ತಾಯಿ ಮರಣ ಪ್ರಮಾಣ ತಗ್ಗಿಸಲು ಡಿಸಿ ಸೂಚನೆ

0 176


ಶಿವಮೊಗ್ಗ : ಹೆರಿಗೆಗೆಂದು ಆಸ್ಪತ್ರೆಗಳಿಗೆ ಬರುವ ಗಂಭೀರ ಪ್ರಕರಣಗಳನ್ನು ವೈದ್ಯರು/ಸಿಬ್ಬಂದಿಗಳು ಯಾವುದೇ ರೀತಿಯ ನಿರ್ಲಕ್ಷ್ಯ ವಹಿಸದೇ ಶೀಘ್ರವಾಗಿ ಚಿಕಿತ್ಸೆ ನೀಡುವ ಮೂಲಕ ತಾಯಿ ಮರಣ ಪ್ರಮಾಣವನ್ನು ತಗ್ಗಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆರ್ ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇಂದು ನಡೆದ ಆರೋಗ್ಯ ಇಲಾಖೆಯ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.


ತಾಯಿ ಮರಣ ಆಡಿಟ್ ನಡೆಸಿದ ಅವರು, 2023 ರ ಮಾರ್ಚ್‍ನಿಂದ ಆಗಸ್ಟ್‍ವರೆಗೆ ಒಟ್ಟು 9 ತಾಯಿ ಮರಣ ಪ್ರಕರಣ ದಾಖಲಾಗಿದೆ. ಜಿಲ್ಲೆಯ 04 ಮತ್ತು ಹೊರ ಜಿಲ್ಲೆಯ 5 ಪ್ರಕರಣಗಳಿವೆ. ಜಿಲ್ಲೆಯ ಪ್ರಕರಣ ಆಗಿರಬಹುದು ಅಥವಾ ಹೊರ ಜಿಲ್ಲೆಯದ್ದಾಗಿರಬಹುದು ಕರ್ತವ್ಯ ನಿರತ ವೈದ್ಯರು, ಸಿಬ್ಬಂದಿಗಳು ಹೆರಿಗೆಗೆ ಬಂದಂತಹ ಪ್ರಕರಣಗಳನ್ನು ಆದಷ್ಟು ಶೀಘ್ರವಾಗಿ, ವಿಳಂಬವಿಲ್ಲದಂತೆ, ಯಾವುದೇ ರೀತಿಯ ನಿರ್ಲಕ್ಷ್ಯ ತೋರದೆ ಚಿಕಿತ್ಸೆ ನೀಡುವ ಮೂಲಕ ತಾಯಿ ಮರಣ ಪ್ರಮಾಣವನ್ನು ಸಂಪೂರ್ಣವಾಗಿ ತಗ್ಗಿಸಬೇಕೆಂದು ಸೂಚನೆ ನೀಡಿದರು. ಹಾಗೂ ದಾವಣಗೆರೆಗೆ ಸಂಬಂಧಿಸಿದ 01 ಪ್ರಕರಣವನ್ನು ಅಲ್ಲಿಗೆ ವರ್ಗಾಯಿಸಿದರು.


ಎ.ಬಿ.ಎ.ಆರ್‍.ಕೆ – ಹಣ ಕಟ್ಟಿಸಿಕೊಂಡ ಆಸ್ಪತ್ರೆಗಳಿಗೆ ನೋಟಿಸ್ :
ಆಯುಷ್ಮಾನ್‍ಭಾರತ್ ಆರೋಗ್ಯ ಕರ್ನಾಟಕ(ಎಬಿಎಆರ್‍ಕೆ)ಯೋಜನೆಯಡಿ ಉಚಿತ ಆರೋಗ್ಯ ಸೇವೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ ಜಿಲ್ಲಾ ಕುಂದುಕೊರತೆ ಪರಿಹಾರ ಸಮಿತಿ ಮುಂದೆ ಹಾಜರುಪಡಿಸಲಾದ 15 ಪ್ರಕರಣಗಳ ಕುರಿತು ವೈದ್ಯರು, ಆಸ್ಪತ್ರೆಯ ನೌಕರರು, ರೋಗಿಗಳ ಕಡೆಯವರ ಸಮ್ಮುಖದಲ್ಲಿ ಪರಿಶೀಲನೆ ನಡೆಸಿದರು.


