ಕುಡಿಯುವ ನೀರು, ಮೇವು ಕೊರತೆಯಾಗದಂತೆ ನೋಡಿಕೊಳ್ಳಲು ಸಚಿವ ಮಧು ಬಂಗಾರಪ್ಪ ಅಧಿಕಾರಿಗಳಿಗೆ ಸೂಚನೆ

0 245

ಶಿಕಾರಿಪುರ : ತಾಲ್ಲೂಕಿನಲ್ಲಿ ಕುಡಿಯುವ ನೀರು ಮತ್ತು ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಏನಾದರೂ ಸಮಸ್ಯೆ ಎದುರಾದರೆ ಕೂಡಲೇ ತಮ್ಮ ಗಮನಕ್ಕೆ ತರಬೇಕು ಎಂದು ಶಿಕ್ಷಣ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ (Madhu Bangarappa) ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಶಿಕಾರಿಪುರ (Shikaripura) ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಸಂಜೆ ನಡೆದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ಭಾಗವಹಿಸಿದ್ದ ಅವರು, ಸಂಜೆ 4-30 ಕ್ಕೆ ಆರಂಭವಾಗಬೇಕಿದ್ದ ಸಭೆಯೂ 7-30 ಕ್ಕೆ ಆರಂಭಿಸಲಾಯಿತು ಇದಕ್ಕಾಗಿ ಸಭೆಯಲ್ಲಿ ಮೊದಲು ಕ್ಷಮೆ ಕೇಳಿ ನಂತರ ಸಭೆ ನಡೆಸಿ ವರದಿ ಸ್ವೀಕರಿಸಿ ಮಾತನಾಡಿದ ಅವರು, ಈ ಬಾರಿ ರಾಜ್ಯದಲ್ಲಿ ವಾಡಿಕೆಗಿಂತಲೂ ಕಡಿಮೆ ಮಳೆಯಾಗಿದ್ದು ತಾಲ್ಲೂಕಿನಲ್ಲಿಯೂ ಮಳೆಯ ಪ್ರಮಾಣ ಕಡಿಮೆ ಇರುವುದರಿಂದ ಮುಂದಿನ ಏಪ್ರಿಲ್, ಮೇ ತಿಂಗಳವರೆಗೆ ಜನತೆಗೆ ಕುಡಿಯುವ ನೀರು ಮತ್ತು ಜಾನುವಾರುಗಳಿಗೂ ಸಹ ನೀರು ಹಾಗೂ ಮೇವುಗಳ ಕೊರತೆಯಾಗದಂತೆ ಎಚ್ಚರ ವಹಿಸಬೇಕು ಎಂದು ಸೂಚನೆ ನೀಡುತ್ತಿದ್ದಂತೆಯೇ ಸಾಗರ ಉಪವಿಭಾಗಾಧಿಕಾರಿ ಪಲ್ಲವಿ ಮಾತನಾಡಿ, ತಾಲ್ಲೂಕಿನಾದ್ಯಂತ ಪ್ರತಿ ವರ್ಷದಂತೆ 677 ಎಂಎಂ ಮಳೆಯಾಗಬೇಕಿತ್ತು ಆದರೆ 474 ಎಂಎಂ ನಷ್ಟು ಮಳೆಯಾಗಿದ್ದು ಈ ಬಾರಿ ವಾಡಿಕೆಗಿಂತಲೂ ಶೇ. 33 ರಷ್ಟು ಮಳೆಯ ಕೊರತೆಯಾಗಿದ್ದು ಏತ ನೀರಾವರಿ ಯೋಜನೆ ಮೂಲಕ ಅನೇಕ ಕೆರೆಗಳಿಗೆ ನೀರು ತುಂಬಿಸುವ ಕೆಲಸ ಮಾಡಲಾಗುತ್ತಿದೆ. ತಾಲ್ಲೂಕಿನಲ್ಲಿ 43 ಗ್ರಾಮ ಪಂಚಾಯಿತಿ ವ್ಯಾಪ್ತಿಯ 180 ಗ್ರಾಮಗಳಿದ್ದು, 884 ಕೊಳವೆಬಾವಿಗಳಿದ್ದು,417 ಕೊಳವೆಬಾವಿಗಳು ಚಾಲ್ತಿಯಲ್ಲದ್ದು,226 ಕೊಳವೆಬಾವಿಗಳು ಬತ್ತಿಹೋಗಿದ್ದು, ಜನವರಿ ನಂತರ 157 ಗ್ರಾಮಗಳಿಗೆ ಕುಡಿಯುವ ನೀರಿನ ಸಮಸ್ಯೆಯಾಗಬಹುದು ಇದಕ್ಕಾಗಿ ಖಾಸಗಿ ಬೋರ್ ವೆಲ್ ಗಳಿಂದ ನೀರು ಪೂರೈಕೆಗೆ ಹಣದ ವ್ಯವಸ್ಥೆ ಮಾಡಲಾಗಿದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು 2013-14 ರಲ್ಲಿಯೂ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯ ಇದ್ದಾಗ ಖಾಸಗಿ ಬೋರ್ ವೆಲ್ ಮತ್ತು ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿತ್ತು ಈ ಬಾರಿಯೂ ಕೂಡ ಅದಕ್ಕೆ ಪೂರಕವಾಗಿ ವ್ಯವಸ್ಥೆ ಮಾಡಿಕೊಳ್ಳುವಂತೆ ಮತ್ತು ಕಲುಷಿತ ನೀರಿನ ಬಗ್ಗೆ ಎಚ್ಚರವಿರಲಿ ಎಂದು ಸಲಹೆ ನೀಡಿದರು.

