಕ್ಕಿಂತ, ಹೀಗೆ ಆಗಬೇಕು ಎಂಬ ಸ್ಪಷ್ಟನೆ ಇರಲಿ. ಮನುಷ್ಯನ ಜೀವನದಲ್ಲಿ ಎಲ್ಲಾ ಪ್ರಾಕಾರಗಳು ಇರಬೇಕು. ಸಂತೋಷವೆಂಬ ಪ್ರಕಾರ ಮೇಲುಗೈ ಸಾಧಿಸಬೇಕು.
ಯಾವಾಗಲೂ ನಗುವ ವ್ಯಕ್ತಿ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸುವ ಶಕ್ತಿ ಹೊಂದಿರುತ್ತಾನೆ. ಅಂತಹ ಉಲ್ಲಾಸದಾಯಕ ಬದುಕು ನಿಮ್ಮದಾಗಬೇಕಿದೆ. ನಿಜವಾದ ನಾಯಕ ಮತ್ತಷ್ಟು ನಾಯಕರನ್ನು ಸೃಷ್ಟಿಸುತ್ತಾನೆ. ಕೇವಲ ಹಿಂಬಾಲಕರನ್ನು ಸೃಷ್ಟಿಸಿಕೊಳ್ಳುವವರು ಎಂದಿಗೂ ನಾಯಕರಾಗಲಾರ ಎಂದು ಹೇಳಿದರು.

ಹಾಸ್ಯ ಭಾಷಣಕಾರ ಉಮೇಶ್ ಗೌಡ ಮಾತನಾಡಿದರು. ರಾಷ್ಟ್ರೀಯ ಶಿಕ್ಷಣ ಸಮಿತಿ ನಿರ್ದೇಶಕರಾದ ಟಿ.ಆರ್.ಅಶ್ವಥನಾರಾಯಣ ಶೆಟ್ಟಿ, ಶೈಕ್ಷಣಿಕ ಆಡಳಿತಾಧಿಕಾರಿ ಎಂ.ಎನ್.ರಾಮಚಂದ್ರ, ಜೆ.ಎನ್.ಎನ್.ಸಿ.ಇ ಪ್ರಾಂಶುಪಾಲರಾದ ಡಾ.ಪಿ.ಮಂಜುನಾಥ, ಎಂಸಿಎ ವಿಭಾಗದ ನಿರ್ದೇಶಕರಾದ ಡಾ.ಪ್ರಭುದೇವ, ಎಂಬಿಎ ವಿಭಾಗದ ನಿರ್ದೇಶಕರಾದ ಡಾ.ಶ್ರೀಕಾಂತ್, ಕಾರ್ಯಕ್ರಮ ಸಂಯೋಜಕರಾದ ಕೆ.ಎಲ್.ಅರುಣ್ ಕುಮಾರ್, ಹೆಚ್.ಟಿ.ಮಂಜುನಾಥ, ವಿದ್ಯಾರ್ಥಿ ಸಂಯೋಜಕರಾದ ಅಮಿತ್, ಕವನ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು
ಪದವಿ ಕಾಲೇಜುಗಳ ಸುಮಾರು ಮೂವತ್ತಕ್ಕು ಹೆಚ್ಚು ತಂಡಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು.