ಕಾಂತರಾಜ್ ವರದಿ ಜಾರಿಗೆ‌ ಆಗ್ರಹಿಸಿ ಚಿಂತನ ಮಂಥನ‌ | ಸಂವಿಧಾನವೇ ಪವಿತ್ರ ಮತ್ತು ಪರಮೋಚ್ಛ ಗ್ರಂಥ ; ಬಿ.ಕೆ. ಹರಿಪ್ರಸಾದ್

0 175

ಶಿವಮೊಗ್ಗ : ಧರ್ಮ ಪ್ರಭುತ್ವ, ರಾಜ ಪ್ರಭುತ್ವದ ನಂತರ ಈಗ ನಮಗೆ ಸಂವಿಧಾನವೇ ಪವಿತ್ರ ಮತ್ತು ಪರಮೋಚ್ಛ ಗ್ರಂಥವಾಗಿದ್ದು, ಅದನ್ನು ಓದಿ ಅದರಲ್ಲಿರುವ ಹಕ್ಕನ್ನು ಪಡೆಯಲು ನಾವು ಕಾರ್ಯಪ್ರವೃತ್ತ ರಾಗಬೇಕು ಎಂದು ರಾಷ್ಟ್ರೀಯ ಕಾಂಗ್ರೆಸ್‌ನ ನಾಯಕರು, ವಿಧಾನಪರಿಷತ್ ಸದಸ್ಯರಾದ ಬಿ.ಕೆ. ಹರಿಪ್ರಸಾದ್ ಹೇಳಿದ್ದಾರೆ.

ಅವರು ಇಂದು ನಗರದ ಸರ್ಕಾರಿ ನೌಕರರ ಭವನದಲ್ಲಿ ಶಿವಮೊಗ್ಗ ಜಿಲ್ಲಾ ಹಿಂದುಳಿದ ಹಾಗೂ ಅತಿ ಹಿಂದುಳಿದ ವರ್ಗಗಳ ಜನ ಜಾಗೃತಿ ವೇದಿಕೆಯಿಂದ ಹಮ್ಮಿಕೊಂಡಿದ್ದ “ಕಾಂತರಾಜ್ ವರದಿ ಜಾರಿಗೆ ಆಗ್ರಹ” ಚಿಂತನ ಮಂಥನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ಅಧಿಕಾರ ಹಿಡಿದವರು ತಮ್ಮದೇ ಸಮಾಜದ ಪರ ಕೆಲಸ ಮಾಡುತ್ತಾ ಬಂದಿದ್ದು, ಪ್ರಜಾಪ್ರಭತ್ವ ಇನ್ನು ಬಾಲ್ಯವಸ್ಥೆಯಲ್ಲಿದೆ. ಎಲ್ಲರಿಗೂ ಸಮಾನ ಹಕ್ಕು ಸಿಗಬೇಕು ಎಂಬುವುದು ಸಂವಿಧಾನದ ಆಶಯವಾಗಿದೆ. ಆದರೂ ಬಹುಪಾಲು ಹಿಂದುಳಿದ ವರ್ಗ ಸೌಲಭ್ಯ ಮತ್ತು ಸವಲತ್ತುಗಳಿಂದ ವಂಚಿತರಾಗುತ್ತಾ ಬಂದಿದೆ. ದೇಶದಲ್ಲಿ ಹಲವು ಧರ್ಮಗಳಿವೆ. 19,000 ಆಡು ಭಾಷೆಗಳು ಇವೆ. 4500 ಜಾತಿಗಳು ಇರುವ ರಾಷ್ಟ್ರ ಇದು. ವೈವಿಧ್ಯೆತೆಯಲ್ಲಿ ಏಕತೆ ಇರುವ ಭಾರತೀಯ ಮಕ್ಕಳು ನಾವು. ನಾವು ಪಂಚಾಂಗ ನೋಡುವುದು ಬೇಡ, ಸಂವಿಧಾನ ಓದಿದರೆ ಸಾಕು. ನಮ್ಮ ಹೋರಾಟ ಯಾವುದೇ ಜಾತಿ, ಧರ್ಮದ ವಿರುದ್ಧ ಅಲ್ಲ. ರಾಜಕೀಯ ದುರುದ್ದೇಶ ಈ ಹೋರಾಟದಲ್ಲಿ ಇಲ್ಲ. ನಮ್ಮ ಹಕ್ಕಿಗಾಗಿ ಒಗ್ಗಟ್ಟು ಪ್ರದರ್ಶನ ಮಾಡಬೇಕಾಗಿದೆ. ರಾಷ್ಟ್ರ ಮಟ್ಟದಲ್ಲಿ ಜನಗಣತಿ, ಜಾತಿಗಣತಿ ಹಾಗಬೇಕೆಂಬ ತೀರ್ಮಾನವನ್ನು ರಾಹುಲ್ ಗಾಂಧಿ ತೆಗೆದುಕೊಂಡಿದ್ದಾರೆ. ರಾಷ್ಟ್ರದ 437 ಬ್ಯಾಂಕ್‌ಗಳ ಜನರಲ್ ಮ್ಯಾನೇಜರ್‌ಗಳಲ್ಲಿ 27 ಜನ ಮಾತ್ರ ದಲಿತರಿದ್ದಾರೆ. ಅವರು ಯಾರೂ ಬ್ಯಾಂಕ್‌ಗಳಿಗೆ ಮೋಸ ಮಾಡಿಲ್ಲ. ಆದರೆ, ಮೆರಿಟ್ ಆಧಾರದ ಮೇಲೆ ಆರಿಸಿ ಬಂದವರಿಂದ ಬ್ಯಾಂಕ್‌ಗಳಿಗೆ 24 ಲಕ್ಷ ಕೋಟಿ ವಂಚನೆಯಾಗಿದೆ. ಮೀಸಲಾತಿ ನೀಡುವುದರಿಂದ ದೇಶದ ಅಭಿವೃದ್ಧಿ ಕುಂಠಿತವಾಗುತ್ತದೆ. ದೇಶಕ್ಕೆ ನಷ್ಟವಾಗುತ್ತದೆ ಎಂಬುವುದು ಶುದ್ಧ ಸುಳ್ಳು. ಹಿಂದುಳಿದ ವರ್ಗಗಳು ಯಾರೂ ಕೂಡ ದೇಶ ದ್ರೋಹಿಗಳಲ್ಲ. ಸಂವಿಧಾನದ ಪ್ರಕಾರ ಎಲ್ಲರಿಗೂ ಸಮಪಾಲು, ಸಮ ಬಾಳು ಬೇಕೆಂಬುದೇ ಈ ಹೋರಾಟದ ಉದ್ದೇಶ. ಕಾಂತರಾಜು ವರದಿ ಜಾರಿಗೆ ಬರಲೇಬೇಕು ಹಿಂದುಳಿದ ವರ್ಗಗಳಿಗೆ ನ್ಯಾಯ ಸಿಗಲೇಬೇಕು ಎಂದರು.

