ಪ್ರತಿಯೊಂದು ಕ್ಷೇತ್ರದಲ್ಲೂ ಸಾಧನೆ ಮಾಡಿ ಮಹಿಳೆಯರು ಪುರುಷರಿಗಿಂತ ಮುನ್ನಡೆ ಸಾಧಿಸುತ್ತಿದ್ದಾರೆ ; ಬಿವೈಆರ್
ಶಿವಮೊಗ್ಗ: ಹೆಣ್ಣು ಮಕ್ಕಳು ಪ್ರತಿಯೊಂದು ಕ್ಷೇತ್ರದಲ್ಲೂ ಸಾಧನೆ ಮಾಡಿ ಪುರುಷರಿಗಿಂತ ಮುನ್ನಡೆ ಸಾಧಿಸುತ್ತಿದ್ದಾರೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹರ್ಷ ವ್ಯಕ್ತಪಡಿಸಿದ್ದಾರೆ.
ಅವರು ಇಂದು ನಗರದ ಜನ ಶಿಕ್ಷಣ ಸಂಸ್ಥೆ ಶಿವಮೊಗ್ಗದ ಕೌಶಲ್ಯವರ್ಧಿನಿ ಸಭಾಂಗಣದಲ್ಲಿ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆ ಸಹಯೋಗದಲ್ಲಿ ಕೌಶಲ ದೀಕ್ಷಾಂತ್ ಸಮರೋಹ್, (ಕೌಶಲ್ಯ ಘಟಿಕೋತ್ಸವ ಸಮಾರಂಭದಲ್ಲಿ) ವಿವಿಧ ಕೌಶಲ್ಯ ತರಬೇತಿ ಪಡೆದ ಯಶಸ್ವೀ ಫಲಾನುಭವಿಗಳಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು.
ಒಂದು ಕಾಲದಲ್ಲಿ ಹೆಣ್ಣು ಭ್ರೂಣ ಹತ್ಯೆ ನಡೆಯುತ್ತಿತ್ತು. ಹೆಣ್ಣುಮಕ್ಕಳು ಮನೆಗೆ ಭಾರ ಎಂದು ಗಂಡನ ಮನೆಗೆ ಕಳುಹಿಸಿದರೆ ಮುಗಿಯಿತು ಎಂದು ಭಾವಿಸುವ ಕಾಲವೂ ಇತ್ತು. ಆದರೆ ಪ್ರಧಾನಿ ಮೋದಿಯವರು ಹೆಣ್ಣುಮಕ್ಕಳಿಗಾಗಿ ವಿಶೇಷ ಯೋಜನೆ ತಂದಿದ್ದಾರೆ. ಬಿ.ಎಸ್. ಯಡಿಯೂರಪ್ಪನವರು ಕೂಡ ಭಾಗ್ಯಲಕ್ಷ್ಮಿ ಯೋಜನೆ ಜಾರಿಗೆ ತಂದು ಆಗ ಜಮಾ ಮಾಡಿದ್ದ ಹಣ ಈಗ 2024ರಲ್ಲಿ ಅವರ ಕೈ ಸೇರುತ್ತಿದೆ. 28ಸಾವಿರಕ್ಕೂ ಹೆಚ್ಚು ಫಲಾನುಭವಿಗಳು ತಾಲೂಕು ಒಂದರಲ್ಲೇ ಈ ಯೋಜನೆಯ ಲಾಭ ಪಡೆಯುತ್ತಿದ್ದಾರೆ. ಯುಪಿಎಸ್‌ಸಿ ಪರೀಕ್ಷೆಯಲ್ಲಿ ಕೂಡ ಮೊದಲ 10 ರ‍್ಯಾಂಕ್ ಹೆಣ್ಣುಮಕ್ಕಳ ಪಾಲಾಗಿದೆ. ಮೋದಿಯವರ ಮಹತ್ವಾಕಾಂಕ್ಷೆಯಂತೆ ಶೇ. 33ರ ಮೀಸಲಾತಿ ಜಾರಿಗೆ ಬಂದಲ್ಲಿ 180ಕ್ಕೂ ಹೆಚ್ಚು ಹೆಣ್ಣುಮಕ್ಕಳು ಸಂಸದರಾಗುತ್ತಾರೆ. ಕೌಶಲ್ಯವರ್ಧಿತ ಮಾನವ ಸಂಪನ್ಮೂಲ ಭಾರತದಲ್ಲಿ ವೃದ್ಧಿಯಾದರೆ ದೇಶ ಸದೃಢವಾಗುತ್ತದೆ. ಪ್ರಪಂಚದ ಎಲ್ಲಾ ದೇಶಗಳಲ್ಲೂ ಭಾರತದ ಪ್ರತಿಭೆಗಳು ಕೆಲಸ ಮಾಡುತ್ತಿದ್ದಾರೆ. ಸ್ವಾಭಿಮಾನದ ಬದುಕು ಬಾಳಲು ಕುಟುಂಬಕ್ಕೆ ನೆರಳಾಗಲು ಮಹಿಳೆಯರಿಗೆ ತರಬೇತಿ ನೀಡಲಾಗುತ್ತಿದೆ. ಜೆಎಸ್‌ಎಸ್ ಅಡಿಯಲ್ಲಿ ಇಡೀ ಭಾರತದಲ್ಲಿ ಈ ಕಾರ್ಯ ನಡೆಯುತ್ತಿದೆ ಎಂದರು.

