ಜೆಡಿಎಸ್ ಬಿಜೆಪಿಯೊಂದಿಗೆ ಮೈತ್ರಿ ಸ್ವಾಗತಾರ್ಹ ; ಕೆ‌.ಬಿ‌. ಪ್ರಸನ್ನ ಕುಮಾರ್

0 89

ಶಿವಮೊಗ್ಗ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಜೆಡಿಎಸ್ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವುದನ್ನು ಜಿಲ್ಲಾ ಜೆಡಿಎಸ್ ಸ್ವಾಗತಿಸುತ್ತದೆ ಎಂದು ಮಾಜಿ ಶಾಸಕ, ಜೆಡಿಎಸ್ ಕೋರ್ ಕಮಿಟಿ ಸದಸ್ಯ ಕೆ.ಬಿ. ಪ್ರಸನ್ನಕುಮಾರ್ ಹೇಳಿದರು.


ಅವರು ಬುಧವಾರ ಜೆಡಿಎಸ್ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ದೇವೇಗೌಡರು, ರಾಜ್ಯಾಧ್ಯಕ್ಷರಾದ ಸಿ.ಎಂ. ಇಬ್ರಾಹಿಂ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಜಿ.ಟಿ. ದೇವೇಗೌಡ ಮುಂತಾದವರು ಮಾತುಕತೆ ನಡೆಸಿ ನಂತರ ಬಿಜೆಪಿಯೊಂದಿಗೆ ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡಿರುವುದಾಗಿ ತಿಳಿಸಿದ್ದಾರೆ. ಈ ನಿರ್ಧಾರವನ್ನು ಜಿಲ್ಲಾ ಜೆಡಿಎಸ್ ಕಾರ್ಯಾಧ್ಯಕ್ಷ ರಾಮಕೃಷ್ಣ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಮೈತ್ರಿಯನ್ನು ಸ್ವಾಗತಿಸಿದ್ದೇವೆ ಎಂದರು.


ಶಿವಮೊಗ್ಗದ ಸ್ಮಾರ್ಟ್ ಸಿಟಿಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಸ್ಮಾರ್ಟ್ ಸಿಟಿ ಯೋಜನೆಗೆ ಶಿವಮೊಗ್ಗ ಆಯ್ಕೆಯಾದಾಗ ಹಬ್ಬದ ವಾತಾವರಣವಿತ್ತು. ಆಗ ನಾನೇ ಶಾಸಕನಾಗಿದ್ದೆ. ತುಂಬಾ ಕನಸುಗಳಿದ್ದವು. ಆದರೆ ನಂತರದ ರಾಜಕೀಯ ಬದಲಾವಣೆಗಳಿಂದ ಈ ಯೋಜನೆ ಹಳ್ಳ ಹಿಡಿದಿದೆ. ಕಾಮಗಾರಿಗಳೆಲ್ಲ ಕಳಪೆಯಾಗಿವೆ. ಜಿಲ್ಲಾ ಉಸ್ತುವಾರಿ ಸಚಿವರು ತನಿಖೆ ಮಾಡುವುದಾಗಿ ತಿಳಿಸಿದ್ದಾರೆ. ಇದನ್ನು ಸ್ವಾಗತಿಸುತ್ತೇವೆ. ತನಿಖೆ ಶೀಘ್ರವೇ ಆಗಬೇಕು. ಎಲ್ಲಾ ರೀತಿಯಲ್ಲೂ ಆಗಬೇಕು ಎಂದರು.


ಬರಗಾಲ ಕಾಲಿಟ್ಟಿದೆ. ಘೋಷಣೆಯೂ ಆಗಿದೆ.ಇಂತಹ ಸಂದರ್ಭದಲ್ಲಿ ಎಲ್ಲಾ ಬ್ಯಾಂಕುಗಳು, ಸಹಕಾರಿ ಬ್ಯಾಂಕುಗಳು ರೈತರ ಸಾಲ ವಸೂಲಾತಿ ಮಾಡಬಾರದು.ಕಾಲಾವಕಾಶ ನೀಡಬೇಕು. ಸರ್ಕಾರ ಮತ್ತು ಅಧಿಕಾರಿಗಳು ಚುರುಕಾಗಬೇಕು. ಪರಿಹಾರದ ಬಗ್ಗೆ ಯೋಚಿಸಬೇಕು.ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಬೇಕು. ಸರ್ಕಾರ ಅಧಿಕಾರಿಗಳ ಮೇಲೆ ನಿಯಂತ್ರಣ ಇಟ್ಟುಕೊಳ್ಳಬೇಕು. ಒಟ್ಟಾರೆ ಇಂತಹ ಸಂದರ್ಭದಲ್ಲಿ ಯುದ್ಧೋಪಾದಿಯಲ್ಲಿ ಕೆಲಸ ನಿರ್ವಹಿಸಬೇಕು ಎಂದರು.


ಗಣಪತಿ ಮತ್ತು ಈದ್ ಮಿಲಾದ್ ಒಟ್ಟಿಗೆ ಬಂದಿವೆ. ಒಂದೇ ದಿನ ಎರಡೂ ಸಮುದಾಯದವರ ಮೆರವಣಿಗೆ ಇತ್ತು. ಜಿಲ್ಲಡಳಿತ ಮತ್ತು  ಪೊಲೀಸ್ ಇಲಾಖೆಗೆ ಆತಂಕವೂ ಇತ್ತು. ಆದರೆ ಮುಸಲ್ಮಾನ ಬಾಂಧವರು ಶಿವಮೊಗ್ಗದ ಶಾಂತಿ ಬಯಸಿ ಮೆರವಣಿಗೆಯನ್ನೇ ಮುಂದಕ್ಕೆ ಹಾಕಿದ್ದಾರೆ. ಓಂ ಗಣಪತಿ ಸಮಿತಿಯವರು ಕೂಡ ಮೆರವಣಿಗೆಯನ್ನು ಮುಂದೂಡಿ ಕೈಜೋಡಿಸಿದ್ದಾರೆ. ಇದು ಸ್ವಾಗತದ ವಿಷಯ. ಹಬ್ಬ ಶಾಂತಿಯುತವಾಗಿರಲಿ ಎಂದರು.


ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ರಾಮಕೃಷ್ಣ, ದಾದಾಪೀರ್, ಅಬ್ದುಲ್ ವಾಜೀದ್, ಆಯನೂರು ಶಿವಾನಾಯ್ಕ, ಬೊಮ್ಮನಕಟ್ಟೆ ಮಂಜುನಾಥ್, ತ್ಯಾಗರಾಜ್, ಕಡಿದಾಳ್ ದಿವಾಕರ್, ಎಸ್.ವಿ. ರಾಜಮ್ಮ, ಗೀತಾ ಸತೀಶ್, ಪುಷ್ಪಾ, ಸುಬ್ಬೇಗೌಡ, ದೀಪಕ್ ಸಿಂಗ್, ವಿನಯ್, ರಾಜಾರಾಮ್, ರಿಚರ್ಡ್ ಕೋಟ್ಯಾನ್ ಸೇರಿದಂತೆ ಹಲವರಿದ್ದರು.

Leave A Reply

Your email address will not be published.

error: Content is protected !!