ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿರುವ ಕಾಂಗ್ರೆಸ್ ಆಡಳಿತದ ಈ ಅವಧಿ ಐತಿಹಾಸಿಕ ದಿನಗಳಾಗಲಿವೆ ; ಶಾಸಕ ಬೇಳೂರು ಗೋಪಾಲಕೃಷ್ಣ

0 153


ಹೊಸನಗರ : ರಾಜ್ಯ ಸರಕಾರ ಚುನಾವಣಾ ಪೂರ್ವದಲ್ಲಿ ಘೋಷಣೆ ಮಾಡಿದ್ದ ಗ್ಯಾರಂಟಿ ಯೋಜನೆಗಳ ಪೈಕಿ ನಾಲ್ಕು ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದೆ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದರು.


ಅವರು ಇಲ್ಲಿನ ಕಾಂಗ್ರೆಸ್ ಕಛೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ, ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿರುವ ಕಾಂಗ್ರೆಸ್ ಆಡಳಿತದ ಈ ಅವಧಿ ಐತಿಹಾಸಿಕ ದಿನಗಳಾಗಲಿವೆ. ಇಷ್ಟಕ್ಕೇ ಸೀಮಿತ ಆಗದೇ, ಸಮಗ್ರ ಅಭಿವೃದ್ಧಿ ಕಾರ್ಯಗಳಿಗೂ ಹಂತ ಹಂತವಾಗಿ ಚಾಲನೆ ದೊರೆಯಲಿದೆ. ಸದೃಢ ಸರಕಾರ ಜನಪರ ಕಾಳಜಿಯಿಂದ ಕಾರ್ಯನಿರ್ವಹಿಸಲಿದೆ ಎಂದರು.


ಗೃಹಲಕ್ಷ್ಮಿ ಯೋಜನೆಯ ಅರ್ಜಿಗಳ ಸಲ್ಲಿಕೆಗೆ ತಾಂತ್ರಿಕ ಅಡೆತಡೆಗಳು ಬಂದಿರುವ ಕುರಿತು ತಿಳಿದುಬಂದಿದೆ. ಈ ಬಗ್ಗೆ ಉನ್ನತಾಧಿಕಾರಿಗಳು ಹಾಗೂ ಸಚಿವರ ಗಮನಕ್ಕೆ ತರಲಿದ್ದೇನೆ. ಎಲ್ಲಾ ಅರ್ಹರಿಗೂ ಯೋಜನೆಯ ಫಲ ಸಿಗಬೇಕು ಎನ್ನುವುದು ಸರಕಾರದ ಇಚ್ಛೆಯಾಗಿದೆ ಎಂದರು.


ಸಂಸತ್ ಚುನಾವಣೆಯ ಅಭ್ಯರ್ಥಿಯ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಸಂಸತ್ ಚುನಾವಣೆಗೆ ಪಕ್ಷ ಸಿದ್ಧತೆ ನಡೆಸುತ್ತಿದೆ. ಚುನಾವಣೆಗೂ 6 ತಿಂಗಳ ಮುಂಚಿತವಾಗಿ ಪಕ್ಷ ಅಭ್ಯರ್ಥಿಯ ಹೆಸರನ್ನು ಅಂತಿಮಗೊಳಿಸಲಿದೆ. ಪಕ್ಷದ ವರಿಷ್ಠರು ಅಭ್ಯರ್ಥಿಯ ಹೆಸರನ್ನು ಅಂತಿಮಗೊಳಿಸುತ್ತಾರೆ ಎಂದರು.

ತಮಗೆ ಅವಕಾಶ ದೊರೆತರೆ ಸ್ಪರ್ಧಿಸುತ್ತೀರಾ ಎಂದಾಗ, ಪಕ್ಷ ಬಯಸಿದಲ್ಲಿ, ಹಿರಿಯರು ಸೂಚನೆ ನೀಡಿದರೆ, ಸ್ಪರ್ಧಿಸಲು ಸಿದ್ದ, ಅದಕ್ಕೇಕೆ ಹಿಂದೇಟು ಎಂದು ಉತ್ತರಿಸಿದರು.

ಮಾಜಿ ಶಾಸಕ ಹರತಾಳು ಹಾಲಪ್ಪನವರನ್ನು ಜನರೇ ತಿರಸ್ಕರಿಸಿರುವಾಗ ಅವರ ಬಗ್ಗೆ ನಾನು ಏಕೆ ಮಾತನಾಡಬೇಕು, ನನ್ನದೇನು ಜನಸೇವೆ ಮಾಡುವ ಗುರಿಯೊಂದೆ ಆಗಿದ್ದು ಇನ್ನೂ ಐದು ವರ್ಷಗಳ ಕಾಲ ಜನಸೇವಕನಾಗಿ ಜನರ ಜೊತೆಗೆ ಇರುವುದೇ ನನ್ನ ಕೆಲಸ.
– ಬೇಳೂರು ಗೋಪಾಲಕೃಷ್ಣ, ಶಾಸಕ

