Shivamogga | Election Code of Conduct | ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸಲು ಡಿಸಿ ಸೂಚನೆ


ಶಿವಮೊಗ್ಗ: ಚುನಾವಣಾ ಅಧಿಕಾರಿಗಳು, ಸಹಾಯಕ ಚುನಾವಣಾ ಅಧಿಕಾರಿಗಳು ಹಾಗೂ ಚುನಾವಣಾ ನಿಯೋಜಿತ ಎಲ್ಲ ಅಧಿಕಾರಿಗಳು ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಎಚ್ಚರಿಕೆ ವಹಿಸಿ ತಮ್ಮ ಕರ್ತವ್ಯ ನಿರ್ವಹಿಸಬೇಕು. ಹಾಗೂ ರಜಾ ದಿನಗಳಂದು ಹೆಚ್ಚು ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಬೇಕೆಂದು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.


ಇಂದು ಜಿಲ್ಲಾಡಳಿತ ಕಚೇರಿಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಧಾನಸಭಾ ಕ್ಷೇತ್ರಗಳ ಚುನಾವಣಾಧಿಕಾರಿಗಳೊಂದಿಗೆ ಸಭೆ ನಡೆಸಿ ಚುನಾವಣಾ ಸಿದ್ದತೆ ಕುರಿತು ಸಲಹೆ-ಸೂಚನೆಗಳನ್ನು ನೀಡಿದರು.
ಎಲ್ಲ ಚುನಾವಣಾಧಿಕಾರಿಗಳು ಮತಗಟ್ಟೆಗಳಿಗೆ ತೆರಳಿ ಮತಗಟ್ಟೆಗಳ ಕುರಿತು ಖಾತ್ರಿಪಡಿಸಿಕೊಳ್ಳಬೇಕು. ಚುನಾವಣಾ ಪ್ರಕ್ರಿಯೆ ಕುರಿತು ಈಗಲೇ ಸಮರ್ಪಕವಾದ ಯೋಜನೆ ಹಾಕಿಕೊಂಡು ಕರ್ತವ್ಯ ನಿರ್ವಹಿಸಬೇಕು. ಪ್ರತಿ ಮತಗಟ್ಟೆಗೆ ಪಂಚಾಯಿತಿ ಅಥವಾ ಇತರೆ ಸ್ಥಳೀಯ ಸಂಸ್ಥೆಗಳಿಂದ ಒಬ್ಬರನ್ನು ನಿಯೋಜಿಸಬೇಕು. ಇಓ, ಚೀಫ್ ಆಫೀಸರ್, ಪಿಡಿಓ ಗಳು ಮತಗಟ್ಟೆಗಳು ಹಾಗೂ ಚುನಾವಣೆ ಕರ್ತವ್ಯಕ್ಕೆ ನಿಯೋಜಿಸಿದ ಅಧಿಕಾರಿ/ಸಿಬ್ಬಂದಿಗಳ ಎಲ್ಲ ರೀತಿಯ ಮೂಲಭೂತ ವ್ಯವಸ್ಥೆಗಳ ಕುರಿತು ನಿಗಾ ವಹಿಸಿ, ಮುತುವರ್ಜಿಯಿಂದ ವ್ಯವಸ್ಥೆ ಮಾಡಬೇಕು.


ಎಲ್ಲ ಮತಗಟ್ಟೆಗಳಲ್ಲಿ ಮೂಲಭೂತ ಸೌಕರ್ಯಗಳು, ಚುನಾವಣಾ ಸಿಬ್ಬಂದಿಗಳಿಗೆ ನೀರು, ಊಟದ ವ್ಯವಸ್ಥೆಯನ್ನು ಸಮರ್ಪಕವಾಗಿ ನಿಯೋಜಿತ ಅಧಿಕಾರಿಗಳು ಮಾಡಬೇಕು. ಕೆಲವು ದೂರದ ಹಳ್ಳಿಗಳಲ್ಲಿ ಕುಡಿಯುವ ನೀರು ಇತರೆ ಸೌಕರ್ಯಗಳು ಇರುವುದಿಲ್ಲ. ಅಲ್ಲಿ ಹೆಚ್ಚಿನ ಕಾಳಜಿ ವಹಿಸಿ ವ್ಯವಸ್ಥೆ ಮಾಡಬೇಕು. ಹಾಗೂ ಕ್ಲಸ್ಟರ್ ಮತಗಟ್ಟೆ ಅಂದರೆ ಮೂರು ಮತ್ತು ಹೆಚ್ಚು ಮತಗಟ್ಟೆ ಇರುವೆಡೆ ಪೆಂಡಾಲ್ ಸೇರಿದಂತೆ ಮೂಲಭೂತ ಸೌಕರ್ಯ ಸಮರ್ಪಕವಾಗಿರುವಂತೆ ನಿಗಾ ವಹಿಸಬೇಕು.