ಕೃಷಿ ಬಗ್ಗೆ ಮಾಹಿತಿ ನೀಡಿದ ಪಲ್ಲವಿ ತಾಲ್ಲೂಕಿನಲ್ಲಿ 11 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯುವ ನಿರೀಕ್ಷೆ ಇದ್ದು ಇದರಲ್ಲಿ 4 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಹಾನಿಯಾಗಿದ್ದು, ಇದರಿಂದಾಗಿ 40 ಕೋಟಿ ರೂಪಾಯಿ ಮೊತ್ತದ ಬೆಳೆ ನಾಶವಾಗಿದ್ದು, ಮುಸುಕಿನ ಜೋಳ 19 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದು,16 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಹಾನಿಯಾಗಿದ್ದು ಇದರಿಂದಾಗಿ ಬೆಳೆ ಸಮೀಕ್ಷೆ ನಡೆಸಿದ ವರದಿ ಪ್ರಕಾರ 101 ಕೋಟಿ ರೂಪಾಯಿ ಮೊತ್ತದ ಬೆಳೆ ಹಾಳಾಗಿದ್ದು, ರೈತರಿಗೆ ದ್ವಿದಳ ಧಾನ್ಯಗಳನ್ನು ಬೆಳೆಯಲು ಪ್ರೋತ್ಸಾಹ ನೀಡಲಾಗುತ್ತಿದೆ ಎಂದರು. ತಾಲ್ಲೂಕಿನ ಸಹಾಯಕ ಕೃಷಿ ನಿರ್ದೇಶಕ ಕಿರಣ್ ಹತ್ರಿ ಸಭೆಯಲ್ಲಿ ಮಾಹಿತಿ ನೀಡಿ ತಾಲ್ಲೂಕಿನಲ್ಲಿ 15 ಸಾವಿರ ರೈತರು ಬೆಳೆ ವಿಮೆಯಲ್ಲಿ ನೋಂದಣಿ ಮೋಡಿಕೊಂಡಿದ್ದು, ಇದರಲ್ಲಿ ಮಳೆ ಆಶ್ರಿತರಿಗೆ 11 ಸಾವಿರದ 863 ರೈತರಿಗೆ 4.54 ಕೋಟಿ ರೂಪಾಯಿ ಮೊತ್ತದ ಬೆಳೆ ವಿಮೆಯನ್ನು ಮಧ್ಯಂತರವಾಗಿ ಪರಿಹಾರವಾಗಿ 30-11-2023 ಕ್ಕೆ ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿದೆ. ಇನ್ನೂ ನೀರಾವರಿ ಯೋಜನೆಯ ರೈತರ ಜಮೀನುಗಳಲ್ಲಿ ಸಮೀಕ್ಷೆ ನಡೆಸಿ ನಂತರ ವರದಿಯನ್ನು ವಿಮಾ ಕಂಪೆನಿಗೆ ಸಲ್ಲಿಸಿದಾಗ ಇದರ ಬಾಬ್ತು ಮಾರ್ಚ್ ತಿಂಗಳಲ್ಲಿ ರೈತರ ಖಾತೆಗೆ ಜಮಾ ಆಗುತ್ತದೆ ಎಂದು ತಿಳಿಸಿದರು.

