ದೈಹಿಕ ಶಿಕ್ಷಕರ ನೇಮಕಾತಿಗೆ ಶೀಘ್ರ ಕ್ರಮ ; ಸಚಿವ ಮಧು ಬಂಗಾರಪ್ಪ

0 405

ಸೊರಬ: ರಾಜ್ಯದ ಪದವಿ ಪೂರ್ವ ವಿಭಾಗದಲ್ಲಿ ಕೊರತೆ ಇರುವ ದೈಹಿಕ ಶಿಕ್ಷಕರ ನೇಮಕಾತಿಗೆ ಶೀಘ್ರ ಕ್ರಮ ವಹಿಸುವ ಜೊತೆಗೆ ಮಕ್ಕಳಲ್ಲಿನ ಪ್ರತಿಭೆಗಳ ಅನಾವರಣಕ್ಕೆ ಪ್ರೋತ್ಸಾಹಿಸಲು ಹೆಚ್ಚಿನ ಅನುದಾನ ನೀಡಲು ಒತ್ತು ನೀಡುವುದಾಗಿ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮಧು ಬಂಗಾರಪ್ಪ (Madhu Bangarappa) ಹೇಳಿದರು.

ಶುಕ್ರವಾರ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ಆವರಣದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಹಮ್ಮಿಕೊಂಡ ತಾಲೂಕು ಮಟ್ಟದ ಪ್ರೌಢ ಶಾಲಾ ವಿಭಾಗದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ ಒಂದರಿಂದ 12ನೇ ತರಗತಿ ವರೆಗಿನ 76 ಸಾವಿರ ಶಾಲೆಗಳಿದ್ದು, ಈ ಪೈಕಿ ಪದವಿ ಪೂರ್ವ ಕಾಲೇಜ್‌ನಲ್ಲಿ ಕೇವಲ ಓರ್ವ ದೈಹಿಕ ಮಾತ್ರ ನೇಮಕಾತಿಯಾಗಿರುವುದು ಆಚ್ಚರಿ ಎನಿಸಿದೆ. ಮುಂದಿನ ದಿನಗಳಲ್ಲಿ ಮಕ್ಕಳ ಹಿತದೃಷ್ಠಿಯಿಂದ ದೈಹಿಕ ಶಿಕ್ಷಕರು ಮಾತ್ರವಲ್ಲದೇ ಎಲ್ಲಾ ಶಾಲೆಗಳಿಗೆ ಶಿಕ್ಷಕರ ಭರ್ತಿ ಮಾಡಲಾಗುವುದು. ಗ್ರಾಮೀಣ ಪ್ರದೇಶದ ಶಾಲೆಗಳನ್ನು ಮೇಲ್ದರ್ಜೆಗೆ ತರುವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗಿದೆ. ದೇಶದ ಸತ್ಪ್ರಜೆಗಳನ್ನು ರೂಪಿಸುವ ಶಿಕ್ಷಣ ಇಲಾಖೆಯಲ್ಲಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಮಕ್ಕಳ ಆರೋಗ್ಯದ ದೃಷ್ಠಿಯಿಂದ ಹಾಲಿನ ಜೊತೆಗೆ ರಾಗಿ ಮಾಲ್ಟ್ ನೀಡುವ ಕಾರ್ಯ ಪ್ರಗತಿಯಲ್ಲಿದೆ ಎಂದರು.

