ಬಡ ದಲಿತನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ವ್ಯಕ್ತಿಗಳನ್ನು ಮತ್ತು ಕರ್ತವ್ಯಲೋಪ ಎಸಗಿದ ಪೊಲೀಸ್ ಅಧಿಕಾರಿಯನ್ನು ಬಂಧಿಸುವಂತೆ ಆಗ್ರಹಿಸಿ ದಸಂಸ ಪ್ರತಿಭಟನೆ

0 179

ಶಿವಮೊಗ್ಗ: ಬಡ ದಲಿತನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ವ್ಯಕ್ತಿಗಳನ್ನು ಮತ್ತು ಕರ್ತವ್ಯಲೋಪ ಎಸಗಿರುವ ವಿಭಾಗ 2ರ ಡಿವೈಎಸ್‌ಪಿಯವರನ್ನು ಬಂಧಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ)