ಧಗಧಗನೆ ಹೊತ್ತಿ ಉರಿದ ಚಲಿಸುತ್ತಿದ್ದ ಕಾರು !
ಶಿವಮೊಗ್ಗ: ಚಲಿಸುತ್ತಿದ್ದ ಕಾರಿನಲ್ಲಿ ಹೊಗೆ ಕಾಣಿಸಿಕೊಂಡಿದ್ದು ಕಾರು ನಿಲ್ಲಿಸಿ ತಪಾಸಣೆ ನಡೆಸುತ್ತಿದ್ದಂತೆ ಧಗ ಧಗನೆ ಹೊತ್ತು ಉರಿದಿರುವಂತಹ ಘಟನೆ ಶಿವಮೊಗ್ಗ ತಾಲೂಕಿನ ಹೊರವಲಯದಲ್ಲಿರುವ ಮುದ್ದಿನಕೊಪ್ಪದ ಬಳಿ ನಡೆದಿದೆ.
ಭದ್ರಾವತಿಯ ಸಿದ್ದಾಪುರದ ಕಿರಣ್ ಕುಮಾರ್ ಎಂಬುವವರ ಕೆಎ 25 ಎಂಎ 1169 ಕ್ರಮ ಸಂಖ್ಯೆಯ ಡಸ್ಟರ್ ಕಾರಿನಲ್ಲಿ ಮುಂದಿನ ಎಂಜಿನ್‌ನಲ್ಲಿ ಹೊಗೆ ಕಾಣಿಸಿಕೊಂಡಿದೆ.

ರಸ್ತೆ ಬದಿಗೆ ನಿಲ್ಲಿಸಿದ ಕಿರಣ್ ಕುಮಾರ್ ಮುಂದಿನ ಬ್ಯಾನೆಟ್ ತೆಗೆದಿದ್ದಾರೆ. ಬ್ಯಾನೆಟ್ ತೆಗೆಯುತ್ತಿದ್ದಂತೆ ಬೆಂಕಿ ಕಾರನ್ನು ಸಂಪೂರ್ಣ ಆವರಿಸಿಕೊಂಡಿದೆ. ಕಿರಣ್ ಕುಮಾರ್ ಭದ್ರಾವತಿಯಿಂದ ಆಯನೂರು ಕಡೆಗೆ ಹೊರಟಿದ್ದರು. ಶಿವಮೊಗ್ಗದ ಮುದ್ದಿನಕೊಪ್ಪದ ಬಳಿ ಹೊಗೆ ಕಾಣಿಸಿಕೊಂಡು ಬೆಂಕಿ ಅನಾಹುತ ನಡೆದಿದೆ. ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿದ್ದು, ಬೆಂಕಿಯನ್ನ ನಂದಿಸಿದೆ. ಬೆಂಕಿಗೆ ಕಾರು ಸಂಪೂರ್ಣ ಸುಟ್ಟು ಕರಕಲಾಗಿದೆ.