ಎಲ್ಲಾ ಗ್ರಾಪಂ ಪಿಡಿಒಗಳು ತಮ್ಮ ಕಾರ್ಯನಿರ್ವಹಣೆಯ ಸ್ಥಳದಲ್ಲಿಯೇ ವಾಸಿಸುವಂತೆ ಆಗ್ರಹಿಸಿ ಸಿಎಂಗೆ ಮನವಿ

0 175

ಶಿವಮೊಗ್ಗ: ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿ ಪಿಡಿಒಗಳು ತಮ್ಮ ಕಾರ್ಯನಿರ್ವಹಣೆಯ ಸ್ಥಳದಲ್ಲಿಯೇ ವಾಸಿಸಬೇಕು ಎಂದು ಆಗ್ರಹಿಸಿ ಅಖಿಲ ಕರ್ನಾಟಕ ಡಿ.ಕೆ. ಶಿವಕುಮಾರ್ ಅಭಿಮಾನಿಗಳ ಸಂಘ ಇಂದು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದೆ.


ಗ್ರಾಮಗಳು ಗಟ್ಟಿಗೊಂಡಾಗ ಮಾತ್ರ ಅಭಿವೃದ್ಧಿ ಆಗುತ್ತದೆ. ಈ ಹಿನ್ನೆಲೆಯಲ್ಲಿ ಸರ್ಕಾರದ ಜನಪರ ಯೋಜನೆಗಳು ಪಂಚಾಯತ್ ಮಟ್ಟದಲ್ಲಿ ಅನುಷ್ಠಾನಗೊಳ್ಳಬೇಕಾಗಿದೆ. ಈ ಅನುಷ್ಠಾನಕ್ಕೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಪಾತ್ರ ಬಹಳ ಮುಖ್ಯವಾಗಿರುತ್ತದೆ. ಹಾಗಾಗಿ ಪಿಡಿಒಗಳು ತಾವು ಕೆಲಸ ಮಾಡುವ ಸ್ಥಳದಲ್ಲಿ ವಾಸಿಸಿದರೆ ಯೋಜನೆಗಳು ತಲುಪಲು ಅನುಕೂಲವಾಗುತ್ತದೆ ಎಂದು ಮನವಿದಾರರು ತಿಳಿಸಿದರು.


ನರೇಗಾ, ಕುಡಿಯುವ ನೀರು, ನೈರ್ಮಲ್ಯ, ಸ್ವಚ್ಛ ಭಾರತ ಮಿಷನ್, ಮುಖ್ಯಮಂತ್ರಿ ಗ್ರಾಮ ವಿಕಾಸ ಜಲಾಮೃತ, ಗ್ರಾಮೀಣ ಸಂಪರ್ಕ, ಸುವರ್ಣ ಗ್ರಾಮೋದಯ ಇದರ ಜೊತೆಗೆ ಆನ್‌ಲೈನ್ ಸೇವೆಗಳು, ಸರ್ಕಾರದ ಪಂಚ ಗ್ಯಾರಂಟಿಗಳು. ಅದರಲ್ಲಿ ಮಹಿಳೆಯರಿಗೆ ನೀಡುವ ಗೃಹಲಕ್ಷ್ಮಿ ಯೋಜನೆ ಅನುಷ್ಠಾನ ಮುಂತಾದ ಎಲ್ಲಾ ಜನಪರ ಯೋಜನೆಗಳು ಸಮರ್ಥವಾಗಿ ಜಾರಿಯಾಗಬೇಕಾದರೆ ಪಿಡಿಒಗಳ ಪಾತ್ರ ಮಹತ್ವದ್ದಾಗಿದೆ ಎಂದು ಮನವಿದಾರರು ಹೇಳಿದ್ದಾರೆ.


ಜೊತೆಗೆ ಜಿಲ್ಲೆಯಲ್ಲಿ ಮಳೆ ಇಲ್ಲ. ಬರಪೀಡಿತ ಎಂದು ಈಗಾಗಲೇ ಘೋಷಿತವಾಗಿದೆ. ಇಂತಹ ಸಂದರ್ಭದಲ್ಲಿ ಪಿಡಿಒಗಳ ಜವಾಬ್ದಾರಿ ಹೆಚ್ಚಿದೆ. ಆದರೆ ಈ ಪಿಡಿಒಗಳು  ಹಳ್ಳಿಗಳಲ್ಲಿ ವಾಸ ಮಾಡದೆ ನಗರದಲ್ಲಿ ಇರುತ್ತಾರೆ. ಸಮಯಕ್ಕೆ ಸರಿಯಾಗಿ ಬರಲು ಆಗುವುದಿಲ್ಲ. ಜೊತೆಗೆ ಬೇಗನೆ ಹೋಗಿಬಿಡುತ್ತಾರೆ. ಈಗಾಗಲೇ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪಿಡಿಒಗಳು ಕಾರ್ಯನಿರ್ವಹಣೆ ಸ್ಥಳದಲ್ಲೆ ವಾಸಿಸಬೇಕೆಂದು ಸೂಚಿಸಿದ್ದಾರೆ. ಹಾಗಾಗಿ ಪಿಡಿಒಗಳಿಗೆ ಕಾರ್ಯ ಸ್ಥಳದಲ್ಲೇ ವಾಸಿಸುವಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.


ಈ ಸಂದರ್ಭದಲ್ಲಿ ಜಿಲ್ಲಾ ವಕ್ತಾರ ರಮೇಶ್ ಶೆಟ್ಟಿ ಶಂಕರಘಟ್ಟ, ಕೆಪಿಸಿಸಿ ಸಂಯೋಜಕ ಆರ್. ಮೋಹನ್, ಹಿಂದುಳಿದ ವರ್ಗದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಡಿ.ಮಂಜುನಾಥ್, ಪ್ರಮುಖರಾದ ಸಿದ್ದಪ್ಪ, ತಾಕ್ರಾ ನಾಯ್ಕ, ಶಿಕಾರಿಪುರ ಸುರೇಶ್ ಸೇರಿದಂತೆ ಹಲವರಿದ್ದರು.

Leave A Reply

Your email address will not be published.

error: Content is protected !!