ಕಾಂಗ್ರೆಸ್ ಸರ್ಕಾರವನ್ನು ಬಿಜೆಪಿ ಏಕೆ ಬೀಳಿಸಬಾರದು ಇದರಲ್ಲಿ ತಪ್ಪೇನಿದೆ ; ಕೆಎಸ್ಈ

0 42

ಶಿವಮೊಗ್ಗ: ಕಾಂಗ್ರೆಸ್ ಸರ್ಕಾರವನ್ನು ಬಿಜೆಪಿ ಏಕೆ ಬೀಳಿಸಬಾರದು, ಇದರಲ್ಲಿ ತಪ್ಪೇನಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಕುಟುಕಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಹಿಂದೂ ವಿರೋಧಿ ಸರ್ಕಾರವಾಗಿದೆ ಜನಪರವಾಗಿ ಕೆಲಸ ಮಾಡುತ್ತಿಲ್ಲ. ಭ್ರಷ್ಟಾಚಾರ ತಲೆ ಎತ್ತಿದೆ. ವಿದ್ಯುತ್ ಕೊರತೆ ತಲೆದೋರಿದೆ. ರೈತರು, ಕಾರ್ಮಿಕರು ನಿರಾಶರಾಗಿದ್ದಾರೆ. ಹಣ ಕೊಟ್ಟರೂ ವಿದ್ಯುತ್ ಇಲ್ಲ, ಇನ್ನು ಉಚಿತ ಭಾಗ್ಯ ಎಲ್ಲಿಂದ ಬಂತು ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ವಿದ್ಯುತ್ ಖರೀದಿ ಮಾಡಬೇಕಿತ್ತು. ರಾಜ್ಯದ ಅಭಿವೃದ್ಧಿ ಮೊದಲೇ ಇಲ್ಲ. ಇಂತಹ ಸರ್ಕಾರವನ್ನು ಇನ್ನೂ ಉಳಿಸಬೇಕೆ ಎಂದು ಪ್ರಶ್ನೆ ಮಾಡಿದರು.


ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳ ಸಾಮ್ರಾಜ್ಯವೇ ಇಲ್ಲಿದೆ. ಅದರಲ್ಲೂ ಡಿ.ಕೆ. ಶಿವಕುಮಾರ್ ಅಕ್ರಮ ಹಣ ಸಂಪಾದನೆ ಮಾಡಿದ್ದಾರೆ ಎಂದು ಇಡೀ ದೇಶಕ್ಕೆ ಗೊತ್ತಿದೆ. ಜೈಲಿನಲ್ಲಿದ್ದು ಬೇಲ್ ಮೇಲೆ ಹೊರಗೆ ಬಂದವರು. ಕೇಸ್ ನಡೆಯುತ್ತಾ ಇದೆ, ಅವರ ಮೇಲಿನ ವಿಚಾರಣೆ ಮತ್ತೆ ಮುಂದುವರಿದಿದೆ. ಅವನೇನು ಸತ್ಯ ಹರಿಶ್ಚಂದ್ರ ಅಲ್ಲ. ಮತ್ತೆ ಜೈಲಿಗೆ ಹೋಗಿಯೇ ಹೋಗುತ್ತಾನೆ ಎಂದರು.


ಬಿಜೆಪಿ ಎಲ್ಲಾ ಭ್ರಷ್ಟಾಚಾರವನ್ನು ಸಹಿಸಿಕೊಂಡು ಸುಮ್ಮನಿರುವ ವಿರೋಧ ಪಕ್ಷವಲ್ಲ. ಇತ್ತೀಚೆಗೆ ಇಡಿ ದಾಳಿಯಲ್ಲಿ ಎರಡು ಕಡೆ ಕೋಟ್ಯಂತರ ರೂ. ನಗದು ಸಿಕ್ಕಿದೆ. ಇದು ಎಲ್ಲಿಂದ ಬಂತು ಎಂದು ಕೇಳಬಾರದೆ. ನಮಗೆ ಅನುಮಾನ ಇದೆ. ಈ ಹಣ ಪಂಚರಾಜ್ಯಗಳ ಚುನಾವಣೆಗೆ ಕಾಂಗ್ರೆಸ್ ಬಳಕೆ ಮಾಡಲು ಸಂಗ್ರಹಿಸಿತ್ತು ಎಂದು ನಾವು ಆರೋಪ ಮಾಡುತ್ತೇವೆ. ಇವರು ಸತ್ಯವಂತರಾದರೆ ಆಯಿತು ಹಣ ಸಿಕ್ಕಿದೆ. ನಾವು ಸಿಬಿಐ ತನಿಖೆ ಮಾಡಿಸುತ್ತೇವೆ ಎಂದು ಏಕೆ ಹೇಳುತ್ತಿಲ್ಲ. ಹಾಗಾದರೆ ನಮ್ಮ ಅನುಮಾನ ನಿಜವಲ್ಲವೇ. ಇಂತಹ ಸರ್ಕಾರ ನಮಗೆ ಬೇಕಾ. ನಾವು ನೇರವಾಗಿ ಹೇಳುತ್ತೇವೆ. ಕಾಂಗ್ರೆಸ್ ಸರ್ಕಾರವನ್ನು ಬೀಳಿಸಿ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರುತ್ತೇವೆ. ಇದರಲ್ಲಿ ಮುಚ್ಚುಮರೆ ಏನೂ ಇಲ್ಲ ಎಂದರು.


