ಜಿಟಿಟಿಸಿ ಡಿಪ್ಲೋಮಾ ತರಬೇತಿಗೆ ಶಿಕ್ಷಣ ಸಚಿವರ ಪ್ರಶಂಸೆ

0 0


ಶಿವಮೊಗ್ಗ: ಆ.30 ರಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಮತ್ತು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್. ಮಧು ಬಂಗಾರಪ್ಪರವರು ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ (ಜಿಟಿಟಿಸಿ) ಮಾಚೇನಹಳ್ಳಿ ಇಲ್ಲಿಗೆ ಭೇಟಿ ನೀಡಿ, ಸಂಸ್ಥೆಯಲ್ಲಿ ನೀಡುತ್ತಿರುವ ತರಬೇತಿಯನ್ನು ಕೂಲಂಕುಷವಾಗಿ ಗಮನಿಸಿ, ವಿದ್ಯಾರ್ಥಿಗಳು ತಯಾರಿಸಿದ ಪ್ರಾಯೋಗಿಕ ಮಾದರಿಗಳನ್ನು ವೀಕ್ಷಿಸಿದರು.


ಜೇಷ್ಠತಾ ಕೇಂದ್ರದ ಲ್ಯಾಬ್‍ಗಳಾದ ತ್ರಿ ಡಿ ಪ್ರಿಂಟಿಂಗ್, ಬೇಸಿಕ್ ಆಫ್ ಪಿಎಲ್‍ಸಿ, ಐಒಟಿ, ಮತ್ತು ಸಿಎನ್‍ಸಿ ಲ್ಯಾಬ್ ಗಳನ್ನು ಪರಿಶೀಲಿಸಿ ಮಾಹಿತಿಯನ್ನು ಪಡೆದರು. ತದನಂತರ ಡಿಪ್ಲೋಮಾ ಇನ್ ಟೂಲ್ ಆಂಡ್ ಡೈ ಮೇಕಿಂಗ್ ಕೋರ್ಸ್ ನ ವಿದ್ಯಾರ್ಥಿಗಳು ತರಬೇತಿ ಪಡೆಯುತ್ತಿರುವ ಯಂತ್ರಗಳನ್ನು ಹಾಗೂ ವಿದ್ಯಾರ್ಥಿಗಳು ಮಾಡುತ್ತಿರುವ ಪ್ರೆಸ್ ಟೂಲ್ ಡಿಸೈನ್ ಮತ್ತು ಮೌಲ್ಡ್ ಡಿಸೈನ್ ಗಳನ್ನು ನೋಡಿ ಪ್ರಶಂಸೆ ವ್ಯಕ್ತಪಡಿಸಿದರು. ತರಬೇತಿಯ ನಂತರ ವಿದ್ಯಾರ್ಥಿಗಳಿಗೆ ಶೇಕಡಾ ನೂರು ಪ್ರತಿಶತ ಉದ್ಯೋಗಾವಕಾಶ ದೊರೆಯುವುದನ್ನು ತಿಳಿದು ತರಬೇತಿಯ ಕ್ರಮವನ್ನು ಶ್ಲಾಘಿಸಿದರು. ಇದೇ ವೇಳೆ ಹಿಂದೆ ಅವರೂ ಸಹ ಯಂತ್ರಾಗಾರದಲ್ಲಿ ಕೆಲಸ ಮಾಡಿದ್ದನ್ನು ನೆನಪಿಸಿಕೊಂಡರು.


ಸಂಸ್ಥೆಯು ಹಾಲಿನ ಡೈರಿ ಬಸ್ ನಿಲ್ದಾಣದಿಂದ ಸುಮಾರು 1.5 ಕಿ ಮೀ ದೂರದಲ್ಲಿ ಇದ್ದು ಸರ್ಕಾರಿ ಬಸ್ ಸೌಲಭ್ಯವನ್ನು ಡೈರಿಯಿಂದ ಕಾಲೇಜಿನವರೆಗೆ ಕಲ್ಪಿಸಿ ಕೊಡುವಂತೆ ಸಂಸ್ಥೆಯ ವತಿಯಿಂದ ವಿನಂತಿಸಿದಾಗ, ಸಚಿವರು ವ್ಯವಸ್ಥೆ ಕಲ್ಪಿಸಿಕೊಡುವುದಾಗಿ ಭರವಸೆ ನೀಡಿದರು. ಎಲ್ಲಾ ಸಿಬ್ಬಂದಿಗಳ ಗುಣಮಟ್ಟದ ತರಬೇತಿ ಮತ್ತು ಕಾರ್ಯ ವೈಖರಿಯನ್ನು ಮೆಚ್ಚಿದರು.
ಸಂಸ್ಥೆಯ ಅಭಿಪ್ರಾಯ ಪುಸ್ತಕದಲ್ಲಿ ಈ ಕೆಳಗಿನಂತೆ ಅಭಿಪ್ರಾಯ ವ್ಯಕ್ತಪಡಿಸಿದರು.


