ಪರಿಸರ ಸರ್ವನಾಶ ಮಾಡುತ್ತಿರುವ ಶಾಹಿ ಗಾರ್ಮೆಂಟ್ಸ್ ವಿರುದ್ಧ ಭುಗಿಲೆದ್ದ ಆಕ್ರೋಶ

0 65

ಶಿವಮೊಗ್ಗ: ಪರಿಸರವನ್ನು ಸರ್ವನಾಶ ಮಾಡುತ್ತಿರುವ ಶಾಹಿ ಗಾರ್ಮೆಂಟ್ಸ್ ವಿರುದ್ಧ ಇಂದು ಆಕ್ರೋಶ ಭುಗಿಲೆದ್ದಿದೆ.
ಮಾಚೇನಹಳ್ಳಿಯಲ್ಲಿರುವ ಶಾಹಿ ಗಾರ್ಮೆಂಟ್ಸ್ ಕಾರ್ಖಾನೆ ವಿರುದ್ಧ ರೈತ ಮುಖಂಡರು, ಸುತ್ತಮುತ್ತಲಿನ ನೊಂದ ಸಂತ್ರಸ್ತರು, ಸಣ್ಣ ಕೈಗಾರಿಕೆ ಉದ್ದಿಮೆದಾರರು, ಸಾರ್ವಜನಿಕರು ಕಾರ್ಖಾನೆ ಮುಂಭಾಗದ ರಸ್ತೆಯಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಶಾಹಿ ಗಾರ್ಮೆಂಟ್ಸ್ ವಿರುದ್ಧ ಧಿಕ್ಕಾರ ಕೂಗಿದರು.


ಶಾಹಿ ಗಾರ್ಮೆಂಟ್ಸ್ ಮಾಲೀಕರನ್ನು ಬಂಧಿಸಬೇಕು. ರೈತ ಬೆಳೆಯನ್ನು ಉಳಿಸಬೇಕು. ಕಾರ್ಮಿಕರ ಆರೋಗ್ಯ ಕಾಪಾಡಬೇಕು. ನಮಗೆ ನ್ಯಾಯ ಸಿಗಬೇಕು ಎಂಬ ಘೋಷಣೆಗಳೊಂದಿಗೆ ಪ್ರತಿಭಟನೆ ನಡೆಸಿದರು.
ಕಳೆದ 10 ವರ್ಷಗಳಿಂದ ಶಾಹಿ ಎಕ್ಸ್ ಪೋರ್ಟ್ ಕಾರ್ಖಾನೆಯ ಚಿಮಣಿಯಿಂದ ಹೊರಬರುತ್ತಿರುವ ರಾಸಾಯನಿಕ ಮಿಶ್ರಿತ ಧೂಳು ಮತ್ತು ಬಟ್ಟೆಗಳಿಗೆ ಅಳವಡಿಸುವ ಕಲರ್ ಡೈನಿಂದ ಪರಿಸರ ಮಾಲಿನ್ಯವಾಗುತ್ತಿದೆ. ಕಾರ್ಖಾನೆಯಿಂದ ಹೊರಗೆ ಬಿಡುವ ರಾಸಾಯನಿಕ ಮಿಶ್ರಿತ ನೀರು ಸುತ್ತಮುತ್ತಲ ಕೆರೆಗಳಿಗೆ ತಲುಪಿ ಜನ, ಜಾನುವಾರುಗಳಿಗೆ ತೊಂದರೆಯಾಗಿದೆ. ಅಲ್ಲದೇ, ಸುತ್ತಮುತ್ತಲ ಜನ ಕಾರ್ಖಾನೆ ಹೊರಬಿಡುವ ವಿಷದ ಗಾಳಿ ಸೇವಿಸಿ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಸುಮಾರು 20 ಕ್ಕೂ ಹೆಚ್ಚು ಕೆರೆಗಳು ಮಲೀನಗೊಂಡು ಜಲಚರ, ಪಶು, ಪಕ್ಷಿಗಳು ಸಾವನ್ನಪ್ಪಿವೆ. ರೈತರ ಸಾವಿರಾರು ಎಕರೆ ಕೃಷಿ ಭೂಮಿ ಬಂಜರಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.


ಇದಲ್ಲದೇ, ಈ ಶಾಹಿ ಎಕ್ಸ್ ಪೋರ್ಟ್ ನಿಂದ ಹೊರಬಂದಂತಹ ರಾಸಾಯನಿಕ ಮಿಶ್ರಿತ ಧೂಳಿನಿಂದ ಸಣ್ಣ ಕೈಗಾರಿಕಾ ಘಟಕಗಳ ಮೇಲ್ಛಾವಣಿ ಮತ್ತು ಕಬ್ಬಿಣದ ವಸ್ತುಗಳು ಹಾಗೂ ಯಂತ್ರೋಪಕರಣಗಳ ಮೇಲೆ ಪರಿಣಾಮ ಬೀರುತ್ತಿದ್ದು, ಸಣ್ಣ ಕೈಗಾರಿಕೆಗಳು ಮುಚ್ಚುವ ಸ್ಥಿತಿಗೆ ಬಂದಿದೆ. ಅಲ್ಲದೇ, ಈ ಪ್ರದೇಶದ ಜನರು ದಮ್ಮು, ಕೆಮ್ಮು, ಚರ್ಮದ ಕಾಯಿಲೆಗಳಿಗೆ ಗುರಿಯಾಗಿದ್ದಾರೆ. ಕಾರ್ಖಾನೆಯಿಂದ ಕೆಟ್ಟ ವಾಸನೆ ಬರುತ್ತಿದೆ. ಇಲ್ಲಿ ಜನರು ಜೀವಿಸುವುದೇ ಕಷ್ಟವಾಗುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.


ಪರಿಸರ ನಾಶ ಮಾಡುತ್ತಿರುವ ಶಾಹಿ ಎಕ್ಸ್ ಪೋರ್ಟ್ ಮಾಲೀಕರನ್ನು ಕೂಡಲೇ ಬಂಧಿಸಬೇಕು. ಪರಿಸರ ನಾಶ ಮಾಡಿದವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಕಾರ್ಖಾನೆಗೆ ಕೂಡಲೇ ಬೀಗ ಹಾಕಬೇಕು. ಪರಿಸರವನ್ನು ಸಂರಕ್ಷಣೆ ಮಾಡದ ಹೊರತೂ ಕಾರ್ಖಾನೆಯ ಬಾಗಿಲನ್ನು ತೆರೆಯಬಾರದು. ರೈತರ ಸಮಾಧಿಗಳ ಮೇಲೆ ಉದ್ಯೋಗ ನೀಡುತ್ತಿರುವ ಗಾರ್ಮೆಂಟ್ಸ್ ಆಡಳಿತಕ್ಕೆ ಧಿಕ್ಕಾರ ಎಂದು ಪ್ರತಿಭಟನಾಕಾರರು ತಿಳಿಸಿದರು.


ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಉಪ ವಿಭಾಗಾಧಿಕಾರಿ ಸತ್ಯನಾರಾಯಣ ಅವರಿಗೆ ಮನವಿ ನೀಡಲು ನಿರಾಕರಿಸಿದ ಪ್ರತಿಭಟನಾಕಾರರು ಸಂಜೆವರೆಗೆ ಪ್ರತಿಭಟನೆ ಮುಂದುವರೆಯಲಿದ್ದು, ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬಂದು ಮನವಿ ಪಡೆಯಲಿ ಹಾಗೂ ಶಾಹಿ ಗಾರ್ಮೆಂಟ್ಸ್ ನಲ್ಲಿ ಕಲುಷಿತ ನೀರು ಬಿಡದಂತೆ ಶುದ್ಧೀಕರಣ ಘಟಕಗಳು ಮತ್ತು ಇನ್ನಿತರ ಅಗತ್ಯ ಕ್ರಮ ಕೈಗೊಳ್ಳುವವರೆಗೆ ತಾತ್ಕಾಲಿಕವಾಗಿ ಕಾರ್ಖಾನೆಗೆ ಬೀಗ ಮುದ್ರೆ ಹಾಕಲಿ ಅಲ್ಲಿವರೆಗೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳುವುದಾಗಿ ಪ್ರತಿಭಟನಾಕಾರರು ಎಚ್ಚರಿಸಿದರು.


ಈ ಸಂದರ್ಭದಲ್ಲಿ ನಿದಿಗೆ ಮಾಚೇನಹಳ್ಳಿ ಪರಿಸರ ಸಂರಕ್ಷಣಾ ಸಮಿತಿ ಪ್ರಮುಖರಾದ ಬುಳ್ಳಾಪುರ ಬಸವರಾಜಪ್ಪ, ಗ್ರಾಪಂ ಸದಸ್ಯ ಆನಂದ್, ವೆಂಕಟೇಶ್ ನಾಯ್ಕ, ದೇವಿಕುಮಾರ್, ರಮೇಶ್ ಹೆಗ್ಡೆ, ಗೋವಿಂದರಾಜ್, ರುದ್ರೇಶ್, ಶಾಸಕಿ ಶಾರದಾ ಪೂರ್ಯಾನಾಯ್ಕ್, ಮಾಜಿ ಶಾಸಕ ಆಯನೂರು ಮಂಜುನಾಥ್, ಸಂತೆಕಡೂರು ವಿಜಕುಮಾರ್, ಆರ್.ಸಿ. ನಾಯ್ಕ್, ನಿದಿಗೆ ಚಂದ್ರು ಮೊದಲಾದವರಿದ್ದರು.

ಹೊರಗಿನವರಿಗೆ ಮಣೆಹಾಕಲಾಗಿದೆ : ಆಯನೂರು ಮಂಜುನಾಥ್
2014ರಲ್ಲಿ ಶಾಹಿ ಗಾರ್ಮೆಂಟ್ಸ್ ಪ್ರಾರಂಭವಾದಾಗ ಸಾವಿರಾರು ಜನರಿಗೆ ಉದ್ಯೋಗ ಸಿಕ್ಕಿದ ಸಂತೋಷದಲ್ಲಿ ಸ್ಥಳೀಯರಿದ್ದರು. ಆದರೆ, ವಾಸ್ತವವಾಗಿ ಈ ಗಾರ್ಮೆಂಟ್ಸ್ ನಲ್ಲಿ ಸ್ಥಳೀಯರು ಕಡಿಮೆ ಇದ್ದು, ಹೊರಗಿನವರಿಗೆ ಮಣೆಹಾಕಲಾಗಿದೆ ಎಂದು ಮಾಜಿ ಸಂಸದ ಆಯನೂರು ಮಂಜುನಾಥ್ ಹೇಳಿದರು.


ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಿಹಾರ, ಉತ್ತರ ಪ್ರದೇಶದಿಂದ ಕಾರ್ಮಿಕರನ್ನು ಕರೆತರಲಾಗುತ್ತಿದೆ. ಇಲ್ಲಿನ ಧೂಳು ಶ್ವಾಸಕೋಶದ ಮೇಲೆ ಪರಿಣಾಮ ಬೀರಿ ನೂರಾರು ಜನರಿಗೆ ಹೃದಯದ ತೊಂದರೆ ಉಂಟಾಗುತ್ತಿದೆ. 250 ಎಕರೆ ಭೂಮಿಯನ್ನು ಕರೆಂಟ್, ನೀರು, ಚರಂಡಿ ಎಲ್ಲಾ ಮೂಲಭೂತ ವ್ಯವಸ್ಥೆ ಕಲ್ಪಿಸಿ ಕೋಟ್ಯಂತರ ಬೆಲೆ ಬಾಳುವ ಭೂಮಿಯನ್ನು ಕೆಐಎಡಿಬಿಯವರು ಕೇವಲ ಎಕರೆಗೆ 8.5 ಲಕ್ಷ ರೂ.ಗೆ ನೀಡಿದ್ದಾರೆ. ಇದೊಂದು ಕೆಐಎಡಿಬಿಯ ಬಹುದೊಡ್ಡ ಹಗರಣ. ಇದರ ಹಿಂದೆ ನಾಡಿನ ದೊಡ್ಡ ದೊಡ್ಡ ಕೈಗಳಿವೆ. ಈ ಬಗ್ಗೆ ಸೂಕ್ತ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.


ಈ ಫ್ಯಾಕ್ಟರಿ ಕರ್ಮಕಾಂಡದ ಹಿಂದೆ ಅನೇಕ ಗಣ್ಯರ ಪಿತೂರಿ ಇದೆ. ಕೇಸರಿ ಹಸಿರು ಟವೆಲ್ ಗಳು ಓಡಾಡಿದೆ. ಹೋರಾಟಗಾರರಿಗೆ ಆಮಿಷ ತೋರಿಸಿ ಹತ್ತಿಕ್ಕುವ ಕೆಲಸವಾಗಿದೆ. ಆದರೂ ಧೈರ್ಯ ಮಾಡಿ ಕೆಲ ರೈತರು ಹೋರಾಟಕ್ಕೆ ಮುಂದಾಗಿದ್ದು, ಅವರಿಗೆ ಬೆನ್ನೆಲುಬಾಗಿ ನಾವು ನಿಲ್ಲುತ್ತೇವೆ ಎಂದರು.


ಶಾಸಕಿ ಶಾರದಾ ಪೂರ್ಯಾನಾಯ್ಕ್ ಸ್ಥಳಕ್ಕೆ ಭೇಟಿ ನೀಡಿ ಮನವಿ ಸ್ವೀಕರಿಸಿ, ಈ ಘಟಕದಿಂದ ಇಷ್ಟೊಂದು ಹಾನಿಯಾಗುತ್ತದೆ ಎಂದು ನಾವು ಅಂದುಕೊಂಡಿರಲಿಲ್ಲ. ನೂರಾರು ಹೆಣ್ಣುಮಕ್ಕಳಿಗೆ ಉದ್ಯೋಗ ಸಿಗುತ್ತದೆ ಎಂಬ ಸಂತಸದಲ್ಲಿದ್ದೆವು. ಆದರೆ, ಹಿಂದೆ ನಾನು ಮೊದಲ ಬಾರಿಗೆ ಶಾಸಕಿಯಾದಾಗ ಇಲ್ಲಿನ ವೇತನ ತಾರತಮ್ಯದ ಬಗ್ಗೆ ಶಾಸಕರಾಗಿದ್ದ ಅಪ್ಪಾಜಿಗೌಡರ ನೇತೃತ್ವದಲ್ಲಿ ಹೋರಾಟ ಮಾಡಿ ನ್ಯಾಯ ಒದಗಿಸಿದ್ದೆವು ಎಂದರು.


ಇಲ್ಲಿನ 20ಕ್ಕೂ ಹೆಚ್ಚು ಕೆರೆಗಳು ಮತ್ತು ನೂರಾರು ಎಕರೆ ಕೃಷಿ ಭೂಮಿ ಹಾಳಾಗಿದ್ದು, ಸ್ಥಳೀಯರ ಆರೋಗ್ಯದ ಮೇಲೆ ಇಷ್ಟೊಂದು ಗಂಭೀರ ಪರಿಣಾಮ ಬೀರಿರುವುದು ಗಮನಕ್ಕೆ ಬಂದ ನಂತರ ಈಗ ಘಟಕವನ್ನು ತಾತ್ಕಾಲಿಕವಾಗಿ ಮುಚ್ಚಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸುತ್ತೇನೆ. ಅಲ್ಲದೇ, ಈ ಘಟಕ ಮರು ಕಾರ್ಯಾರಂಭ ಮಾಡುವ ಮೊದಲು ಯಾವುದೇ ಮಾಲಿನ್ಯ ಉಂಟಾಗದಂತೆ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.

Leave A Reply

Your email address will not be published.

error: Content is protected !!