ಶಿಕ್ಷಣ ಇಲಾಖೆ ಬಗ್ಗೆ ಮಾಹಿತಿ ಸಂಗ್ರಹಿಸುತ್ತಾ ಪ್ರಸಕ್ತ ಸಾಲಿನಲ್ಲಿ ತಾಲ್ಲೂಕಿನಲ್ಲಿ ಎಷ್ಟು ಶಿಕ್ಷಕರು ವರ್ಗಾವಣೆಯಾಗಿದ್ದಾರೆ ಮತ್ತು ಹೊಸದಾಗಿ ಎಷ್ಟು ಜನ ಶಿಕ್ಷಕರು ಬಂದಿದ್ದಾರೆ ಎಂದು ಪ್ರಶ್ನಿಸಿದಾಗ ಬಿಇಓ ರವರು ಮಾಹಿತಿ ಪಡೆದು ತಿಳಿಸುವುದಾಗಿ ತಿಳಿಸಿದಾಗ ಸಚಿವರು ನನಗೆ ಇರುವ ಮಾಹಿತಿ ಪ್ರಕಾರ ಕಲ್ಯಾಣ ಕರ್ನಾಟಕದಲ್ಲಿ ಮಾತ್ರ ಸ್ವಲ್ಪ ಬದಲಾವಣೆಯಾಗಿದೆ ಬಿಟ್ಟರೆ ಬೇರೆ ಎಲ್ಲೂ ಬದಲಾವಣೆಯಾಗಿಲ್ಲ ಎಂದ ಅವರು, 2019 ರಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉತ್ತೀರ್ಣ ಪ್ರಮಾಣದ ವಿಚಾರಿಸಿದಾಗ ಕ್ಷೇತ್ರ ಶಿಕ್ಷಣಾಧಿಕಾರಿ ದಾಖಲೆಗಳ ಹುಡುಕಾಟದಲ್ಲಿ ಮಗ್ನರಾಗಿದ್ದರು.ಇದಕ್ಕೂ ಮುಂದುವರಿದ ಸಚಿವರು 2019 ಮತ್ತು 20 ರಲ್ಲಿ ಕೊರೋನದಿಂದಾಗಿ ಬಹುತೇಕ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಈ ಬಾರಿಯಿಂದ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಮೂರು ಹಂತಗಳಲ್ಲಿ ಪರೀಕ್ಷೆ ನಡೆಸಲಾಗುತ್ತಿದೆ ಏಕೆಂದರೆ ವಿದ್ಯಾಭ್ಯಾಸದಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೂ ಅನುಕೂಲ ಮಾಡಿಕೊಡುವ ಮೂಲಕ ಮತ್ತು ವಿದ್ಯಾರ್ಥಿಗಳು ಎಲ್ಲರನ್ನೂ ಉತ್ತೀರ್ಣರನ್ನಾಗಿಸುವ ಉದ್ದೇಶದಿಂದ ವಿದ್ಯಾರ್ಥಿಗಳಿಗೆ ಮೂರು ಹಂತಗಳಲ್ಲಿ ಪರೀಕ್ಷೆ ಬರೆಸಲಾಗುತ್ತಿದೆ  ಇದರಿಂದಾಗಿ  ವಿದ್ಯಾರ್ಥಿಗಳಿಗೆ ಗೊಂದಲ ಉಂಟಾಗುತ್ತಿದೆ ಅವರಿಗೆ ಶಿಕ್ಷಕರು ಮತ್ತು ಪೋಷಕರು ತಿಳಿ ಹೇಳಿ ಪರೀಕ್ಷೆಗೆ ತಯಾರಿ ಮಾಡಬೇಕು ಎಂದು ಹೇಳಿದರು.

ವೇದಿಕೆಯಲ್ಲಿ ತಹಶೀಲ್ದಾರ್ ಮಲ್ಲೇಶಪ್ಪ ಬೀರಪ್ಪ ಪೂಜಾರ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಪರಮೇಶ್, ತಾಲ್ಲೂಕು ಪಂಚಾಯಿತಿ ಆಡಳಿತಾಧಿಕಾರಿ ವಿಶ್ವನಾಥ್ ಸೇರಿದಂತೆ ವಿವಿಧ ಇಲಾಖೆಗಳ ಆಡಳಿತ ಅಧಿಕಾರಿಗಳು ಹಾಜರಿದ್ದರು. 

Leave A Reply

Your email address will not be published.

error: Content is protected !!