ಚುನಾವಣಾ ಜಾಹೀರಾತು ; ಎಲೆಕ್ಟ್ರಾನಿಕ್ ಮಾಧ್ಯಮಗಳಿಗೆ ಮಾರ್ಗಸೂಚಿ


ಶಿವಮೊಗ್ಗ: ಕರ್ನಾಟಕ ವಿಧಾನಸಭೆ ಚುನಾವಣೆಯ ಮತದಾನ ಮೇ 10 ರಂದು ನಡೆಯಲಿದ್ದು, ಈ ಹಿನ್ನೆಲೆಯಲ್ಲಿ
ಮತದಾನಕ್ಕೆ ನಿಗದಿಪಡಿಸಿರುವ ಅವಧಿ ಕೊನೆಗೊಳ್ಳುವ 48 ಗಂಟೆಗಳ ಮುಂಚೆ ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ (ಟಿವಿ, ಸಿನಿಮೆಟೊಗ್ರಾಫ್, ದೃಶ್ಯ, ಶ್ರವಣ) ಚುನಾವಣಾ ಸಂಬಂಧಿ ವಿಷಯಗಳ ಪ್ರಸಾರವನ್ನು ಪ್ರಜಾಪ್ರತಿನಿಧಿ ಕಾಯ್ದೆ 1951 ರ ಕಲಂ 120 ರ ಪ್ರಕಾರ ನಿಷೇಧಿಸಲಾಗಿದೆ.


ಚುನಾವಣಾ ಸಂಬಂಧಿ ವಿಷಯ ಎಂದರೆ ಚುನಾವಣಾ ಫಲಿತಾಂಶದ ಮೇಲೆ ಪ್ರಭಾವ ಅಥವಾ ಪರಿಣಾಮ ಬೀರುವಂತಹ ವಿಷಯಗಳಾಗಿರುತ್ತವೆ.
ಈ ಕಾಯ್ದೆಯನ್ನು ಉಲ್ಲಂಘಿಸುವವರಿಗೆ 02 ವರ್ಷಗಳವರೆಗೆ ವಿಸ್ತರಿಸಬಹುದಾದ ಕಾರಾಗೃಹ ಶಿಕ್ಷೆ ಅಥವಾ ದಂಡ ಅಥವಾ ದಂಡ ಮತ್ತು ಶಿಕ್ಷೆ ಎರಡನ್ನೂ ವಿಧಿಸಬಹುದಾಗಿದೆ.
ಟಿವಿ/ರೇಡಿಯೋ/ಕೇಬಲ್ ನೆಟ್‍ವರ್ಕ್ ಮತ್ತು ಎಲ್ಲ ಡಿಜಿಟಲ್ ಮಾಧ್ಯಮಗಳು ಮತದಾನ ಪೂರ್ವ 48 ಗಂಟೆಗಳ ಅವಧಿಯಲ್ಲಿ ಚುನಾವಣೆ ಸಂಬಂಧಿ ವಿಷಯಗಳ ಪ್ರಸಾರ ಮಾಡದಂತೆ ಕ್ರಮ ವಹಿಸಬೇಕು.


ಕಾರ್ಯಕ್ರಮದಲ್ಲಿ ಭಾಗವಹಿಸುವವರು(ಪ್ಯಾನಲ್ ಲಿಸ್ಟ್)ಯಾವುದೇ ಪಕ್ಷ ಅಥವಾ ಅಭ್ಯರ್ಥಿಗಳ ಪರ ಅಥವಾ ವಿರೋಧವಾಗಿರುವ ಅಭಿಪ್ರಾಯಗಳು/ಮನವಿಗಳು ಮತ್ತು ಚುನಾವಣಾ ಫಲಿತಾಂಶದ ಮೇಲೆ ಪ್ರಭಾವ ಬೀರುವಂತಹ ವಿಷಯಗಳನ್ನು ಕೂಡ ಪ್ರಸಾರ ಮಾಡಕೂಡದು.


ನಿಗದಿತ 48 ಗಂಟೆಗಳ ಅವಧಿಯಲ್ಲಿ ಒಪಿನಿಯನ್ ಪೋಲ್ ಫಲಿತಾಂಶ ಪ್ರಕಟಿಸುವುದು, ಚರ್ಚೆ ಅಥವಾ ವಿಶ್ಲೇಷಣೆ ಏರ್ಪಡಿಸುವುದು, ಅದೇ ರೀತಿ ಚುನಾವಣೋತ್ತರ ಸಮೀಕ್ಷೆಗಳನ್ನು ಪ್ರಸಾರ ಮಾಡುವುದು ಕೂಡ ಪ್ರಜಾಪ್ರತಿನಿಧಿ ಕಾಯ್ದೆ 1951 ರ ಕಲಂ 120 ರ ವ್ಯಾಪ್ತಿಯಲ್ಲಿ ಬರುತ್ತದೆ.


ಕರ್ನಾಟಕ ವಿಧಾನಸಭಾ ಚುನಾವಣೆ-2023 ರ ಅಂಗವಾಗಿ ಮೇ 10 ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಆದ್ದರಿಂದ ಎಲ್ಲಾ ಎಲೆಕ್ಟ್ರಾನಿಕ್ ಮತ್ತು ಡಿಜಿಟಲ್ ಮಾಧ್ಯಮಗಳು ಮೇ 08 ರ ಸಂಜೆ 6 ಗಂಟೆಯಿಂದ ಮೇ 10 ರ ಸಂಜೆ 6.30 ರವರೆಗೆ ಮೇಲ್ಕಂಡ ನಿರ್ದೇಶನಗಳನ್ನು ಪಾಲಿಸುವಂತೆ ತಿಳಿಸಲಾಗಿದೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,803FollowersFollow
0SubscribersSubscribe
- Advertisement -spot_img

Latest Articles

error: Content is protected !!