ಇಓ, ಚೀಫ್ ಆಫೀಸರ್, ಪಿಡಿಓ ಗಳು ಎಲ್ಲ ಮತಗಟ್ಟೆಗಳಲ್ಲಿ ಎಎಂಎಫ್(ಅಶ್ಯೂರಡ್ ಮಿನಿಮಮ್ ಫೆಸಿಲಿಟಿಸ್) ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ವಹಿಸಬೇಕು. ಹಾಗೂ ಚುನಾವಣಾಧಿಕಾರಿಗಳು ಪೋಸ್ಟಲ್ ಬ್ಯಾಲಟ್ ಬಗ್ಗೆ ಅತ್ಯಂತ ಸೂಕ್ಷ್ಮವಾಗಿ ಕಾರ್ಯ ನಿರ್ವಹಿಸಬೇಕೆಂದರು.


ನಾಮಪತ್ರ ಸಲ್ಲಿಕೆಗೆ ಅಗತ್ಯವಾದ ತಯಾರಿಯನ್ನು ಈಗಿನಿಂದಲೇ ಮಾಡಿಕೊಳ್ಳಬೇಕು. ನಾಮಪತ್ರ ಸ್ವೀಕರಿಸುವ ಕುರಿತು ಚುನಾವಣಾಧಿಕಾರಿಗಳು ನಿಯಮಗಳು, ಮಾರ್ಗಸೂಚಿಗಳನ್ನು ಮತ್ತೊಮ್ಮೆ ಓದಿ, ತಿಳಿದುಕೊಂಡು ಎಲ್ಲ ರೀತಿಯ ಸಿದ್ದತೆ ಮಾಡಿಕೊಳ್ಳಬೇಕು. ಮಸ್ಟರಿಂಗ್ ಕೇಂದ್ರಗಳು ಹಾಗೂ ಇದಕ್ಕೆ ಸಂಬಂಧಿಸಿದ ಸಿಬ್ಬಂದಿಗಳು ಪೂರ್ವ ತಯಾರಿ ಮಾಡಿಕೊಳ್ಳಬೇಕು ಎಂದು ತಿಳಿಸಿದರು.


ಮತದಾರರ ಗುರುತಿನ ಚೀಟಿಗಳ ವಿತರಣೆಯನ್ನು ಸಮರ್ಪಕವಾಗಿ ಮಾಡಬೇಕು. ಹೊಸ ಹಾಗೂ ಉಳಿದ ಗುರುತಿನ ಚೀಟಿಗಳನ್ನು ಅಂಚೆ ಮೂಲಕ ವಿತರಿಸಲು ಶೀಘ್ರವೇ ಕ್ರಮ ಜರುಗಿಸುವಂತೆ ಸೂಚಿಸಿದರು.


ಜಿಲ್ಲಾ ಪಂಚಾಯ್ತಿ ಸಿಇಓ ಸ್ನೇಹಲ್ ಲೋಖಂಡೆ, ಎಫ್‍ಎಸ್‍ಟಿ, ಎಸ್‍ಎಸ್‍ಟಿ, ವಿಎಸ್‍ಟಿ ಮತ್ತು ಇತರೆ ತಂಡಗಳು ತಮ್ಮ ತಮ್ಮ ಕರ್ತವ್ಯವನ್ನು ಎಚ್ಚರಿಕೆಯಿಂದ ನಿರ್ವಹಿಸಬೇಕು. ಮತದಾನ ಜಾಗೃತಿಗಾಗಿ ಎಲ್ಲ ಹಳ್ಳಿಗಳಲ್ಲಿ ಕಸ ಸಂಗ್ರಹ ವಾಹನಗಳಲ್ಲಿ ಮತದಾನ ಮಹತ್ವ-ಅರಿವು ಮೂಡಿಸುವ ಜಿಂಗಲ್‍ಗಳನ್ನು ಹಾಕಬೇಕು. ಹಾಗೂ ಸ್ವೀಪ್ ಚಟುವಟಿಕೆಗಳನ್ನು ಸಕ್ರಿಯಗೊಳಿಸಿ ಮತದಾನ ಜಾಗೃತಿ ಮೂಡಿಸಬೇಕು. ಕಳೆದ ಬಾರಿ ಕಡಿಮೆ ಮತದಾನ ಆದ ಮತಕ್ಷೇತ್ರಗಳಲ್ಲಿ ಹೆಚ್ಚಿನ ಸ್ವೀಪ್ ಚಟುವಟಿಕೆಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದರು.


ಸಭೆಯಲ್ಲಿ ಪ್ರೊಬೇಷನರಿ ಐಎಎಸ್ ಅಧಿಕಾರಿ ದಲ್ಜೀತ್ ಕುಮಾರ್, ಅಪರ ಜಿಲ್ಲಾಧಿಕಾರಿ ಎಸ್.ಎಸ್.ಬಿರಾದರ್, ಚುನಾವಣಾ ನಿಯೋಜಿತ ಅಧಿಕಾರಿಗಳು ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,802FollowersFollow
0SubscribersSubscribe
- Advertisement -spot_img

Latest Articles

error: Content is protected !!