ಗ್ರಾಮೀಣ ಪ್ರದೇಶದಲ್ಲಿ ನೀರು, ಮೇವು ಅಭಾವವಾಗದಂತೆ ಪಿಡಿಓಗಳು ಮುತುವರ್ಜಿ ವಹಿಸಿ ; ಸಚಿವ ಮಧು ಬಂಗಾರಪ್ಪ

0 495

ಹೊಸನಗರ : ಕುಡಿಯುವ ನೀರು ಒದಗಿಸುವುದು ಸರ್ಕಾರದ ಪ್ರಥಮ ಗುರಿ. ಎಂತಹ ಸಂದರ್ಭದಲ್ಲಿಯೂ ಅದರಲ್ಲಿ ವಿಫಲರಾಗಬಾರದು. ಸಮಸ್ಯಾತ್ಮಕ ಪ್ರದೇಶಗಳಿಗೆ ನೀರು (Water) ಒದಗಿಸಲು ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಪೂರ್ವ ತಯಾರಿ ಕೈಗೊಳ್ಳಿ. ಗ್ರಾಮೀಣ ಪ್ರದೇಶದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು (PDO) ಹೆಚ್ಚಿನ ಮುತುವರ್ಜಿ ವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ (Madhu Bangarappa) ಹೇಳಿದರು.

ಇಲ್ಲಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಬರ ನಿರ್ವಹಣೆ ಕುರಿತು ವಿವಿಧ ಇಲಾಖೆಗಳ ಅಧಿಕಾರಿಗಳ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಳೆ ಕೊರತೆಯಿಂದ ತಲೆದೋರಿರುವ ಬರ ಪರಿಸ್ಥಿತಿಯನ್ನು ನಿರ್ವಹಿಸಲು ವಿವಿಧ ಇಲಾಖೆಗಳ ಸಮನ್ವಯತೆ ಅಗತ್ಯ. ಈ ದಿಸೆಯಲ್ಲಿ ಅಧಿಕಾರಿಗಳು ಕಾರ್ಯೋನ್ಮುಖ ಆಗಬೇಕು ಎಂದರು.

ತಾಲೂಕಿನಲ್ಲಿ ಶೇ.37 ರಷ್ಟು ಮಳೆ ಕೊರತೆಯಾಗಿದೆ. ಶೇ.10ರಷ್ಟು ವಾಡಿಕೆಗಿಂತ ಕಡಿಮೆ ಪ್ರದೇಶದಲ್ಲಿ ಈ ಬಾರಿ ಬಿತ್ತನೆ ಕಾರ್ಯ ನಡೆದಿತ್ತು. ನೀರಿನ ಕೊರತೆಯಿಂದಾಗಿ 5763 ಹೆಕ್ಟೇರ್ ಭೂಮಿಯಲ್ಲಿ ಬೆಳೆದ ಕೃಷಿ ಬೆಳೆಗಳಿಗೆ ಹಾನಿಯಾಗಿದೆ. ಒಟ್ಟಾರೆ 5.50 ಕೋಟಿ ರೂ. ಹಾನಿ ಎಂದು ಅಂದಾಜಿಸಲಾಗಿದೆ ಎಂದು ಉಪವಿಭಾಗಾಧಿಕಾರಿ ಪಲ್ಲವಿ ಸಾತೇನಹಳ್ಳಿ ಸಭೆಗೆ ಮಾಹಿತಿ ನೀಡಿದರು.

ತೆರೆದ ಬಾವಿ, ಕಾಲುಸಂಕ ಹಾಗೂ ಗೋಕಟ್ಟೆ ನಿರ್ಮಾಣಕ್ಕೆ ನರೇಗಾ ಯೋಜನೆಯಡಿ ಅವಕಾಶ ಕಲ್ಪಿಸಬೇಕು. ಈಗಾಗಲೇ ಕೊರೆಯಲಾಗಿರುವ ಕೊಳವೆ ಬಾವಿಗಳಿಗೆ ಬಿಲ್ ಹಣ ಗುತ್ತಿಗೆದಾರರಿಗೆ ಸಂದಾಯವಾಗಿಲ್ಲ. ಈ ಕಾರಣಕ್ಕೆ ಹೊಸ ಕೊಳವೆ ಬಾವಿ ಕೊರೆಸಲು ಸಾಧ್ಯವಾಗಿಲ್ಲ. ಇದಕ್ಕೆ ಅವಕಾಶ ಕಲ್ಪಿಸಬೇಕು ಎಂದು ಪಿಡಿಓಗಳು ಮನವಿ ಮಾಡಿದರು. ಸಭೆಯಲ್ಲಿ ತಹಶೀಲ್ದಾರ್ ರಶ್ಮಿ, ತಾಪಂ ಇಓ ನರೇಂದ್ರಕುಮಾರ್ ಮತ್ತಿತರರು ಇದ್ದರು.

ಶಾಸಕರ ಗೈರು:
ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರ ಅಧ್ಯಕ್ಷತೆಯಲ್ಲಿ ಬರ ನಿರ್ವಹಣೆ ಸಭೆಗೆ ಶಾಸಕರಾದ ಬೇಳೂರು ಗೋಪಾಲಕೃಷ್ಣ ಹಾಗೂ ಆರಗ ಜ್ಞಾನೇಂದ್ರ ಗೈರಾಗಿದ್ದರು. ತಳ ಹಂತದ ಮಾಹಿತಿ ಒದಗಿಸುವ ನಿಟ್ಟಿನಲ್ಲಿ ಸ್ಥಳೀಯ ಶಾಸಕರ ಉಪಸ್ಥಿತಿ ಇದ್ದಲ್ಲಿ ಹೆಚ್ಚು ಪರಿಣಾಮಕಾರಿಯಾಗುತ್ತಿತ್ತು ಎಂಬ ಅನಿಸಿಕೆ ವ್ಯಕ್ತವಾಯಿತು.

Leave A Reply

Your email address will not be published.

error: Content is protected !!