ತಂದೆ ಮೇಲಿನ ಪ್ರೀತಿಯಿಂದ ನಾಡಿನೆಲ್ಲೆಡೆ ನನಗೂ ಗೌರವ ಅಭಿನಂದನೆ ಸಿಗುತ್ತಿದೆ ; ಮಧು ಬಂಗಾರಪ್ಪ

0 91


ಶಿವಮೊಗ್ಗ: ಮಾಜಿ ಮುಖ್ಯಮಂತ್ರಿ ಬಂಗಾರಪ್ಪನವರ ಮೇಲಿನ ಪ್ರೀತಿಯಿಂದ ನಾಡಿನ ಎಲ್ಲೆಡೆ ನನಗೂ ಗೌರವ ಅಭಿನಂದನೆ ಸಿಗುತ್ತಿದೆ. ನನ್ನ ಎಲ್ಲಾ ಸನ್ಮಾನವನ್ನು ನನ್ನ ತಂದೆಯವರಿಗೆ ಅರ್ಪಣೆ ಮಾಡುತ್ತೇನೆ ಎಂದು ಜಿಲ್ಲಾ ಉಸ್ತುವರಿ, ಶಿಕ್ಷಣ ಸಚಿವ ಮಧು ಬಂಗಾರಪ್ಪ  ಹೇಳಿದ್ದಾರೆ.


ಅವರು ಇಂದು ಜಿಲ್ಲಾ ವಕೀಲರ ಭವನದಲ್ಲಿ ಶಿವಮೊಗ್ಗ ಜಿಲ್ಲಾ ವಕೀಲರ ಸಂಘದ ವತಿಯಿಂದ ಜಿಲ್ಲೆಯ ಸಚಿವರು ಮತ್ತು ಶಾಸಕರುಗಳಿಗೆ ಏರ್ಪಡಿಸಿದ ಅಭಿನಂದನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ನಮ್ಮ ತಂದೆಯವರ ಜನಪ್ರಿಯತೆ ಅವರ ಶಿಸ್ತು ಮತ್ತು ಜನ ಸಾಮಾನ್ಯರ ಬಗ್ಗೆ ಅವರಿಗೆ ಇರುವ ಕಾಳಜಿ ನನಗೆ ಅನೇಕ ಪಾಠ ಕಲಿಸಿದೆ. ಸಾಮಾನ್ಯವಾಗಿ ವಕೀಲರು ಹೆಚ್ಚಾಗಿ ರಾಜಕಾರಣಕ್ಕೆ ಬರುತ್ತಾರೆ. ಆದರೆ ಅವರ ಅಧಿಕಾರದಲ್ಲಿ ಇದ್ದಾಗ ಏನು ಮಾಡಿದ್ದಾರೆ ಅದರ ಮೇಲೆ ಜನಪ್ರಿಯತೆ ಹೆಚ್ಚುತ್ತಾ ಹೋಗುತ್ತದೆ. ನನಗೆ ಸೊರಬದ ಜನತೆ ಅಭೂತಪೂರ್ವ ಗೆಲುವು ನೀಡಿ, ಜನರ ಆರ್ಶೀವಾದದಿಂದ ಉತ್ತಮ ಖಾತೆ ಸಿಕ್ಕಿದೆ. ಶಿಕ್ಷಣ ಇಲಾಖೆಯಲ್ಲಿ ಕೆಲಸ ಮಾಡುವ ಯೋಗ ಬಂದಿದೆ. ದೇವರಿಗೆ ದೀಪ ಹಚ್ಚುವುದು ಮತ್ತು ಓರ್ವ ವಿದ್ಯಾರ್ಥಿಗೆ ಶಿಕ್ಷಣ ನೀಡುವುದು ಎರಡು ಒಂದೇ ಎಂದು ನಾನು ಭಾವಿಸಿದ್ದೇನೆ. ಅತಿ ಹೆಚ್ಚು ಸರ್ಕಾರಿ ಶಾಲೆಯನ್ನು ತೆರೆದು ಎಲ್ಲಾ ವಿದ್ಯಾರ್ಥಿಗಳಿಗೂ ಶಿಕ್ಷಣ ನೀಡಬೇಕು. ಯಾರೂ ಶಿಕ್ಷಣದಿಂದ ವಂಚಿತರಾಗಬಾರದು ಎನ್ನುವುದು ನನ್ನ ಇಚ್ಛೆ. ಸರ್ಕಾರಿ ಶಾಲೆಗಳಿಗೆ ಬರುವ ಹಾಗೆ ನನ್ನ ಅವಧಿಯಲ್ಲಿ ಮಾಡುತ್ತೇನೆ ಎಂಬ ಭರವಸೆ ನೀಡಿದರು.


