ತ್ರಿಣಿವೆ ಸೊಸೈಟಿಗೆ 21 ಲಕ್ಷ ರೂ. ನಿವ್ವಳ ಲಾಭ | ಸಂಘದ ಸೌಲಭ್ಯ ಸದ್ಬಳಕೆಗೆ ಅಧ್ಯಕ್ಷ ಹೆಚ್.ಎನ್. ವಿದ್ಯಾಧರ ಮನವಿ

0 311


ಹೊಸನಗರ: ಸಾಲ ಪಡೆಯುವುದು ಗ್ರಾಹಕರ ಹಕ್ಕು ಆಗಿದ್ದು, ಪಡೆದ ಸಾಲವನ್ನು ಸಕಾಲದಲ್ಲಿ ಮರು ಪಾವತಿ ಮಾಡುವುದೇ ಸಹಕಾರ ಸಂಘದ ಯಶಸ್ಸಿಗೆ ಕಾರಣವಾಗಿದೆ ಎಂದು ತಾಲೂಕಿನ ನಾಗರಕೊಡಿಗೆ ಗ್ರಾಮದ ತ್ರಿಣಿವೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತದ ಅಧ್ಯಕ್ಷ ಹೆಚ್.ಎನ್. ವಿದ್ಯಾಧರ ತಿಳಿಸಿದರು.
ತಾಲೂಕಿನ ಕಾರಣಗಿರಿಯ ರಾಷ್ಟ್ರೋತ್ಥಾನ ಭವನದಲ್ಲಿ ಶನಿವಾರ ನಡೆದ ಸಂಘ 2022-23ನೇ ಸಾಲಿನ ಸರ್ವ ಸದಸ್ಯರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.


2023ರ ಮಾರ್ಚ್ ಅಂತ್ಯಕ್ಕೆ ಸಂಘವು 1990 ಷೇರುದಾರರನ್ನು ಹೊಂದಿದ್ದು, ಇದನ್ನು ಮುಂಬರುವ ದಿನಗಳಲ್ಲಿ 2100ಕ್ಕೆ ಏರಿಸುವ ಗುರಿಹೊಂದಲಾಗಿದೆ. ರೂ. 19.52 ಕೋಟಿ ಠೇವಣಿ ಸಂಗ್ರಹಿಸಿದ್ದು 2023-24ನೇ ಸಾಲಿನಲ್ಲಿ ಇದನ್ನು ರೂ. 20 ಕೋಟಿ ಸಂಗ್ರಹಿಸುವ ಗುರಿ ಇದೆ. ಸಾಲ ನೀಡಿಕೆಯಲ್ಲಿ ರೂ. 17.64 ಕೋಟಿ ಸಾಲ ವಿತರಿಸಲಾಗಿದ್ದು, ಸದರಿ ಸಾಲಿನಲ್ಲಿ ರೂ. 18 ಕೋಟಿ ವಿತರಿಸುವ ಗುರಿ ಸಂಘದ್ದು. ಪ್ರಸಕ್ತ ಸಾಲಿನ ವ್ಯಾಪಾರಿ ವಿಭಾಗದಲ್ಲಿ ರೂ. 38.09 ಲಕ್ಷ ಗುರಿ ಸಾಧಿಸಿದ್ದು, ಇದನ್ನು ರೂ. 45 ಲಕ್ಷಗಳಿಗೆ ಏರಿಸುವ ಗುರಿಯನ್ನು ಸಂಘ ಹೊಂದಿದ್ದು, 2021-2ನೇ ಲೆಕ್ಕ ಪರಿಶೋಧನೆ ಆಡಿಟ್ ವರ್ಗದಲ್ಲಿ ಸಂಘ ‘ಎ’ ದರ್ಜೆ ಪಡೆದಿದ್ದು, ಸಂಘದ ಸದಸ್ಯರ ಸಹಕಾರ ಹೀಗೆಯೇ ಮುಂದುವರೆದಲ್ಲಿ ‘ಎ+’ ಸಂಘವಾಗಿ ಹೊರ ಹೊಮ್ಮಿಸುವ ಗುರಿಯನ್ನು ಆಡಳಿತ ಮಂಡಳಿ ಹೊಂದಿದೆ ಎಂದರು.