ಈ ಬಾರಿ ಹವಮಾನ ವೈಫರಿತ್ಯದಿಂದ ಮಳೆಯ ಪ್ರಮಾಣ ಕುಂಠಿತಗೊಂಡಿದ್ದು ರೈತಾಪಿವರ್ಗಕ್ಕೆ ಭಾರೀ ಹಿನ್ನಡೆಯಾಗಿದೆ. ಕುಡಿಯುವ ನೀರಿಗೂ ಪರಿತಪಿಸುವ ಕಾಲ ಬರಬಹುದಾದ ಹಿನ್ನಲೆಯಲ್ಲಿ ಈಗಾಗಲೇ ಹೊಸನಗರ ತಾಲೂಕಿನ ಸಮೀಪದ ಚಕ್ರಾ ಡ್ಯಾಂನಿಂದ ಕುಡಿಯುವ ನೀರಿಗಾಗಿ ರೂ. 400 ಕೋಟಿ ಅನುದಾನದಲ್ಲಿ ಯೋಜನೆ ರೂಪಿಸಿದ್ದು ಶೀಘ್ರದಲ್ಲೆ ಕಾಮಗಾರಿಯ ಅನುಷ್ಠಾನಕ್ಕೆ ಚಾಲನೆ ದೊರೆಯಲಿದೆ ಎಂದರು.

ಜೆಜೆಎಂ ಹಾಗು ಬಹುಗ್ರಾಮ ಯೋಜನೆ ಅಡಿಯಲ್ಲಿ ಹಣ ಮೀಸಲಿದೆ. ಅಲ್ಲದೆ, ಹಕ್ರೆ ಸಮೀಪದ ಶರಾವತಿ ಹಿನ್ನೀರಿನಿಂದ ಸಾಗರ ತಾಲೂಕಿನ ಗ್ರಾಮಾಂತರ ಪ್ರದೇಶಗಳಿಗೂ ಕುಡಿಯುವ ನೀರಿನ ಯೋಜನೆ ಶೀಘ್ರದಲ್ಲೇ ಆರಂಭಗೊಳ್ಳಲಿದೆ. ಇದರಿಂದ ಎರಡೂ ತಾಲೂಕಿನ ಜನರಿಗೆ ಸತತ 24X7 ಗಂಟೆಗಳ ಕಾಲ ಶುದ್ದ ಕುಡಿಯುವ ನೀರು ಸರಬರಾಜು ಕುರಿತಂತೆ ವಿಶ್ವಾಸ ವ್ಯಕ್ತಪಡಿಸಿದರು.


ಹೊಸನಗರ ತಾಲ್ಲೂಕನ್ನು ಸಮಗ್ರ ಅಭಿವೃದ್ಧಿ ಪಡಿಸುವುದೇ ನನ್ನ ಗುರಿ:


ಈ ಹಿಂದೆ ಕ್ಷೇತ್ರದ ಶಾಸಕನಾಗಿದ್ದ ಇಲ್ಲಿನ ಜಾಕ್‌ವೆಲ್ ಸಮೀಪ ಚೆಕ್‌ಡ್ಯಾಂ ನಿರ್ಮಿಸಿ ಹೊಸನಗರ ಪಟ್ಟಣಕ್ಕೆ ಕುಡಿಯುವ ನೀರಿಗಾಗಿ ಯೋಜನೆಗೆ ಡಿಪಿಆರ್ ತಯಾರಿಸಿದ್ದೆ. ತಾಂತ್ರಿಕ ಕಾರಣಗಳಿಂದ ಯೋಜನೆ ಕೈಗೂಡಲಿಲ್ಲ ಎಂಬ ವಿಷಾಧ ವ್ಯಕ್ತಪಡಿಸಿದರು. ಆದರೆ, ಈ ಬಾರಿ ಪಟ್ಟಣದ ಸಮಗ್ರ ಅಭಿವೃದ್ದಿಗೆ ತಾವು ಕಟಿಬದ್ದನಾಗಿದ್ದೇನೆ ಎಂಬ ತಮ್ಮ ದೃಢ ನಿಲುವು ತಿಳಿಸಿದರು.

