ಓಮ್ನಿ ಮತ್ತು ಟಿಪ್ಪರ್ ಲಾರಿ ನಡುವೆ ಭೀಕರ ಅಪಘಾತ, 06 ಮಕ್ಕಳು ಸೇರಿ 12 ಮಂದಿಗೆ ಗಂಭೀರ ಗಾಯ !

0 4,705

ಹೊಸನಗರ : ಮಾರುತಿ ಓಮ್ನಿ ಹಾಗೂ ಟಿಪ್ಪರ್ ಲಾರಿ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ 12 ಮಂದಿಗೆ ಗಂಭೀರ ಗಾಯವಾದ ಘಟನೆ ತಾಲೂಕಿನ ಎಂ ಗುಡ್ಡೇಕೊಪ್ಪದಲ್ಲಿ ನಡೆದಿದೆ.

ಓಮ್ನಿಯಲ್ಲಿ ಸಂಚರಿಸುತ್ತಿದ್ದ ಒಂದೇ ಕುಟುಂಬದ 06 ಮಕ್ಕಳು ಸೇರಿದಂತೆ 12 ಮಂದಿಗೆ ಗಂಭೀರ ಗಾಯಗಳಾಗಿದ್ದು ಇವರೆಲ್ಲರನ್ನು ಕೋಡೂರು ಗ್ರಾಪಂ ವ್ಯಾಪ್ತಿಯ ಕಾರಕ್ಕಿ ಗ್ರಾಮದ ಬುಲ್ಡೋಜರ್ ಗುಡ್ಡ ನಿವಾಸಿಗಳಾದ ಸತ್ಯಪ್ಪ, ಶರಾವತಿ, ಜಾನಕಮ್ಮ, ಲೀಲಾವತಿ, ಪ್ರಶಾಂತ ಹಾಗೂ 11 ವರ್ಷದೊಳಗಿನ ಮಕ್ಕಳಾದ ಶ್ರವಣ್, ಶ್ರೇಯಾನ್, ಶ್ರೀಮತಿ, ಶ್ರೀಶ, ಶ್ರಾವಣಿ, ಶ್ರಾವ್ಯ ಎಂದು ಗುರುತಿಸಲಾಗಿದೆ. ಇವರೆಲ್ಲರು ಗೋಳಿಗರಡಿ ದೇವಸ್ಥಾನಕ್ಕೆ ಭೇಟಿ ನೀಡಿ ಊರಿಗೆ ವಾಪಾಸ್ ಆಗುತ್ತಿದ್ದರು ಎಂದು ತಿಳಿದುಬಂದಿದೆ.

ಎಂ. ಗುಡ್ಡೆಕೊಪ್ಪ ಗ್ರಾಮ ಪಂಚಾಯತಿ ಮುಂಭಾಗದಲ್ಲಿ ಈ ಘಟನೆ ನಡೆದಿದ್ದು ಅಪಘಾತದ ರಭಸಕ್ಕೆ ಓಮ್ನಿ ಸಂಪೂರ್ಣ ಜಖಂಗೊಂಡಿದ್ದು ಚಾಲಕನನ್ನು ಹೊರತೆಗೆಯಲು ಹರಸಾಹಸ ಪಡಬೇಕಾಯಿತು.

ಗಾಯಾಳುಗಳನ್ನು ಹೊಸನಗರ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿಯ ಮಣಿಪಾಲದ ಕೆಎಂಸಿ ಮತ್ತು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಗಿದೆ.

ಹೊಸನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು ಹೊಸನಗರ ಪಿಎಸ್ಐ ರಾಜು ರೆಡ್ಡಿ ಮತ್ತು ಸಿಬ್ಬಂದಿಗಳು ಅಪಘಾತ ನಡೆದ ಸ್ಥಳಕ್ಕೆ ಭೇಟಿ ನೀಡಿ ಮಹಜರು ಕ್ರಮ ಜರುಗಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಹೊಸನಗರ ತಾಲೂಕಿನಾದ್ಯಂತ ಯಮಸ್ವರೂಪಿ ಮರಳು ಸಾಗಣೆ ಟಿಪ್ಪರ್ ಲಾರಿಗಳು ವೇಗ ಮಿತಿ ಅನುಸರಿಸದೇ ಅತಿ ವೇಗದಿಂದ ವಾಹನಗಳನ್ನು ಚಲಾಯಿಸುತ್ತಿರುವ ಕಾರಣ ಪದೇಪದೇ ಇದೇ ರೀತಿ ಅಪಘಾತಗಳು ನಡೆಯುತ್ತಿದ್ದು ಅಕ್ರಮ ಮರಳು ಸಾಗಾಣಿಕೆಗೆ ಕಡಿವಾಣ ಹಾಕಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Leave A Reply

Your email address will not be published.

error: Content is protected !!