ಜಿಲ್ಲಾ ಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಅನುಚಿತ ವರ್ತನೆ ; ಖಂಡನೆ

0 127

ಶಿವಮೊಗ್ಗ : ಇತ್ತೀಚೆಗೆ ನಡೆದ ಸರ್ಕಾರಿ ಹಾಗೂ ಅನುದಾನರಹಿತ ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕ ಶಾಲೆಗಳ ಬಾಲಕ-ಬಾಲಕಿಯರ ಜಿಲ್ಲಾ ಮಟ್ಟದ ಕರಾಟೆ ಪಂದ್ಯಾವಳಿ ಸಂದರ್ಭದಲ್ಲಿ ಕೆಲವರು ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಹಾಗೂ ಜಿಲ್ಲಾ ಪ್ರಭಾರ ದೈಹಿಕ ಶಿಕ್ಷಣಾಧಿಕಾರಿ ನಿರಂಜನಮೂರ್ತಿಯವರಿಗೆ ನಿಂದಿಸಿ ಮಾತನಾಡಿದ್ದನ್ನು ಜಿಲ್ಲಾ ಕರಾಟೆ ಸ್ಪೋರ್ಟ್ಸ್, ಕರಾಟೆ-ಡೊ ಸಂಸ್ಥೆಯು ಖಂಡಿಸುತ್ತದೆ ಎಂದು ಅಧ್ಯಕ್ಷ ಚಂದ್ರಕಾಂತ್ ಜಿ. ಭಟ್ ಹೇಳಿದರು.


ಅವರು ಬುಧವಾರ ಮೀಡಿಯಾ ಹೌಸ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಳೆದ ಸೆ.23ರಂದು ದುರ್ಗಿಗುಡಿ ಪ್ರೌಢಶಾಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ, ತಾಲೂಕು ದೈಹಿಕಶಿಕ್ಷಕರ ಸಂಘ ಹಾಗೂ ಕರಾಟೆ ತೀರ್ಪುಗಾರರ ಸಹಭಾಗಿತ್ವದಲ್ಲಿ ಜಿಲ್ಲಾ ಮಟ್ಟದ ಕರಾಟೆ ಪಂದ್ಯಾವಳಿ ನಡೆದಿತ್ತು. ಈ ಪಂದ್ಯಾವಳಿಯಲ್ಲಿ 400ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ್ದರು ಎಂದರು.


ಪಂದ್ಯಾವಳಿಯಲ್ಲಿ ಭಾಗವಹಿಸಲು ಅನೇಕ ನಿಯಮಾವಳಿ ರೂಪಿಸಲಾಗಿತ್ತು. ವ್ಯವಸ್ಥಿತವಾಗಿ ಪಂದ್ಯಾವಳಿ ನಡೆಯಲು ಅನುಕೂಲವಾಗುವಂತೆ ಕ್ರೀಡಾಪಟುಗಳ ತೂಕ ಹಾಗೂ ಅರ್ಹತಾ ಪ್ರಮಾಣ ಪತ್ರಗಳ ಪರಿಶೀಲನೆ ನಡೆಯಿತು. ಈ ಅರ್ಹತಾ ಪತ್ರಕ್ಕೆ ಶಾಲಾ ಮುಖ್ಯೋಪಾಧ್ಯಾಯರ ಸಹಿ ಹಾಗೂ ಸೀಲ್ ಇರಬೇಕಿತ್ತು. ಆದರೆ ಹಲವರು ಈ ನಿಯಮವನ್ನು ಮೀರಿ ಯಾವ ಸಹಿಯೂ ಇಲ್ಲದ ಪ್ರಮಾಣ ಪತ್ರ ತಂದಿದ್ದರು. ತೀರ್ಪುಗಾರರು ಇವುಗಳನ್ನು ತಿರಸ್ಕರಿಸಿದ್ದರು. ಇದನ್ನೇ ನೆಪವಾಗಿಟ್ಟುಕೊಂಡು ಕೆಲವು ಪೋಷಕರು ಮತ್ತು ಕೆಲವು ಅನಧಿಕೃತ ಕರಾಟೆ ಸಂಸ್ಥೆಗಳು ಆಯೋಜಕರಾಗಿದ್ದ ನಿರಂಜನಮೂರ್ತಿಯವರಿಗೆ ಅವಹೇಳನಕಾರಿ ಮಾತನಾಡಿದ್ದರು. ಕೆಲವು ಪತ್ರಿಕೆಗಳಲ್ಲಿ ಇದು ಪ್ರಕಟವೂ ಆಗಿತ್ತು. ಇದು ಖಂಡನೀಯ ಎಂದರು.


