ಕೊಟ್ಟ ಭರವಸೆಯಂತೆ 10 ಕೆ.ಜಿ. ಅಲ್ಲ 15 ಕೆ.ಜಿ. ಅಕ್ಕಿ ನೀಡಲಿ ; ಬಿ.ವೈ. ವಿಜಯೇಂದ್ರ

0 0

ಶಿವಮೊಗ್ಗ: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಗರೀಬ್ ಕಲ್ಯಾಣ ಯೋಜನೆಯಡಿ 5 ಕೆಜಿ ಅಕ್ಕಿ ನೀಡುತ್ತಿದೆ. ಕಾಂಗ್ರೆಸ್ ಕೊಟ್ಟ ಭರವಸೆಯಂತೆ 10 ಕೆಜಿ ಅಲ್ಲ 15 ಕೆಜಿ ಅಕ್ಕಿ ನೀಡಲಿ ಎಂದು ಶಿಕಾರಿಪುರ ಬಿಜೆಪಿ ಶಾಸಕರೂ ಆಗಿರುವ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.

ಶಿವಮೊಗ್ಗದಲ್ಲಿ ಮಾತನಾಡಿದ ಅವರು, ನೀವು ಕೊಟ್ಟ ಭರವಸೆಯನ್ನು ಮೊದಲು ಈಡೇರಿಸಿ ಎಂದರು. ರಾಜ್ಯದಲ್ಲಿ ರೈತರು ಸಾಕಷ್ಟು ಗೋದಿ, ರಾಗಿ, ಭತ್ತ ಬೆಳೆಯುತ್ತಾರೆ. ಕಾಂಗ್ರೆಸ್ ನಾಯಕರಿಗೆ ಬೇರೆ ರಾಜ್ಯದ ಮೇಲೆ ಪ್ರೀತಿ ಜಾಸ್ತಿ. ಹೀಗಾಗಿ ಬೇರೆ ರಾಜ್ಯಗಳಿಂದ ಅಕ್ಕಿ ಖರೀದಿ ಮಾಡಲು ಮುಂದಾಗಿದ್ದಾರೆ ಎಂದು ಹೇಳಿದ ವಿಜಯೇಂದ್ರ, ನಮ್ಮ ರಾಜ್ಯದಲ್ಲಿ ಬೆಳೆಯುವ ಅಕ್ಕಿ ಸಿಗಲಿಲ್ಲ ಅಂದರೆ ಬೇರೆ ರಾಜ್ಯದಿಂದ ಖರೀದಿ ಮಾಡಿ ಎಂದರು. ಅಲ್ಲದೆ, ಬಿಜೆಪಿ ಸರ್ಕಾರದ ಅವಧಿಯಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪದ ಬಗ್ಗೆ ರಾಜ್ಯ ಕಾಂಗ್ರೆಸ್ ಸರ್ಕಾರವು ತನಿಖೆ ನಡೆಸಲು ಮುಂದಾಗಿರುವ ಬಗ್ಗೆ ಪ್ರತಿಕ್ರಿಯಿಸಿದರು.

ಬಿಜೆಪಿ ಸರ್ಕಾರದ ಹಗರಣಗಳ ಬಗ್ಗೆ ತನಿಖೆ ನಡೆಸುತ್ತೇವೆ ಅಂತಾ ಕಾಂಗ್ರೆಸ್ ನಾಯಕರು ಹೇಳಿದ್ದಾರೆ. ಯಾವುದೇ ತನಿಖೆಯಾದರೂ ಮಾಡಿಸಿ, ತಪ್ಪಾಗಿದ್ದರೆ ಜೈಲಿಗೆ ಕಳುಹಿಸಿ ಎಂದು ಸವಾಲು ಹಾಕಿದರು. ಇದರ ಜೊತೆಗೆ ಮೊದಲು ರಾಜ್ಯದಲ್ಲಿ ಕುಡಿಯುವ ನೀರಿನ‌ ಸಮಸ್ಯೆ ಇದೆ ಅದನ್ನು ಬಗೆಹರಿಸಿ ಅಂತ ಹೇಳಿದರು.

ಬಿಜೆಪಿಯಲ್ಲಿ ಹೊಂದಾಣಿಕೆ ರಾಜಕಾರಣ ಎಂಬ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ನಾನೊಬ್ಬ ಸಾಮಾನ್ಯ ಕಾರ್ಯಕರ್ತ. ಈ ಬಗ್ಗೆ ಉಪದೇಶ ಮಾಡುವಷ್ಟು ದೊಡ್ಡವನಲ್ಲ. ಸಂಸದ ಪ್ರತಾಪ್ ಸಿಂಹ ಅವರು ಸೋಲಿಲ್ಲದ ಸರದಾರರು, ವಾಗ್ಮಿಗಳು. ನಾನು ಸೇರಿ ನಮ್ಮ ಜವಾಬ್ದಾರಿ ಅರಿತು ಮಾತನಾಡಬೇಕು ಎಂದರು.

ರಾಜ್ಯದ ಜನರಿಗೆ ತಪ್ಪು ಕಲ್ಪನೆ ಕೊಡುವುದರಲ್ಲಿ ಕಾಂಗ್ರೆಸ್ ನಾಯಕರು ನಿಸ್ಸೀಮರು. ಹೀಗಾಗಿ ಅವರು ಅಧಿಕಾರಕ್ಕೆ ಬಂದಿದ್ದಾರೆ ಎಂದು ವಿಜಯೇಂದ್ರ ಹೇಳಿದರು. ಸಿದ್ದರಾಮಯ್ಯ ಅವರೇ ಐದು ವರ್ಷ ಸಿಎಂ ಸಚಿವ ಮಹದೇವಪ್ಪ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಲೋಕಸಭೆ ಚುನಾವಣೆ ಆಗಲಿ. ಇದು ಡಬಲ್ ಸ್ಟೇರಿಂಗ್ ಸರಕಾರ, ಲೋಕಸಭೆಯಲ್ಲಿ ಬಿಜೆಪಿ 25 ಸ್ಥಾನ ಪಡೆದ ನಂತರ ಅವರ ಪರಿಸ್ಥಿತಿ ಏನಾಗುತ್ತದೆ ಕಾದು ನೋಡಿ ಎಂದರು.

Leave A Reply

Your email address will not be published.

error: Content is protected !!