ಅವರ ಬಗ್ಗೆ ಪರಿಚಯ ಭಾಷಣದಲ್ಲಿ ಮಧುಬಂಗಾರಪ್ಪನವರ ವಿವರಣೆಯನ್ನು ನೀಡುತ್ತಿದ್ದ ವಕೀಲ ಲಕ್ಷ್ಮಿಕಾಂತ್ ಚಿಮಣ್ಣೂರ ಅವರನ್ನು ಉದ್ದೇಶಿಸಿ ನಿಮ್ಮ ಪರಿಚಯದಲ್ಲಿ ಹೇಳಿದ ಪ್ರಕಾರ ನಾನು ಪದವಿ ಪೂರ್ಣಗೊಳಿಸಿಲ್ಲ. ನಾನು ಓದಿದ್ದು ಕೇವಲ 12ನೇ ತರಗತಿ ಅದಕ್ಕೆ ನನಗೆ ಪ್ರೌಢಶಿಕ್ಷಣ ಖಾತೆ ನೀಡಿದ್ದಾರೆ. ಸತ್ಯವನ್ನು ಮರೆಮಾಚಬಾರದು ಎಂದು ಹೇಳಿದ್ದು, ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು.


ಇದೇ ಸಂದರ್ಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಶಿವಮೊಗ್ಗ ನಗರ ಶಾಸಕ ಚೆನ್ನಬಸಪ್ಪ ನಮ್ಮ ಜಿಲ್ಲೆಯ ಅನೇಕ ಹಿರಿಯ ರಾಜಕಾರಣಿಗಳಲ್ಲಿ ಮಾಜಿ ಮುಖ್ಯಮಂತ್ರಿ ಬಂಗಾರಪ್ಪನವರ ನಡವಳಿಕೆ ಆದರ್ಶಪ್ರಾಯವಾಗಿದೆ. ಯಾವುದೇ ಪಕ್ಷ, ಜಾತಿ ಇರಲಿ ಅವರ ವರ್ತನೆಯಲ್ಲಿ ವ್ಯತ್ಯಾಸವಾಗುತ್ತಿರಲಿಲ್ಲ. ಎಲ್ಲರನ್ನೂ ಪ್ರೀತಿಯಿಂದ ಮಾತನಾಡಿಸಿ ತಮ್ಮಿಂದಾದ ನೆರವು ನೀಡುತ್ತಿದ್ದರು. ಅಭಿವೃದ್ಧಿಯಲ್ಲಿ ಕೂಡ ಎಂದು ರಾಜಕಾರಣ ಮಾಡಿಲ್ಲ. ವೈಚಾರಿಕ ಭಿನ್ನತೆ ಏನೇ ಇರಬಹುದು. ಶಿವಮೊಗ್ಗದ ಹಿರಿಯ ರಾಜಕಾರಣಿಗಳು ತಮ್ಮ ರಾಜಕಾರಣದಿಂದ ಸಂಬಂಧ ಕೆಡಿಸಿಕೊಂಡಿಲ್ಲ. ನಾವು ಕೂಡ ಹಿರಿಯ ರಾಜಕಾರಣಿಗಳ ಆದರ್ಶವನ್ನು ಪಾಲಿಸಬೇಕು ಎಂದರು.
ಈ ಸಂದರ್ಭದಲ್ಲಿ ಮಾಜಿ ಸಂಸದ ಆಯನೂರು ಮಂಜುನಾಥ್‌ರವರನ್ನು ಕೂಡ ವಕೀಲರ ಸಂಘದಿಂದ ಸನ್ಮಾನಿಸಲಾಯಿತು.


ವೇದಿಕೆಯಲ್ಲಿ ಹಿರಿಯ ವಕೀಲರಾದ ಶ್ರೀಪಾಲ್, ಸಂಘದ ಅಧ್ಯಕ್ಷ ಬಿ.ಜಿ. ಶಿವಮೂರ್ತಿ, ಕಲಗೋಡು ರತ್ನಾಕರ್, ಚಂದ್ರೇಗೌಡ, ವಕೀಲರ ಸಂಘದ ಪದಾಧಿಕಾರಿಗಳಾದ ವಿದ್ಯಾರಾಣಿ, ಚಂದ್ರಕುಮಾರ್, ಹಾಗೂ ಸಂಘದ ನಿರ್ದೇಶಕರುಗಳು, ವಕೀಲರು ಉಪಸ್ಥಿತರಿದ್ದರು.

Leave A Reply

Your email address will not be published.

error: Content is protected !!