ಜಾತಿ ಆಧಾರಿತ ಜನಗಣತಿ ಮಾಡಬೇಕು. ಪ್ರವರ್ಗ ಒಂದರಲ್ಲಿ 101 ಜಾತಿಗಳಿದ್ದು, ಕೇವಲ 5 ಜಾತಿಗಳಿಗೆ ಮಾತ್ರ ಸೌಲಭ್ಯ ಸಿಕ್ಕಿದೆ. ಇನ್ನುಳಿದವರಿಗೆ ಸಿಕ್ಕಿಲ್ಲ. ಎಲ್ಲವೂ ಅಧಿಕಾರ ಉಳ್ಳವರ ಪಾಲಾಗಿದೆ. ದ್ರೌಪತಿ ಮುರ್ಮು ಅವರಿಗೆ ಇರುವ ಶಕ್ತಿ ಎಲ್ಲಾ ಹಿಂದುಳಿದ ಜಾತಿ ವರ್ಗದ ಕಟ್ಟಕಡೆಯ ವ್ಯಕ್ತಿಯಲ್ಲೂ ಇದೆ. ಮತ ಚಲಾಯಿಸುವಾಗ ಇದೆಲ್ಲವೂ ತಲೆಯಲ್ಲಿ ಇರಲಿ, ಸರ್ಕಾರಿ ಶಾಲೆ, ಕಾಲೇಜು, ಬ್ಯಾಂಕ್‌ಗಳು, ಸಂಸ್ಥೆಗಳು ಎಲ್ಲವೂ ವ್ಯವಸ್ಥಿತವಾಗಿ ಮುಚ್ಚುತ ಬಂದಿದ್ದಾರೆ. ಖಾಸಗಿ ಖಾಸಗೀಕರಣಕ್ಕೆ ಒತ್ತು ನೀಡುತ್ತಿದ್ದಾರೆ. ಮತ್ತು ನಿಮ್ಮಗೆ ಎಲ್ಲಿ ಸಿಗುತ್ತದೆ ನ್ಯಾಯ ? ದೇವರಾಜ್ ಅರಸ್ ರವರು ದಿಟ್ಟತನದಿಂದ ಹಾವನೂರು ವರದಿ ಜಾರಿಗೆ ಬಂದಿಲ್ಲವಾದರೆ ಕರ್ನಾಟಕ ಇಷ್ಟು ಅಭಿವೃದ್ಧಿಯತ್ತ ಸಾಗುತ್ತಿರಲಿಲ್ಲ ಎಂದರು.