ಕೊಟ್ಟೂರೇಶ್ವರ ಮಕ್ಕಳ ಆಸ್ಪತ್ರೆಯ 11 ಪ್ರಕರಣಗಳು ಹಾಗೂ ಮ್ಯಾಕ್ಸ್, ಎನ್‍ಹೆಚ್ ಸೇರಿದಂತೆ ಒಟ್ಟು 15 ದೂರುಗಳನ್ನು ಆಲಿಸಿದ ಅವರು, ಉಚಿತ ಸೇವೆಗೆ ರೋಗಿಗಳ ಕಡೆಯವರಿಂದ ಹಣ(ಬಿಲ್) ಕಟ್ಟಿಸಿಕೊಂಡ ಬಗ್ಗೆ ವರದಿ ಪಡೆದುಕೊಂಡ ಅವರು ಬಿಲ್ ಕಟ್ಟಿಸಿಕೊಂಡವರಿಗೆ ಸದರಿ ಮೊತ್ತವನ್ನು ಶೀಘ್ರದಲ್ಲಿ ಮರು ಪಾವತಿ ಮಾಡುವಂತೆ ಆಸ್ಪತ್ರೆಯ ನೌಕರರಿಗೆ ಸೂಚನೆ ನೀಡಿದರು.


ಈ ಯೋಜನೆಯಡಿ ಆಸ್ಪತ್ರೆಗಳಿಗೆ ಬಿಲ್ ಕಟ್ಟಿದ ರೋಗಿ ಕಡೆಯವರು ಆಸ್ಪತ್ರೆಗಳಲ್ಲಿ ಔಷಧಿಗೆ ಸಂಬಂಧಿಸಿದಂತೆ ಸಮರ್ಪಕವಾದ ಬಿಲ್ ನೀಡುವುದಿಲ್ಲವೆಂದು ದೂರಿದರು.
ಡಿಸಿಯವರು, ಡಿಹೆಚ್‍ಓ ರವರಿಗೆ ಕೊಟ್ಟೂರೇಶ್ವರ ಆಸ್ಪತ್ರೆ ಸೇರಿದಂತೆ ಬಿಲ್ ಕಟ್ಟಿಸಿಕೊಂಡ ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ವರದಿ ನೀಡುವಂತೆ ತಿಳಿಸಿ, ಬಿಲ್ ಕಟ್ಟಿಸಿಕೊಂಡ ಆಸ್ಪತ್ರೆಗಳಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡುವಂತೆ ತಿಳಿಸಿದರು.


ಸಭೆಯಲ್ಲಿ ಡಿಹೆಚ್‍ಓ ಡಾ.ರಾಜೇಶ್ ಸುರಗಿಹಳ್ಳಿ, ಮೆಗ್ಗಾನ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ತಿಮ್ಮಪ್ಪ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಸಿದ್ದನಗೌಡ ಪಾಟೀಲ್, ಆರ್‍ಸಿಹೆಚ್‍ಓ ಡಾ.ನಾಗರಾಜ ನಾಯ್ಕ, ಡಿಎಲ್‍ಓ ಡಾ.ಕಿರಣ್, ಎಆರ್‍ಸಿ ಡಾ.ಪೂರ್ಣಿಮ, ಜಿಲ್ಲಾ ಕಾರ್ಯಕ್ರಮ ಅನುಷ್ಟಾನಾಧಿಕಾರಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.

Leave A Reply

Your email address will not be published.

error: Content is protected !!