ಪ್ರಸಕ್ತ ಸಾಲಿನಲ್ಲಿ ಸಂಘವು ಒಟ್ಟಾರೆ ರೂ‌. 21 ಲಕ್ಷ 53 ಸಾವಿರ ನಿವ್ವಳ ಲಾಭಗಳಿಸಿದ್ದು, ಷೇರುದಾರರಿಗೆ ಶೇ. ರೂ. 6.5 ಲಾಭಾಂಶ ಘೋಷಿಸಿದೆ ಎಂದರು.
ಸಂಘವು 73ನೇ ವರ್ಷ ಪೂರ್ಣಗೊಳಿಸಿದ್ದು, 74ಕ್ಕೆ ಕಾಲಿಟ್ಟಿದ್ದೆ. ಅಲ್ಲದೆ, ರೈತರ ದುರ್ಬಲರ ಶ್ರೇಯೋಭಿವೃದ್ದಿಗೆ ಶ್ರಮಿಸುತ್ತಾ ಬಂದಿದ್ದು, ಸಹಕಾರ ಕ್ಷೇತ್ರದಲ್ಲಿನ ಅಮೂಲಾಗ್ರ ಬದಲಾವಣೆಗೆ ಸಂಘ ಮುಂದಾಗಿದೆ. ಕಳೆದ ಸಹಕಾರಿ ಸಾಲಿನಿಂದ ಕೃಷಿ ಜಮೀನು ಖರೀದಿಗೆ ಸಾಲ ವಿತರಿಸುತ್ತಿದ್ದು, ಸುಲಭ ಕಂತುಗಳಲ್ಲಿ ಮರು ಪಾವತಿ ಮಾಡಲು ಅವಕಾಶ ಕಲ್ಪಿಸಲಾಗಿದೆ. ಸಂಘದ ಎಲ್ಲಾ ಬಗೆಯ ಸೌಲಭ್ಯಗಳನ್ನು ಷೇರುದಾರರು ಕಾಲಕಾಲಕ್ಕೆ ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ ಪ್ರಗತಿ ಹೊಂದುವಂತೆ ಅವರು ಮನವಿ ಮಾಡಿದರು.


ಇದಕ್ಕೂ ಮೊದಲು ಕಳೆದ ಸಾಲಿನಲ್ಲಿ ಮೃತರಾದ ಸಂಘ ನಿರ್ದೇಶಕ, ಷೇರುದಾರರಿಗೆ ಮೌನಾಚರಣೆ ನಡೆಯಿತು. ಕಳೆದ ಶೈಕ್ಷಣಿಕ ಸಾಲಿನಲ್ಲಿ ಅತಿ ಹೆಚ್ಚು ಅಂಕ ಪಡೆದ ಸದಸ್ಯರ ಕುಟುಂಬದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ, ಪ್ರೋತ್ಸಾಹಧನ ನೀಡಿ ಗೌರವಿಲಾಯಿತು.


ಸಭೆಯಲ್ಲಿ ಉಪಾಧ್ಯಕ್ಷ ಎಸ್.ಡಿ. ಲಕ್ಷ್ಮಣ, ನಿರ್ದೇಶಕರಾದ ಜಿ.ಎನ್. ಸುಧೀರ್, ಆರ್. ರಾಜಕುಮಾರ್, ಟಿ.ಎನ್. ಶ್ರೀಪತಿ, ನೆಲ್ಲುಂಡೆ ವರುಣ, ಎನ್.ಎಂ. ನಟರಾಜ, ಚಂದ್ರಶಖರ್, ಗೀತಾ, ಹಾಲಮ್ಮ, ರಾಜಶ್ರೀ, ಕ್ಷೇತ್ರಾಧಿಕಾರಿ ಶಿವಕುಮಾರ್, ಆಂತರಿಕ ಲೆಕ್ಕಪರಿಶೋಧಕ ಎನ್.ಆರ್. ರಘುನಾಥ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಆರ್. ವೆಂಕಟೇಶ್ ಸೇರಿದಂತೆ ಸಂಘದ ಇತರೆ ಸಿಬ್ಬಂದಿಗಳು ಹಾಜರಿದ್ದರು.

Leave A Reply

Your email address will not be published.

error: Content is protected !!