ಗಣಪತಿ ಮೆರವಣಿಗೆ ಯಶಸ್ಸಿಗೆ ಶಾಸಕ ಎಸ್.ಎನ್. ಚನ್ನಬಸಪ್ಪ ಅಭಿನಂದನೆ

0 52

ಶಿವಮೊಗ್ಗ: ನಗರದ ಹಿಂದೂ ಮಹಾ ಮಂಡಳಿ ವತಿಯಿಂದ ನಡೆದ 79ನೇ ವರ್ಷದ ಗಣೋಶೋತ್ಸವ ಮೆರವಣಿಗೆಯು ಅತ್ಯಂತ ವಿಜೃಂಭಣೆಯಿಂದ ಯಾವುದೇ ಅಹಿತಕರ ಘಟನೆ ಇಲ್ಲದೆ ಸಾರ್ವಜನಿಕರ ಮತ್ತು ವಿವಿಧ ಸಂಘ-ಸಂಸ್ಥೆಗಳ ಸಹಕಾರದಿಂದ ನೆರವೇರಿದ್ದು ಯಶಸ್ಸಿಗೆ ಕಾರಣಕರ್ತರಾದ ಎಲ್ಲರಿಗೂ ಅಭಿನಂದನೆಗಳು ಎಂದು ಶಾಸಕ ಎಸ್. ಎನ್. ಚನ್ನಬಸಪ್ಪ ಹೇಳಿದ್ದಾರೆ.


ಅವರು ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವರ್ಷದಿಂದ ವರ್ಷಕ್ಕೆ ಗಣಪತಿಯ ಮೆರವಣಿಗೆಯಲ್ಲಿ ಲಕ್ಷಾಂತರ ಜನ ಪಾಲ್ಗೊಳ್ಳುತ್ತಿದ್ದಾರೆ. ನಗರದ ಎಲ್ಲಾ ಜನರು ಪಕ್ಷ ಭೇದ ಮರೆತು ಒಗ್ಗಟ್ಟಿನಿಂದ ಈ ಮೆರವಣಿಗೆಗೆ ಶಕ್ತಿ ತುಂಬಿದ್ದಾರೆ. ಕೇಸರಿ ಅಲಂಕಾರ ಸಮಿತಿ, ಶಿವಪ್ಪ ನಾಯಕ ಹೂವಿನ ಮಾರುಕಟ್ಟೆ ಸಂಘ ಸೇರಿದಂತೆ ಅನೇಕ ಸಂಘಟನೆಗಳು ನಗರದ ಅಲಂಕಾರಕ್ಕೆ ಮತ್ತು ದಾಸೋಹಕ್ಕೆ ಸ್ವಯಂಪ್ರೇರಿತವಾಗಿ ನೆರವು ನೀಡಿವೆ. ಸಾವಿರಾರು ಕಲಾತ್ಮಕ ಹಾರಗಳನ್ನು ನಾಗರಿಕರು ಗಣಪತಿಗೆ ಸಮರ್ಪಿಸಿದ್ದಾರೆ. ಬೆಕ್ಕಿನಕಲ್ಮಠದ ಮುರುಘರಾಜೇಂದ್ರ ಶ್ರೀಗಳು ಮೆರವಣಿಗೆಗೆ ಚಾಲನೆ ನೀಡಿ ಆಶೀರ್ವಾದ ಮಾಡಿದರು. ಭಕ್ತಾದಿಗಳಿಗೆ ರಸ್ತೆಯ ಇಕ್ಕೆಲಗಳಲ್ಲಿ ಪ್ರಸಾದ, ನೀರು, ಮಜ್ಜಿಗೆ ಮತ್ತು ಸಿಹಿ ವಿತರಿಸಿ ಶಿವಮೊಗ್ಗದ ಸಂಸ್ಕೃತಿಯ ಹೆಗ್ಗಳಿಕೆಯನ್ನು ಬಿಂಬಿಸಿದ್ದಾರೆ. ಗೋಪಿ ವೃತ್ತದಲ್ಲಿ ಶಿವಮೊಗ್ಗ ಗಣೇಶೋತ್ಸವ ಸಮಿತಿ ವತಿಯಿಂದ ವಿಶೇಷ ಕಾರ್ಯಕ್ರ ಮೆರವಣಿಗೆಗೆ ಮೆರುಗು ನೀಡಿತ್ತು.

ಕುಟುಂಬ ಸಮೇತರಾಗಿ ತಂಡೋಪತಂಡವಾಗಿ ಜಿಲ್ಲೆಯ ಎಲ್ಲಾ ಭಾಗಗಳಿಂದಲೂ ಈ ಬಾರಿಯ ಮೆರವಣಿಗೆಯಲ್ಲಿ ಜನರು ಭಾಗಿಯಾಗಿದ್ದರು. ನಾಗರಿಕರ ಅಪೇಕ್ಷೆಗೆ ತಕ್ಕಂತೆ ರಾಜಬೀದಿ ಉತ್ಸವ ನಡೆದಿದೆ. ಅ.1ರಂದು ನಡೆಯುವ ಈದ್‌ಮಿಲಾದ್ ಕೂಡ ಯಶಸ್ವಿಯಾಗಲಿ. ಶಿವಮೊಗ್ಗದ ಕಲಾವಿದರೇ ನರಸಿಂಹ ಅಲಂಕಾರವನ್ನು ನಿರ್ಮಿಸಿ ಜನಾಕರ್ಷಣೆಗೆ ಕಾರಣವಾಗಿದ್ದಲ್ಲದೆ ಮಾಧ್ಯಮಗಳ ಪ್ರಚಾರ ಕೂಡ ಯಶಸ್ವಿಗೆ ಕಾರಣವಾಯಿತು. ಎಲ್ಲಾ ರಾಜಕೀಯ ಪಕ್ಷದವರು ಕೂಡ ಪ್ರಸಾದ ವ್ಯವಸ್ಥೆ ಕಲ್ಪಿಸಿ ಒಗ್ಗಟ್ಟಿನಿಂದ ಈ ಹಿಂದೂ ಮಹಾಸಭಾ ಗಣಪತಿಯ ಮೆರವಣಿಗೆ ಯಶಸ್ಸಿಗೆ ಕಾರಣರಾದರು. ಸಮಸ್ತ ನಾಗರಿಕರಿಗೆ ಎಲ್ಲಾ ರಾಜಕೀಯ ಪಕ್ಷದ ಮುಖಂಡರಿಗೆ, ಕಲಾವಿದರಿಗೆ, ದಾನಿಗಳಿಗೆ ಮತ್ತು ಮಾಧ್ಯಮದವರಿಗೆ, ಸಾರ್ವಜನಿಕರಿಗೆ ಕೃತಜ್ಞತೆ ಸಲ್ಲಿಸಿದರು.


ಈ ಸಂದರ್ಭದಲ್ಲಿ ಪ್ರಮುಖರಾದ ಜ್ಞಾನೇಶ್ವರ್, ಪ್ರಭಾಕರ್, ಜಗದೀಶ್, ಮೋಹನ್ ರೆಡ್ಡಿ, ಅಣ್ಣಪ್ಪ, ಬಾಲು ಮೊದಲಾದವರಿದ್ದರು.

Leave A Reply

Your email address will not be published.

error: Content is protected !!