ಪ್ರಣವಾನಂದ ಸ್ವಾಮೀಜಿ ಈಡಿಗ ಸಮಾಜದ ಅಧಿಕೃತ ಸ್ವಾಮೀಜಿಯೇ ಅಲ್ಲ ; ಮಧು ಬಂಗಾರಪ್ಪನವರ ಕುರಿತು ಅವಹೇಳನಕಾರಿ ಹೇಳಿಕೆಗೆ ಖಂಡನೆ

0 894

ಶಿವಮೊಗ್ಗ: ಈಡಿಗ ಸಮಾಜದ ಸ್ವಾಮೀಜಿ ಎಂದು ಹೇಳಿಕೊಳ್ಳುತ್ತಿರುವ ಪ್ರಣವಾನಂದ ಸ್ವಾಮಿಜಿ ಸಚಿವ ಮಧು ಬಂಗಾರಪ್ಪ ಅವರ ಕುರಿತು ಅವಹೇಳನಕಾರಿ ಮಾತನಾಡಿರುವುದನ್ನು ಜಿಲ್ಲಾ ಆರ್ಯ ಈಡಿಗ ಸಂಘ ಬಲವಾಗಿ ಖಂಡಿಸುತ್ತದೆ ಎಂದು ಜಿಲ್ಲಾಧ್ಯಕ್ಷ ಹುಲ್ತಿಕೊಪ್ಪ ಶ್ರೀಧರ್ ಹೇಳಿದರು.


ಅವರು ಇಂದು ಈಡಿಗ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪ್ರಣವಾನಂದ ಸ್ವಾಮೀಜಿ ಈಡಿಗ ಸಮಾಜದ ಅಧಿಕೃತ ಸ್ವಾಮೀಜಿಯೇ ಅಲ್ಲ, ಅವರು ಸ್ವಯಂ ಘೋಷಿತ ಸ್ವಾಮೀಜಿ ಎಂದು ಘೋಷಿಸಿಕೊಂಡು ಓಡಾಡುತ್ತಿದ್ದಾರೆ. ಈತ ಸಮುದಾಯದಲ್ಲಿ ಒಡಕು ಮೂಡಿಸುತ್ತಿದ್ದಾರೆ. ರಾಜಕೀಯವಾಗಿ ಮಾತನಾಡುತ್ತಾ ರಾಜಕೀಯ ಮುಖಂಡರಲ್ಲಿ ಅಲ್ಲೋಲ ಕಲ್ಲೋಲ ಮೂಡಿಸಿ ಆಧಾರರಹಿತ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದರು.
ಮಧು ಬಂಗಾರಪ್ಪ ಅವರು ಈ ನಾಡಿನ ಅಪರೂಪದ ರಾಜಕಾರಣಿ ದಿ. ಬಂಗಾರಪ್ಪನವರ ಪುತ್ರರಾಗಿದ್ದಾರೆ. ಶಾಸಕರಾಗಿ, ಸಚಿವರಾಗಿ ವಿಶೇಷವಾಗಿ ಕೆಲಸ ಮಾಡುತ್ತಿದ್ದಾರೆ. ಶಿಕ್ಷಣದ ಕೆಲಸ ಪುಣ್ಯದ ಕೆಲಸ ಎಂದುಕೊಂಡಿದ್ದಾರೆ. ರೈತರ ಪರ ಕೆಲಸ ಮಾಡಿದ್ದಾರೆ. ನಾರಾಯಣ ಗುರು ಜಯಂತಿಯನ್ನು ಸರ್ಕಾರದಿಂದ ಹಮ್ಮಿಕೊಳ್ಳಲು ಕಾರಣರಾಗಿದ್ದಾರೆ. ಜಾತಿಗಳ ಮೀರಿ ಕೆಲಸ ಮಾಡುತ್ತಿದ್ದಾರೆ. ಇಂತಹ ವ್ಯಕ್ತಿಯ ಬಗ್ಗೆ ಈ ಪ್ರಣವಾನಂದ ಸ್ವಾಮೀಜಿ ಇಲ್ಲ ಸಲ್ಲದ ಮಾತನಾಡಿ ಈಡಿಗ ಸಮಾಜದ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇವರು ಕೂಡಲೇ ತಮ್ಮ ಹೇಳಿಕೆಯನ್ನು ಹಿಂಪಡೆಯಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಸ್ವಾಮೀಜಿ ವಿರುದ್ಧ ಹೋರಾಟ ನಡೆಸಲಾಗುವುದು ಎಂದು ಹೇಳಿದರು.


ನಮ್ಮ ಸಮಾಜದ ಅಧಿಕೃತ ಸ್ವಾಮೀಜಿ ಎಂದರೆ ವಿಖ್ಯಾತನಂದ ಸ್ವಾಮೀಜಿ ಆಗಿದ್ದಾರೆ. ಇವರನ್ನು ನಾವು ಪೀಠಾಧ್ಯಕ್ಷರನ್ನಾಗಿ ಮಾಡಿದ್ದೇವೆ. ನಮ್ಮ ಸಮಾಜದ ಎಲ್ಲಾ ಉಪ ಪಂಗಡಗಳ ಮುಖಂಡರು ಒಪ್ಪಿಕೊಂಡು ಪೀಠಾಧ್ಯಕ್ಷರನ್ನಾಗಿ ಮಾಡಿದ್ದೇವೆ. ಪ್ರಣವಾನಂದ ಸ್ವಾಮೀಜಿಯ ಹೇಳಿಕೆಗೂ, ಈಡಿಗ ಸಮಾಜಕ್ಕೂ ಯಾವ ಸಂಬಂಧವೂ ಇಲ್ಲ ಎಂದರು.


ಪತ್ರಿಕಾಗೋಷ್ಠಿಯಲ್ಲಿ ಈಡಿಗ ಸಮಾಜದ ಪ್ರಮುಖರಾದ ಎಸ್.ವಿ. ರಾಮಚಂದ್ರ, ಜಿ.ಡಿ. ಮಂಜುನಾಥ್, ಮಹೇಂದ್ರ, ಕಾಗೋಡು ರಾಮಪ್ಪ ಮುಂತಾದವರಿದ್ದರು.

Leave A Reply

Your email address will not be published.

error: Content is protected !!