ಈ ಬಾರಿಯ ಕ್ರೀಡಾಕೂಟ ಅತ್ಯಂತ ಯಶಸ್ವಿಯಾಗಿ ನಡೆದಿದೆ. ವ್ಯವಸ್ಥಿತವಾಗಿ ಅಧಿಕಾರಿ ವರ್ಗದವರು ಸ್ಪಂದಿಸಿದ್ದಾರೆ. ಆದರೆ ಪ್ರತಿ ಬಾರಿಯಂತೆ ಹೇಗೇಗೋ ಪಂದ್ಯಾವಳಿ ನಡೆದಿಲ್ಲ. ತುಂಬಾ ಬಿಗಿಯಾದ ನಿಯಮಾವಳಿಗಳನ್ನು ಅನುಸರಿಸಲಾಗಿತ್ತು. ಒಂದು ಶಾಲೆಯಿಂದ ಒಬ್ಬ ಕ್ರೀಡಾಪಟುವಿಗೆ ಅವಕಾಶ ನೀಡಲಾಗಿತ್ತು. ಆದರೆ ಇಬ್ಬರು ಬಂದಿದ್ದರಿಂದ ಒಬ್ಬರಿಗೆ ಅವಕಾಶ ನೀಡಲಾಗಿತ್ತು. ಕ್ರೀಡೆ ನಡೆಯುವ ಸ್ಥಳದಲ್ಲಿ ಪೋಷಕರಿಗೆ ಹಾಗೂ ಸಾರ್ವಜನಿಕರಿಗೆ ಅವಕಾಶ ಇರಲಿಲ್ಲ ಎಂದರು.


ಇಷ್ಟೆಲ್ಲಾ ಅಚ್ಚುಕಟ್ಟಾಗಿ ನಡೆದಿದ್ದರೂ ಕೂಡ ಕೆಲವರು ಬೇಕೆಂದೇ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ. ಅಧಿಕಾರಿಗಳನ್ನು ನಿಂದಿಸುವ ಮಟ್ಟಕ್ಕೆ ಹೋಗಿದ್ದಾರೆ. ಕರಾಟೆಯ ಹೆಸರಲ್ಲಿ ಅನಧಿಕೃತ ಕರಾಟೆ ಸಂಸ್ಥೆಗಳು ಹುಟ್ಟಿಕೊಂಡಿವೆ. ಅವರ ಹತ್ತಿರ ಹಣ ಇರುವುದರಿಂದ ಬೇಗನೇ ಪ್ರಚಾರ ಪಡೆಯುತ್ತಾರೆ. ಹಾಗೂ ಕ್ರೀಡೆಗಳನ್ನು ಸರಿಯಾಗಿ ಕಲಿಸುವುದಿಲ್ಲ. ಇದು ತಪ್ಪಬೇಕು. ಅರ್ಹ ಪ್ರತಿಭಾವಂತರಿಗೆ ಅವಕಾಶ ಸಿಗಬೇಕು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಪ್ರಮುಖರಾದ ನವೀನ್, ಮಹಾಬಲ ಜೋಯ್ಸ್, ಮಿಥುನ್, ರಾಘವೇಂದ್ರ, ಸಾದಿಕ್ ಇದ್ದರು.

Leave A Reply

Your email address will not be published.

error: Content is protected !!