ಸಾಧುಶೆಟ್ಟಿ ಸಮಾಜದ ಅಧ್ಯಕ್ಷರಾದ ಉಮಾಪತಿ ಮಾತನಾಡಿ, 96ಕ್ಕೂ ಹೆಚ್ಚು ಅತ್ಯಂತ ಹಿಂದುಳಿದ ಜಾತಿಗಳಿವೆ. ರಾಜ್ಯ ದಲ್ಲಿ 2 ಕೋಟಿಗೂ ಹೆಚ್ಚು ಜನರಿದ್ದಾರೆ. ಕಾಂತರಾಜು ವರದಿ ಜಾರಿಗೆ ತಂದಲ್ಲಿ ಅವರಿಗೆ ಅನು ಕೂಲವಾಗಲಿದೆ ಎಂದರು.

ಹೊನ್ನಿಯಾರ್ ಸಮಾಜದ ಅಧ್ಯಕ್ಷರಾದ ಗಣೇಶ್ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ಬಂದ ದಿನದಿಂದ ಬಲಿಷ್ಠ ಸಮುದಾಯದ ಕಪಿಮುಷ್ಟಿಯಲ್ಲಿ ಹಿಂದುಳಿದ ಸಮಾಜ ನಾಶವಾಗಿದೆ. ಹಣ, ಜಾತಿ, ದೌರ್ಜನ್ಯದ ಬಲದಿಂದ ದಲಿತ ಸಮುದಾಯ ನಲುಗಿ ಹೋಗಿದೆ ಈ ದೇಶದಲ್ಲಿ ಹಿಂದುಳಿದವರಿಗೆ ಇನ್ನೂ ಸಮಾನತೆ ಸಿಕ್ಕಿಲ್ಲ. ಮೀಸಲಾತಿಯ ಲಾಭವನ್ನು ಕೆಲವೇ ಕೆಲವು ಸಮಾಜ ಪಡೆಯುತ್ತಿದೆ. ಒಂದು ವೇಳೆ ಸರ್ಕಾರವೇನಾದರೂ ನ್ಯಾಯ ಒದಗಿಸಲು ಪ್ರಯತ್ನಿಸಿದರೆ, ಬಲಿಷ್ಠ ಸಮಾಜಗಳು ಸರ್ಕಾರವನ್ನು ಹುರುಳಿಸುವ ಪ್ರಯತ್ನ ಮಾಡುತ್ತದೆ ಎಂದರು.

ಈಡಿಗ ಸಮಾಜದ ಗೀತಾಂಜಲಿ ಮಾತನಾಡಿ ಹಿಂದುಳಿದ ವರ್ಗಗಳಿಗೆ ಶೈಕ್ಷಣಿಕ ಮತ್ತು ಸಾಮಾಜಿಕ, ಆರ್ಥಿಕ ಬಲವಿಲ್ಲದ್ದರಿಂದ ಅವರು ಇನ್ನೂ ಹಿಂದುಳಿದಿದ್ದಾರೆ. ಈ ವರದಿ ಜಾರಿಗೆ ಬರಲಿ ನ್ಯಾಯ ಸಿಗಲಿ ಎಂದರು.
ಬಲಿಜ ಸಮಾಜದ ಜಿ. ಪದ್ಮನಾಭ ಮಾತನಾಡಿ, ಹಲವಾರು ವರ್ಷಗಳಿಂದ ಈ ಸಮಾಜಕ್ಕೆ ವಿದ್ಯಾಬ್ಯಾಸಕ್ಕೆ 2 ಎ ನೀಡುತ್ತಾರೆ. ನೌಕರಿಗೆ 3ಎ ಕೊಟ್ಟಿದೆ. ಇದರಿಂದ ವಿದ್ಯಾಭ್ಯಾಸ ಮುಗಿಸಿದರೂ ನೌಕರಿ ಸಿಗುತ್ತಿಲ್ಲ. ನಮಗೆ 2ಎಗೆ ಸೇರಿಸಿ ಎಂದು ಮನವಿ ಮಾಡಿದರು.

ಶಶಿಕುಮಾರ್ ಮಾತನಾಡಿ, ಐದು ಬೆರಳು ಒಟ್ಟಿಗೆ ಇದ್ದಾಗ ಮಾತ್ರ ಒಗ್ಗಟ್ಟು ಇರುತ್ತದೆ. ಹೋರಾಟಗಳು ಯಶಸ್ವಿಯಾಗಬೇಕಾದರೆ ಒಗ್ಗಟ್ಟು ಮುಖ್ಯ ಇಲ್ಲವಾದರೆ ಬಲಿಷ್ಟ ಸಮುದಾಯಗಳು ನಮ್ಮನ್ನು ಆಳುತ್ತವೆ ಎಂದರು.