ಪ್ರತಿ ವರ್ಷ 25 ಸಾವಿರ ಕಿ.ಮೀ. ರಾಷ್ಟ್ರೀಯ ಹೆದ್ದಾರಿ ನಿರ್ಮಾಣ, ಎಲ್ಲಾ ಕ್ಷೇತ್ರಗಳಲ್ಲು ಅಭಿವೃದ್ಧಿ ಸಾಧಿಸುವ ಮೂಲಕ ವಿಶ್ವದ ಗಮನವನ್ನು ಭಾರತ ಸೆಳೆದಿದೆ. ವಿಸಾ ಕೊಡಲು ಹಿಂದೇಟು ಹಾಕಿದ ರಾಷ್ಟ್ರಗಳು ಮೋದಿಯವರನ್ನು ರತ್ನಗಂಬಳಿ ಹಾಸಿ ಸ್ವಾಗತಿಸುತ್ತಿದ್ದಾರೆ. ನಮ್ಮದೇ ಗ್ಯಾರಂಟಿ ಇಲ್ಲದಾಗ ಗ್ಯಾರಂಟಿ ಸ್ಕೀಮ್‌ಗಳು ಫಲ ನೀಡುವುದಿಲ್ಲ ಎಂದು ತಿಳಿದು ಪ್ರಧಾನಿಯವರು ಕೊರೋನಾ ಸಂದರ್ಭದಲ್ಲಿ ದೇಶದ ಜನರ ಜೀವ ಉಳಿಸಲು ವ್ಯಾಕ್ಸಿನ್ ನೀಡಿ ಪ್ರಾಣ ಉಳಿಸಿದರು. ರೈಲು ಮೂಲಕ ತುರ್ತು ಆಕ್ಸಿಜನ್ ಕಳುಹಿಸಿದರು. ಬದಕುವುದೇ ಗ್ಯಾರಂಟಿ ಇಲ್ಲ ಎಂಬ ಸಂದರ್ಭದಲ್ಲಿ ದೇಶದ ಜನರ ರಕ್ಷಣೆ ಮಾಡಿದರು. ಎಲ್ಲಕ್ಕಿಂತ ಹೆಚ್ಚಾಗಿ ನಮ್ಮ ದೇಶ ಮುಖ್ಯ. ಎಲ್ಲರೂ ಒಟ್ಟಾಗಿ, ದೇಶಸೇವೆ ಮಾಡಬೇಕು ಎಂದರು.
ಶೇ.5ರ ಬಡ್ಡಿಯಲ್ಲಿ ವಿಶ್ವಕರ್ಮ ಯೋಜನೆಯಡಿ ಕರಕುಶಲಕರ್ಮಿಗಳಿಗೆ ಮೋದಿ ಸರ್ಕಾರ ಒಂದು ಲಕ್ಷದವರೆಗೆ ಸಾಲ ನೀಡುತ್ತಿದೆ. ಸ್ವನಿಧಿ ಯೋಜನೆಯಡಿ ಕೂಡ ಸ್ವಂತ ಉದ್ಯೋಗಕ್ಕೆ ಸಬ್ಸಿಡಿ ಸಾಲವನ್ನು ಯಾವುದೇ ಗ್ಯಾರಂಟಿ ಇಲ್ಲದೆ ನೀಡಲಾಗುತ್ತಿದೆ. ಇದರ ಸದುಪಯೋಗಪಡೆದುಕೊಳ್ಳಿ ಎಂದರು.
ಈ ಸಂದರ್ಭದಲ್ಲಿ ಲೀಡ್ ಡಿಸ್ಟ್ರಿಕ್ಟ್ ಡಿವಿಜನಲ್ ಮ್ಯಾನೇಜರ್ ಪ್ರಮಾಣ ಪತ್ರ ವಿತರಿಸಿದರು.
ಜೆಎಸ್‌ಎಸ್ ಸಂಸ್ಥೆಯ ಅಧ್ಯಕ್ಷರಾದ ಪ್ರೊ. ಎಸ್.ಬಿ. ಕಮಲಾಕರ್, ಅಧ್ಯಕ್ಷತೆ ವಹಿಸಿದ್ದರು. ನಿರ್ದೇಶಕರಾದ ಎಸ್.ವೈ. ಅರುಣಾದೇವಿ, ಸುಮನಾ ಎಂ. ಮತ್ತಿತರರಿದ್ದರು.