ಶಿವಮೊಗ್ಗ: ನಿನ್ನೆ ಮಧ್ಯರಾತ್ರಿ 12-30ಕ್ಕೆ ಖಝಕೀಸ್ಥಾನದಿಂದ ಮಿಸ್ಡ್ ಕಾಲ್ ಬಂದಿದ್ದು, ಇದು ಬಹುಶಃ ಕೊಲೆ ಬೆದರಿಕೆ ಕರೆಯಾಗಿರಬಹುದು ಎಂಬ ಅನುಮಾನದಲ್ಲಿ ನಾನು ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಇಂದು ದೂರು ಕೊಡುವೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದರು.
ಅವರು ಇಂದು ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನನಗೆ +7(678)815-46-5(5) ಈ ನಂಬರಿನಿಂದ ಅನಾಮಧೇಯ ಅಂತರಾಷ್ಟ್ರೀಯ ಕರೆಯೊಂದು ಬಂದಿದೆ. ಇದು ಮಿಸ್ಡ್ ಕಾಲ್ ಆಗಿದೆ. ಆದರೆ ಈ ಹಿಂದೆ ಪಿಎಫ್‌ಐ ಸಂಘಟನೆಗೆ ಸೇರಿದ ಜಯೇಶ್ ಪೂಜಾರಿ ಅಲಿಯಾಸ್ ಶಾಹಿರಿ ಶೇಖ್‌ಎಂಬಾತನನ್ನು ಮಹಾರಾಷ್ಟ್ರ ಪೊಲೀಸ್ ಇಲಾಖೆ ಬಂಧಿಸಿ ವಿಚಾರಣೆ ಮಾಡಿದಾಗ ಆ ವ್ಯಕ್ತಿ ನನ್ನನ್ನು ಹತ್ಯೆ ಮಾಡಲು ಸಂಚು ರೂಪಿಸದ್ದ ಎಂದು ಗೊತ್ತಾಗಿದೆ. ಈ ಕರೆಯೂ ಇಂತಹುದೇ ಇರಬಹುದು ಎಂಬ ಸಂಶಯದಿಂದ ನಾನು ಪೊಲೀಸರಿಗೆ ದೂರು ನೀಡುತ್ತಿದ್ದೇನೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಲು ಆಗ್ರಹಿಸುತ್ತೇನೆ ಎಂದರು.
ರಾಜ್ಯದ ಜನತೆಯ ತೀರ್ಮಾನವನ್ನು ನಾನು ಸ್ವಾಗತಿಸುತ್ತೇನೆ. ಕಾಯುವ ನಾಯಿಯ ರೀತಿಯಲ್ಲಿ ವಿರೋಧ ಪಕ್ಷವಾಗಿ ನಾವು ಕೆಲಸ ಮಾಡುತ್ತೇವೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬರುತ್ತದೆ. ಮೋದಿ ಪ್ರಧಾನಿ ಆಗೇ ಆಗುತ್ತಾರೆ ಎಂದರು.
ಬಿಜೆಪಿ ರಾಜ್ಯದಲ್ಲಿ ಸೋತಿರಬಹುದು. ಆದರೆ ಜನರ ಪ್ರೀತಿ ಗಳಿಸುವಲ್ಲಿ ಯಶಸ್ವಿಯಾಗಿದ್ದೇವೆ. ಕಳೆದ ಬಾರಿ ಚುನಾವಣೆಯಲ್ಲಿ ನಮಗೆ ಶೇ.36ರಷ್ಟು ಜನರು ಮತ ನೀಡಿದ್ದರು. ಈ ಬಾರಿ ಶೇ.36.04ರಷ್ಟು ಮತ ನೀಡಿದ್ದು, ಸರ್ಕಾರದ ಅಭಿವೃದ್ಧಿ ಕಾರ್ಯಮೆಚ್ಚಿ, ಪಕ್ಷದ ಸಂಘಟನೆ, ನಾಯಕತ್ವ ಗುರುತಿಸಿ ಮತ ನೀಡಿದ್ದಾರೆ ಎಂದರು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಕೆಲವರು ರಾಷ್ಟ್ರದ್ರೋಹದ ಕೆಲಸಕ್ಕೆ ಕೈ ಹಾಕಿದ್ದಾರೆ. ಬೆಳಗಾವಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಮವಿಜಯೋತ್ಸವದಲ್ಲಿ ಕೆಲವರು ಪಾಕೀಸ್ಥಾನದ ಪರವಾಗಿ ಘೋಷಣೆ ಕೂಗಿದ್ದಾರೆ. ಈ ಬಗ್ಗೆ ಕ್ರಮ ತೆಗೆದುಕೊಳ್ಳುವುದಾಗಿ ಅಲ್ಲಿನ ನೂತನ ಶಾಸಕರೇ ಹೇಳುವುದನ್ನು ನೋಡಿದರೆ ಈ ಘಟನೆ ನಿಜವಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮೇಯರ್ ಶಿವಕುಮಾರ್, ಉಪಮೇಯರ್ ಲಕ್ಷ್ಮಿಶಂಕರನಾಯ್ಕ, ಎಸ್. ದತ್ತಾತ್ರ, ಎನ್.ಜೆ. ರಾಜಶೇಖರ್, ಶಿವರಾಜ್, ಕೆ.ವಿ. ಅಣ್ಣಪ್ಪ, ಶ್ರೀನಾಥ ನಗರಗದ್ದೆ, ಚಂದ್ರಶೇಖರ್ ಇನ್ನಿತರರು ಇದ್ದರು.