ಚಂದ್ರಗುತ್ತಿ ರೇಣುಕಾಂಬ ದೇವಿ ಪಲ್ಲಕ್ಕಿ ಉತ್ಸವಕ್ಕೆ ಚಾಲನೆ ; ಕಲಾ ತಂಡಗಳ ಮೆರಗು
ಸೊರಬ: ಪುರಾಣ ಪ್ರಸಿದ್ಧ ಚಂದ್ರಗುತ್ತಿ ಶ್ರೀ ರೇಣುಕಾಂಬ ದೇವಸ್ಥಾನಕ್ಕೆ ಭೂಮಿ ಹುಣ್ಣಿಮೆ ಅಂಗವಾಗಿ ಸಾವಿರಾರು ಭಕ್ತರು ಆಗಮಿಸಿ ಶ್ರೀ ದೇವಿಗೆ ವಿಶೇಷ ಪೂಜೆ ಸಲಿಸಿ, ದರ್ಶನ ಪಡೆದರು.
ಭೂಮಿ ಹುಣ್ಣಿಮೆ ನಿಮಿತ್ತವಾಗಿ ಶ್ರೀ ರೇಣುಕಾಂಬ ದೇವಿಯ ಪಲ್ಲಕ್ಕಿ ಉತ್ಸವ ದೇವಸ್ಥಾನದ ಆವರಣದಿಂದ ಆರಂಭವಾಗಿ, ಮಂಗಳಾರತಿ ಕಟ್ಟೆ, ಹರೀಶಿ ರಸ್ತೆ, ಮುಖ್ಯರಸ್ತೆ ಮಾರ್ಗವಾಗಿ ನಾಲ್ಕು ಕಾಲು ಮಂಟಪವರೆಗೆ ಜರುಗಿತು. ಪಲ್ಲಕ್ಕಿ ಉತ್ಸವಕ್ಕೆ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ವಿ.ಎಲ್. ಶಿವಪ್ರಸಾದ್ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು.
ಪಲ್ಲಕ್ಕಿ ಉತ್ಸವಕ್ಕೆ ಆನವಟ್ಟಿಯ ಯುವಕ ಮಂಡಳಿಯವರ ಡೊಳ್ಳು ಕುಣಿತ ಸೇರಿದಂತೆ ವಾಧ್ಯ ಮೇಳಗಳು ಮೆರಗು ತಂದವು. ದೇವಸ್ಥಾನದಲ್ಲಿ ಹುಣ್ಣಿಮೆ ಅಂಗವಾಗಿ ಮಹಾಮಂಗಳರಾತಿ, ವಿಶೇಷ ಅಲಂಕಾರ ಪೂಜೆ, ಭಕ್ತರಿಗೆ ತೀರ್ಥ-ಪ್ರಸಾದ ವಿನಿಯೋಗ ನಡೆಯಿತು. ದೇವರ ದರ್ಶನಕ್ಕೆ ತಾಲೂಕು ಸೇರಿದಂತೆ ಹಿರೇಕೆರೂರು, ಬ್ಯಾಡಗಿ, ಹಾವೇರಿ, ರಾಣೆಬೆನ್ನೂರು, ಹರಿಹರ, ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಭಕ್ತರು ಆಗಮಿಸಿದ್ದರು.
ದೇವಸ್ಥಾನ ಆವರಣದಲ್ಲಿ ದೇವರ ಹೆಸರಿನಲ್ಲಿ ನೈವೇದ್ಯ ಸಲ್ಲಿಸಿ ಕುಟುಂಬಸ್ಥರು ಹಾಗೂ ಸ್ನೇಹಿತರೊಡನೆ ಸಹ ಭೋಜನ ಮಾಡುವ ದೃಶ್ಯ ಕಂಡುಬಂದಿತು.
ರಾಹುಗ್ರಸ್ಥ ಚಂದ್ರಗ್ರಹಣ ಹಿನ್ನೆಲೆಯಲ್ಲಿ ರಾತ್ರಿ ನಡೆಯಬೇಕಿದ್ದ ಶ್ರೀ ದೇವಿಯ ಪಲ್ಲಕ್ಕಿ ಉತ್ಸವವನ್ನು ಮಧ್ಯಾಹ್ನವೇ ನೆರವೇರಿಸಲಾಯಿತು. ದೇವಸ್ಥಾನದಲ್ಲಿ ಮಧ್ಯಾಹ್ನ 3ರವರೆಗೆ ದೇವರ ಪೂಜಾ ಕೈಂಕರ್ಯಗಳಿಗೆ ಅವಕಾಶ ಕಲ್ಪಿಸಲಾಗಿತ್ತು. ಪೊಲೀಸ್ ಇಲಾಖೆಯಿಂದ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿತ್ತು.
ಗ್ರಾಪಂ ಉಪಾಧ್ಯಕ್ಷ ರೇಣುಕಾ ಪ್ರಸಾದ್, ಸದಸ್ಯ ಎಂ.ಪಿ. ರತ್ನಾಕರ, ಸೇರಿದಂತೆ ಊರ ಗ್ರಾಮಸ್ಥರು ಪಲ್ಲಕ್ಕಿ ಉತ್ಸವದಲ್ಲಿ ಪಾಲ್ಗೊಂಡಿದ್ದರು.