ಪ್ರತಿನಿತ್ಯ ನಾವು ಕನ್ನಡಿಗರಾಗಬೇಕು ; ಡಿಸಿ ಆರ್. ಸೆಲ್ವಮಣಿ

0 89

ಶಿವಮೊಗ್ಗ: ಪ್ರತಿನಿತ್ಯ ನಾವು ಕನ್ನಡಿಗರಾಗಬೇಕು ಎಂದು ಜಿಲ್ಲಾಧಿಕಾರಿ ಆರ್. ಸೆಲ್ವಮಣಿ ಹೇಳಿದರು.
ಅವರು ಇಂದು ಜಿಲ್ಲಾಡಳಿತ, ಜಿಲ್ಲಾ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಡಿಎಆರ್ ಪೊಲೀಸ್ ಪೆರೇಡ್ ಮೈದಾನದಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ಕನ್ನಡ ರಾಜ್ಯೋತ್ಸವವನ್ನು ನಾಡಿನ ಎಲ್ಲರೂ ಅತ್ಯಂತ ಸಂಭ್ರಮ, ಸಂತೋಷದಿಂದ ಆಚರಿಸುತ್ತಿದ್ದೇವೆ. ಜಾತಿ, ಮತ, ಭಾಷೆ ಹಾಗೂ ಧರ್ಮಗಳನ್ನು ಮೀರಿದ ಎಲ್ಲಾ ಕನ್ನಡಿಗರ ಹಬ್ಬವಾಗಿರುತ್ತದೆ. ಬಹುತೇಕ ಕನ್ನಡ ಪ್ರದೇಶಗಳೆಲ್ಲವೂ ಒಂದಾಗಿ ಮೈಸೂರು ರಾಜ್ಯವೆಂದು 1956ರ ನವೆಂಬರ್ 01 ರಂದು ಉದಯವಾಯಿತು. ತದನಂತರ ಕನ್ನಡಿಗರ ಬಯಕೆಯಂತೆ 1973ರ ನವೆಂಬರ್ 01ರಂದು ಕರ್ನಾಟಕ ಎಂದು ಮರುನಾಮಕರಣವಾಯಿತು ಎಂದರು.

ರಾಜ್ಯೋತ್ಸವ, ಭಾಷಾಭಿಮಾನ ನವೆಂಬರ್ ಮಾಹೆಗೆ ಸೀಮಿತವಾದರೆ ಸಾಲದು. ಪ್ರತಿನಿತ್ಯ ನಾವು ಕನ್ನಡಿಗರಾಗಿರಬೇಕು. ಕನ್ನಡ ನಮ್ಮ ಉಸಿರು, ಜೀವನಾಡಿಯಾಗಬೇಕು. ಆಂತರಿಕವಾಗಿ ಕನ್ನಡದ ಡಿಂಡಿಮ ಮೊಳಗಬೇಕು ಎಂದರು.

ಸುಮಾರು ಎರಡು ಸಾವಿರ ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಯು ಅತ್ಯಂತ ಶ್ರೀಮಂತ ಸಾಹಿತ್ಯ ಹೊಂದಿದ್ದು, ಕನ್ನಡದ 8 ಸಾಹಿತಿಗಳು ಜ್ಞಾನಪೀಠ ಪ್ರಶಸ್ತಿಯನ್ನು ಪಡೆದಿರುವುದು ಸಂತೋಷದ ಸಂಗತಿಯಾಗಿರುತ್ತದೆ ಎಂದರು.

ಕನ್ನಡ ರಾಜ್ಯೋತ್ಸವದ ಈ ಶುಭ ಸಂದರ್ಭದಲ್ಲಿ ರಾಷ್ಟ್ರಕವಿ ಕುವೆಂಪುರವರ ಈ ಕವಿಸಾಲುಗಳು ಅರ್ಥಪೂರ್ಣವೆನಿಸುತ್ತವೆ. “ಎಲ್ಲಾದರೂ ಇರು ಎಂತಾದರೂ ಇರು, ಎಂದೆಂದಿಗೂ ನೀ ಕನ್ನಡವಾಗಿರು ಎಂಬ ಉದಾತ್ತಭಾವದೊಂದಿಗೆ ಎಲ್ಲಾ ಕನ್ನಡಿಗರೂ ಕನ್ನಡ ಭಾಷೆಯನ್ನು ಉಳಿಸಿ, ಬೆಳೆಸಿ ಕರ್ನಾಟಕದ ಅಭಿವೃದ್ಧಿಗೆ ಸಂಕಲ್ಪತೊಡಬೇಕಾಗಿದೆೆ ಎಂದರು.

ಕಾರ್ಯಕ್ರಮದಲ್ಲಿ ಶಾಸಕರಾದ ಎಸ್.ಎನ್. ಚನ್ನಬಸಪ್ಪ, ಎಸ್.ರುದ್ರೇಗೌಡ, ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ ಮಿಥುನ್‌ಕುಮಾರ್ ಮೇಯರ್ ಶಿವಕುಮಾರ್, ಜಿ.ಪಂ. ಸಿಇಒ ಸ್ನೇಹಲ್ ಸುಧಾಕರ್ ಲೋಖಂಡೆ, ಅಪರ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ ಸತ್ಯನಾರಾಯಣ ಪಾಲಿಕೆ ಸದಸ್ಯ ಧೀರರಾಜ್ ಹೊನ್ನವಿಲೆ, ಪೊಲೀಸ್ ಅಧಿಕಾರಿಗಳು, ವಿವಿಧ ಶಾಲಾ ಮುಖ್ಯಸ್ಥರು ಮತ್ತು ಕನ್ನಡ ಸಂಘಟನೆಗಳು ಸೇರಿದಂತೆ ಹಲವರಿದ್ದರು.

ಕಾರ್ಯಕ್ರಮಕ್ಕೂ ಮುನ್ನ ನಗರದ ಸೈನ್ಸ್ ಮೈದಾನದಿಂದ ಡಿಎಆರ್ ಮೈದಾನದವರೆಗೂ ಶ್ರೀ ಭುವನೇಶ್ವರಿ ದೇವಿಯ ಮೆರವಣಿಗೆ ನಡೆಯಿತು.

Leave A Reply

Your email address will not be published.

error: Content is protected !!