ಬಿಜೆಪಿಗೆ ಇಂಥ ದುರ್ಗತಿ ಬರಬಾರದಿತ್ತು


ಮಳೆಯ ಪ್ರಮಾಣವು ರಾಜ್ಯದಲ್ಲಿ ಈ ಬಾರಿ ಅತ್ಯಂತ ಕಡಿಮೆ ದಾಖಲಾಗಿರುವ ಹಿನ್ನಲೆಯಲ್ಲಿ ರಾಜ್ಯ ಸರ್ಕಾರವು 167 ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಣೆ ಮಾಡಲು ತಯಾರಿ ನಡೆಸಿದೆ. ರಾಜ್ಯದಲ್ಲಿ ಈವರೆಗೂ ಬಿಜೆಪಿ ತನ್ನ ವಿರೋಧ ಪಕ್ಷದ ನಾಯಕನನ್ನು ನೇಮಿಸಲು ಹೆಣಗಾಡುತ್ತಿದೆ. ದಶಕಗಳ ಕಾಲ ರಾಜ್ಯದ ಆಡಳಿತ ಚುಕ್ಕಾಣಿ ಹಿಡಿದಿದ್ದ ಬಿಜೆಪಿಗೆ ಇಂಥ ದುರ್ಗತಿ ಬರಬಾರದಿತ್ತು ಎಂದು ವ್ಯಂಗ್ಯವಾಡಿದರು.

ಮೋದಿ ಅವರದು ಯಾವ ತರಹದ ಲೆಗ್ ಎಂದು ಕರೆಯಬೇಕು ?


ಎಐಸಿಸಿ ನಾಯಕ ರಾಹುಲ್ ಗಾಂಧಿ ಕುರಿತಂತೆ ‘ಐರನ್ ಲೆಗ್’ ಎಂದು ಈ ಹಿಂದೆ  ಬಿಜೆಪಿ ನಾಯಕರು ಆಡಿದ್ದ ಮಾತುಗಳು, ಚುನಾವಣೆಗೂ ಮುನ್ನ ಅವರು ಕೈಗೊಂಡ ಭಾರತ್ ಜೋಡೋ ಕಾರ್ಯಕ್ರಮದಿಂದ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅತ್ಯಧಿಕ ಸ್ಥಾನ ಪಡೆಯುವ ಮೂಲಕ ಅಧಿಕಾರಕ್ಕೆ ಬಂದು ಅವರೇನೆಂಬುದನ್ನು ಸಾಬೀತು ಮಾಡಿತು. ಆದರೆ,  ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ಅಭ್ಯರ್ಥಿ ಪರ ನಡೆಸಿದ್ದ ಚುನಾವಣೆ ಪ್ರಚಾರದಲ್ಲಿ ಬಹಳಷ್ಟು ಅಭ್ಯರ್ಥಿಗಳು ಗೆಲವು ಸಾಧಿಸಲೇ ಇಲ್ಲ. ಈಗ ಮೋದಿ ಅವರದು ಯಾವ ತರಹದ ಲೆಗ್ ಎಂದು ಕರೆಯಬೇಕು !? ಎಂದು ಮಾರ್ವಿಕವಾಗಿ ನುಡಿದರು.


ಗೌರಿ-ಗಣಪತಿ ಹಾಗೂ ಈದ್ ಮಿಲಾದ್ ಹಬ್ಬಗಳು ಸಮೀಪದಲ್ಲೆ ಇರುವ ಹಿನ್ನಲೆಯಲ್ಲಿ ಹಿಂದೂ, ಮುಸ್ಲಿಂ ಸಮಾಜ ಬಾಂಧವರು ಪರಸ್ಪರ ಶಾಂತಿ-ಸೌಹಾರ್ದದಿಂದ ಹಬ್ಬದ ಆಚರಣೆಗೆ ಮುಂದಾಗಬೇಕೆಂದು ಕರೆನೀಡಿ, ಸಮಸ್ತ ಜನತೆಗೂ ಹಬ್ಬದ ಶುಭ ಕೋರಿದರು.


ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ.ನಾಗರಾಜ್, ಪ್ರಧಾನ ಕಾರ್ಯದರ್ಶಿ ಸದಾಶಿವ ಶ್ರೇಷ್ಠಿ, ತಾ.ಪಂ. ಮಾಜಿ ಸದಸ್ಯ ಎರಗಿ ಉಮೇಶ್, ಆಶ್ರಯ ಸಮಿತಿ ಮಾಜಿ ಅಧ್ಯಕ್ಷ ಶ್ರೀನಿವಾಸ್ ಕಾಮತ್, ಹಿರಿಯರಾದ ಹೆಚ್. ಮಹಾಬಲರಾವ್, ಟೌನ್ ಘಟಕದ ಅಧ್ಯಕ್ಷ ಗುರುರಾಜ್, ಪಟ್ಟಣ ಪಂಚಾಯತಿ ಸದಸ್ಯ ಅಶ್ವಿನಿಕುಮಾರ್, ಎಂ.ಪಿ. ಸುರೇಶ್, ಹೆಚ್.ಎಂ. ನಿತ್ಯಾನಂದ,ಗೋಪಾಲ್, ಶಾಸಕರ ಆಪ್ತ ಕಾರ್ಯದರ್ಶಿ ಸಣ್ಣಕ್ಕಿ ಮಂಜು, ಜಯನಗರ ಗುರು, ನಾಸೀರ್, ನೇತ್ರಾ ಸುಬ್ರಾಯಭಟ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Leave A Reply

Your email address will not be published.

error: Content is protected !!