“ನಿಮ್ಮ ಕೆಲಸವನ್ನು ವೀಕ್ಷಿಸಲು ಮತ್ತು ವಿದ್ಯಾರ್ಥಿಗಳು ಕಲಿಯುತ್ತಿರುವಾಗ ಕೆಲಸದಲ್ಲಿರುವುದನ್ನು ನೋಡುವುದು ನನಗೆ ಉತ್ತಮ ಅನುಭವವಾಗಿದೆ. ನಿಮ್ಮ ಒಳ್ಳೆಯ ಕೆಲಸವನ್ನು ಉಳಿಸಿಕೊಳ್ಳಿ. ನಿಮಗೆ ಅಗತ್ಯವಿರುವ ಯಾವುದೇ ಸಹಾಯ ಬಗ್ಗೆ ದಯವಿಟ್ಟು ನನಗೆ ತಿಳಿಸಬಹುದು. ಅಗತ್ಯವಿದ್ದರೆ ಮತ್ತು ಬೇಡಿಕೆ ಇದ್ದರೆ ನಾವು ಯಾವುದೇ ಸಹಾಯ ನೀಡಲು ಸಿದ್ಧರಿದ್ದೇವೆ ಎಂದು ನಾನು ಭಾವಿಸುತ್ತೇನೆ. ನೀವು ನೀಡುತ್ತಿರುವ ಸೇವೆಗಳಿಗಾಗಿ ನಾನು ವೈಯಕ್ತಿಕವಾಗಿ ಆಡಳಿತ ಮತ್ತು ಎಲ್ಲಾ ಸಿಬ್ಬಂದಿಗಳಿಗೆ ಧನ್ಯವಾದ ಹೇಳುತ್ತೇನೆ.”


ಭೇಟಿ ವೇಳೆ ಜಿಲ್ಲಾಧಿಕಾರಿ ಡಾ. ಸೆಲ್ವಮಣಿ, ಆರ್, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಮಿಥುನ್ ಕುಮಾರ್,ಜಿ.ಪಂ ಸಿಇಓ ಸ್ನೇಹಲ್ ಸುಧಾಕರ್ ಲೋಖಂಡೆ, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ, ಕೆ ಐ ಡಿ ಬಿ ಇ, ಕೆ ಎಸ್ ಎಸ್ ಐ ಡಿ ಸಿ ಮತ್ತು ಮೆಸ್ಕಾಂ ನ ಅಧಿಕಾರಿಗಳು, ನ್ಯೂ ಟೌನ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.


ಸಂಸ್ಥೆಯ ಘಟಕ ಮುಖ್ಯಸ್ಥರು ಹಾಗೂ ಅಭಿಯಂತರಾದ ನಾಗರಾಜ ಹೆಚ್ ಪಿ, ಪ್ರಾಂಶುಪಾಲರಾದ ಕಿರಣ್ ಕುಮಾರ್, ಅಭಿಯಂತರಾದ ದೀಪಕ್ ಕುಮಾರ್ ವಿ ಆರ್, ಆಡಳಿತ ಅಧಿಕಾರಿ ಪ್ರಮೇಶ್ವರಪ್ಪ ಎಂ ಹಾಗೂ ಸಿಬ್ಬಂದಿ ವರ್ಗದವರು ಜೊತೆಗಿದ್ದು ಸಂಸ್ಥೆಯ ಪೂರ್ಣ ಮಾಹಿತಿಯನ್ನು ಒದಗಿಸಿದರು.

Leave A Reply

Your email address will not be published.

error: Content is protected !!