ತಲೆ ಕೆಟ್ಟವನಿಗೆ ಉತ್ತರ ಕೊಡಲ್ಲ
ಬಿಜೆಪಿಯಿಂದ ಕಾಂಗ್ರೆಸ್‌ಗೆ ಹಲವರು ಸೇರುತ್ತಾರೆ ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಹೇಳಿದ್ದಾರಲ್ಲ ಎಂಬ ಪತ್ರಕರ್ತರ ಪ್ರಶ್ನೆಗೆ ಕೆಂಡಾಮಂಡಲವಾದ ಈಶ್ವರಪ್ಪ ಆ ತಲೆ ಕೆಟ್ಟವನ ಮಾತಿಗೆ ನಾನು ಉತ್ತರ ಕೊಡಲ್ಲ. ಅವನಿಗೆ ಯಾವ ನೈತಿಕತೆಯೂ ಇಲ್ಲ. ಎಷ್ಟು ಪಕ್ಷಗಳನ್ನು ಬದಲಾವಣೆ ಮಾಡಿದ್ದಾನೆ ಎಂದು ಅವನೇ ಹೇಳಲಿ ಎಂದು ಏಕವಚನದಲ್ಲಿಯೇ ಜಾಡಿಸಿದರು.
ರೇಣುಕಾಚಾರ್ಯ ಕೂಡ ಬಿಜೆಪಿ ವಿರುದ್ಧ ಹೇಳಿಕೆ ನೀಡಿದ್ದಾರೆ ಎಂಬ ಪ್ರಶ್ನೆಗೂ ಅದೇ ಉತ್ತರ ನೀಡಿದ ಅವರು, ಈಗಾಗಲೇ ರೇಣುಕಾಚಾರ್ಯ ಅವರಿಗೆ ನೋಟೀಸ್ ನೀಡಿದೆ. ನೋಟೀಸ್ ಪಡೆದುಕೊಂಡವರ ಮಾತಿಗೆ ನಾನು ಉತ್ತರ ಕೊಡುವುದಿಲ್ಲ ಎಂದರು.
ಈ ಹಿಂದಿನ ಪತ್ರಿಕಾಗೋಷ್ಠಿಯಲ್ಲೂ ಈಶ್ವರಪ್ಪ ಆಯನೂರು ವಿರುದ್ಧ ಮಾತನಾಡಿದ್ದರು. ಆಯನೂರು ಮಂಜುನಾಥ್ ನಿಮ್ಮ ಬಗ್ಗೆ ಮಾತನಾಡಿದ್ದಾರೆ ಎಂದು ಪತ್ರಕರ್ತರೊಬ್ಬರು ಪ್ರಶ್ನೆ ಮಾಡುತ್ತಿದ್ದ ಹಾಗೆಯೇ ಅವನಿಗಂತೂ ಬುದ್ಧಿ ಇಲ್ಲ. ನಿಮಗೂ ಬುದ್ಧಿ ಇಲ್ಲವೇ ಎಂದು ಮರು ಪ್ರಶ್ನೆ ಮಾಡಿದರು.


ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ನಗರಾಧ್ಯಕ್ಷ ಜಗದೀಶ್, ಪಾಲಿಕೆ ಸದಸ್ಯ ಜ್ಞಾನೇಶ್ವರ್, ಬಾಲು, ಶಶಿಧರ್, ಅಣ್ಣಪ್ಪ ಕೆ.ವಿ. ಇದ್ದರು.

Leave A Reply

Your email address will not be published.

error: Content is protected !!