ಗ್ರಾಮೀಣ ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ಪ್ರತಿಭಾ ಕಾರಂಜಿಯಂತಹ ಕಾರ್ಯಕ್ರಮಗಳು ಪೂರಕವಾಗಿವೆ. ಇಲಾಖೆಯು ಸಹ ಸಹಕಾರ ನೀಡುತ್ತಿದೆ. ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಲು ಮುಂದಿನ ಮೂರು ವರ್ಷಗಳಲ್ಲಿ ಮೂರು ಸಾವಿರ ಪಬ್ಲಿಕ್ ಶಾಲೆಗಳನ್ನು ತೆರೆಯಲಾಗುವುದು ಎಂದ ಅವರು, ತಾಲೂಕಿನ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ಬೆಳಗಾವಿ ಅಧಿವೇಷನದ ತರುವಾಯ ಗ್ರಾಪಂ ಮಟ್ಟದಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಜೊತೆಗೆ ತಾಲೂಕು ಸೇರಿದಂತೆ ಜಿಲ್ಲೆಯಲ್ಲಿಯೇ ಕುಡಿಯುವ ನೀರಿನ ತೊಂದರೆಯಾಗದಂತೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ತಿಳಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎಂ. ಸತ್ಯನಾರಾಯಣ ಪ್ರಾಸ್ತಾವಿಕವಾಗಿ ಮಾತನಾಡಿ, ಕುಸಿಯುತ್ತಿರುವ ಸಾಂಸ್ಕೃತಿಕ ಮೌಲ್ಯಗಳನ್ನು ಎತ್ತಿ ಹಿಡಿಯಲು ಪ್ರತಿಭಾ ಕಾರಂಜಿ ಪೂರಕವಾಗಿದೆ. ಮಕ್ಕಳಲ್ಲಿ ಅಡಗಿರುವ ಪ್ರತಿಭೆಯ ಅನಾವರಣಕ್ಕೆ ವೇದಿಕೆಯನ್ನು ಕಲ್ಪಿಸಲಾಗಿದ್ದು, ವಿದ್ಯಾರ್ಥಿಗಳು ಸ್ಪರ್ಧೆ ಎಂದು ಭಾವಿಸದೆ ಪಾಲ್ಗೊಳ್ಳುವ ಮನೋಭಾವ ಬೆಳೆಸಿಕೊಂಡು ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು ಎಂದರು.

ಎಸ್‌ಡಿಎಂಸಿ ಅಧ್ಯಕ್ಷ ಬಿ.ಕೆ. ಯುವರಾಜ್ ಅಧ್ಯಕ್ಷತೆ ವಹಿಸಿದ್ದರು. ಡಿಡಿಪಿಐ ಸಿ.ಆರ್. ಪರಮೇಶ್ವರ್, ತಹಶೀಲ್ದಾರ್ ಎಚ್.ಎ. ಸರಕಾವಸ್, ತಾಪಂ ಇಒ ಡಾ. ಎನ್.ಆರ್. ಪ್ರದೀಪ್ ಕುಮಾರ್, ನೌಕರರ ಸಂಘದ ತಾಲೂಕು ಅಧ್ಯಕ್ಷ ಎಸ್. ಮಂಜುನಾಥ್, ಕ್ಷೇತ್ರ ಸಮನ್ವಯಾಧಿಕಾರಿ ದಯಾನಂದ ಕಲ್ಲೇರ್, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಸಿ.ಆರ್. ಲಿಂಗರಾಜ ಒಡೆಯರ್, ಉಪಪ್ರಾಂಶುಪಾಲ ಡಿ. ಫಕೀರಪ್ಪ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಎಂ.ಎಚ್. ಮನೋಹರ್, ಪ್ರೌಢಾ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಡಿ.ಎಂ. ಹಾಲಪ್ಪ, ಶಿಕ್ಷಕರ ಸಂಘದ ಜಿ.ಆರ್. ಗಿರಿಧರ್, ಎಚ್.ಜಿ. ಗಣಪತಿ, ಇಬ್ರಾಹಿಂ ದೊಡ್ಮನಿ, ಶಶಿಕಲಾ, ಎಸ್‌ಡಿಎಂಸಿ ಸದಸ್ಯರಾದ ಪ್ರತಿಭಾ, ಜಯಶೀಲ, ಪ್ರಮುಖರಾದ ಎಚ್. ಗಣಪತಿ, ಎಂ.ಡಿ. ಶೇಖರ್, ಸದಾನಂದಗೌಡ ಬಿಳಗಲಿ, ಎಚ್. ಅಣ್ಣಪ್ಪ ಹಾಲಘಟ್ಟ, ಎಲ್.ಜಿ. ರಾಜಶೇಖರ, ಕೆ.ಪಿ. ರುದ್ರಗೌಡ, ಕೆ.ವಿ. ಗೌಡ, ರಾಜೇಂದ್ರ ನಾಯ್ಕ್, ಸೇರಿದಂತೆ ಪುರಸಭೆ ಸದಸ್ಯರು ಮತ್ತಿತರರಿದ್ದರು.

Leave A Reply

Your email address will not be published.

error: Content is protected !!