Shivamogga | ಕ್ರೀಡಾ ಮನೋಭಾವದಿಂದ ಯಶಸ್ಸು ಸಾಧ್ಯ ; ಶಾಸಕ ಎಸ್.ಎನ್.ಚನ್ನಬಸಪ್ಪ

0 74


ಶಿವಮೊಗ್ಗ : ಕ್ರೀಡಾ ಮನೋಭಾವ ಇರುವ ವ್ಯಕ್ತಿಗಳು ಯಾವುದೇ ಸಂದರ್ಭದಲ್ಲಿ ಕುಗ್ಗುವುದಿಲ್ಲ. ಅವರು ಯಶಸ್ಸನ್ನು ಕಾಣುತ್ತಾರೆ ಎಂದು ಶಾಸಕರಾದ ಎಸ್.ಎನ್.ಚನ್ನಬಸಪ್ಪ ಅಭಿಪ್ರಾಯಪಟ್ಟರು.


ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ವಿವಿಧ ಕ್ರೀಡಾ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಇಂದು ನೆಹರು ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.


ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ವಿಜೇತರಾಗಿ ರಾಜ್ಯ ಮಟ್ಟದಲ್ಲೂ ಯಶಸ್ಸು ಸಾಧಿಸಿ ಜಿಲ್ಲೆಗೆ ಮತ್ತು ದೇಶಕ್ಕೇ ಕೀರ್ತಿ ತರುವ ಕೆಲಸವನ್ನು ಕ್ರೀಡಾಪಟುಗಳು ಮಾಡುತ್ತಾರೆಂಬ ವಿಶ್ವಾಸವಿದೆ.


ದಸರಾ ಕ್ರೀಡಾ ಕೂಟಕ್ಕೆ ಅದರದ್ದೇ ಆದ ಮಹತ್ವ ಇದೆ. ವಿಜಯದಶಮಿ ಆರಂಭದಿಂದಲೂ ದಸರಾ ಕ್ರೀಡಾಕೂಟವನ್ನು ಆಯೋಜಿಸಲಾಗುತ್ತಿದೆ. ಮೈಸೂರು ಮಹಾರಾಜರು ಈ ಮಹತ್ಕಾರ್ಯಕ್ಕೆ ಚಾಲನೆ ನೀಡಿದ್ದರು. ನಮ್ಮ ದೇಶ ಕ್ರೀಡೆಗೆ ಶಕ್ತಿ ತುಂಬುವ ಕೆಲಸವನ್ನು ಮಾಡುತ್ತಿದೆ.
ಅಟಲ್ ಬಿಹಾರಿ ವಾಜಪೇಯಿ ಬಡಾವಣೆಯಲ್ಲಿ ಖೇಲೋ ಇಂಡಿಯಾ ಸ್ಟೇಡಿಯಂ ಕೆಲಸ ಆಗುತ್ತಿದೆ. ಖೇಲೋ ಇಂಡಿಯಾ ಮೂಲಕ ಕ್ರೀಡೆಗೆ ನವಚೈತನ್ಯ ತುಂಬುವ ಕೆಲಸವಾಗುತ್ತಿದ್ದು, ಕ್ರೀಡಾಪಟುಗಳು ಉತ್ತಮವಾಗಿ ಸಾಧನೆಗೈದು ರಾಜ್ಯ ಮತ್ತು ದೇಶಕ್ಕೆ ಕೀರ್ತಿ ತರಲೆಂದು ಹಾರೈಸಿದರು.


ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥಸ್ವಾಮಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲೆಯ ಎಲ್ಲ ತಾಲ್ಲೂಕುಗಳಿಂದ ಕ್ರೀಡಾಪಟುಗಳು ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿದ್ದಾರೆ. ಜಿಲ್ಲಾ ಮಟ್ಟದಲ್ಲಿ ಆಯ್ಕೆಯಾದವರು ಮುಂದೆ ವಿಭಾಗೀಯ ಮಟ್ಟ ಮತ್ತು ಅಲ್ಲಿ ವಿಜೇತರಾದವರು ಮೈಸೂರಿನಲ್ಲಿ ಅ.10 ರಂದು ನಡೆಯುವ ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸುವರು ಎಂದರು.


ಕಾರ್ಯಕ್ರಮದಲ್ಲಿ ದಿ: 27-09-2023 ರಿಂದ 30-09-2023 ರವರೆಗೆ ಮಂಗಳೂರಿನಲ್ಲಿ ನಡೆದ ಕರ್ನಾಟಕ ರಾಜ್ಯ ಜ್ಯೂನಿಯರ್ ಮೀಟ್ ಕ್ರೀಡಾಸ್ಪರ್ಧೆಯಲ್ಲಿ ವಿಜೇತರಾದ ಕ್ರೀಡಾಪಟುಗಳು ಮತ್ತು ತರಬೇತುದಾರರನ್ನು ಅಭಿನಂದಿಸಿ, ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಇಲಾಖೆಯ ಕ್ರಿಕೆಟ್ ತರಬೇತುದಾರ ನಾಗರಾಜ್, ಹಿರಿಯ ಕ್ರೀಡಾಪಟುಗಳು ಮತ್ತು ತರಬೇತುದಾರರಾದ ಶಿವಲಿಂಗೇಗೌಡ, ಬಾಳಪ್ಪ ಮಾನೆ, ಸುಬ್ರಹ್ಮಣ್ಯ, ಕ್ರೀಡಾಪಟುಗಳು ಇತರರು ಇದ್ದರು.

Leave A Reply

Your email address will not be published.

error: Content is protected !!