ಸಮಾರಂಭದ ಅಧ್ಯಕ್ಷರಾದ ತಿ.ನ. ಶ್ರೀನಿವಾಸ್ ಮಾತನಾಡಿ, ನಮ್ಮ ಹಕ್ಕಿಗಾಗಿ ಸಂವಿಧಾನಿಕ ನ್ಯಾಯ ಪಡೆಯಲು ಹೋರಾಟ ಮಾಡುವ ಕಾಲ ಬಂದಿದೆ. 165 ಕೋಟಿ ಖರ್ಚು ಮಾಡಿ, 5.15ಲಕ್ಷ ಜನರು ಮಾಹಿತಿ ಸಂಗ್ರಹಿಸಿದ ಈ ಕಾಂತರಾಜು ವರದಿಯನ್ನು ಯತವತ್ತಾಗಿ ಜಾರಿಗೆ ತರಬೇಕು. ಈ ದೇಶದಲ್ಲಿ ಅತ್ಯಂತ ಕೆಳ ವರ್ಗದ ಸಣ್ಣ ಜಾತಿಗಳಿಗೆ ಸಾಮಾಜಿಕ ಶೈಕ್ಷಣಿಕ, ರಾಜಕೀಯ ಸ್ಥಾನಮಾನಗಳು ಬೇಕಾದರೆ, ಸರ್ಕಾರಿ ನೌಕರಿ ಬೇಕಾದರೆ, ಈ ವರದಿ ಜಾರಿಗೆ ಬರಬೇಕು. ಈ ವರದಿಯಲ್ಲಿ 56 ಅಂಶಗಳನ್ನು ಸಂಗ್ರಹ ಮಾಡಿದ್ದಾರೆ. ತಕ್ಷಣ ಜಾರಿಗೊಳಿಸಿ ಎಂದರು.

ಡಾ. ಅಂಬೇಡ್ಕರ್‌ರವರ ಮೀಸಲಾತಿ ಕಲ್ಪನೆಯನ್ನು ಹಾಳು ಮಾಡಲಿಕ್ಕೆ ಮಠಾಧೀಶ್ವರರರ ನೇತೃತ್ವದಲ್ಲಿ ಎಲ್ಲ ಮುಂದುವರಿದ ಜಾತಿಗಳು ಓಬಿಸಿಗೆ ಸೇರ್ಪಡೆಗೊಳ್ಳಲು ಬೇಡಿಕೆ ಇಟ್ಟಿದ್ದಾರೆ.‌ ರಾಜೀವಗಾಂಧಿ ಯವರು ಕಾನೂನು ಮಾಡಿದ್ದರು ಇನ್ನೂ ಜಿ.ಪಂ ಮತ್ತು ತಾ.ಪಂ. ಚುನಾವಣೆಯನ್ನು ನಡೆಸಲು ಈ ಸರ್ಕಾರದ ಕೈಯಲ್ಲಿ ಆಗಲಿಲ್ಲ. ಶರಾವತಿ ಸೇರಿದಂತ್ತೆ ಅನೇಕ ಯೋಜನೆಗಳ ಸಂತ್ರಸ್ಥರಿಗೆ ಬಗರ್‌ಹುಕುಂ ಸಾಗುವಳಿದಾರರಿಗೆ ನ್ಯಾಯ ಒದಗಿಸಲು ಆಗಲಿಲ್ಲ. ಅದಕ್ಕಾಗಿ ನಮ್ಮ ಬಳಿ ಅನೇಕ ದಾಖಲೆಗಳಿವೆ. ಸರ್ಕಾರಕ್ಕೆ ಬುದ್ಧಿ ಹೇಳಲು ಹೋರಾಟ ಅಗತ್ಯವಾಗಿದೆ ಎಂದರು.

ಈ ಸಂದರ್ಭದಲ್ಲಿ ಕಾರ್ಯಕ್ರಮದ ಸಂಚಾಲಕರಾದ ಆರ್.ಮೋಹನ್, ಶ್ರೀನಿವಾಸ್, ಚಂದ್ರಕಾಂತ್,ಪಿ.ಓ. ಶಿವಕುಮಾರ್, ವಿಶ್ವನಾಥ್ ಕಾಶಿ, ಶಿವಾನಂದ, ಮಂಜಪ್ಪ ಮತ್ತಿತರರು ಇದ್ದರು.

Leave A Reply

Your email address will not be published.

error: Content is protected !!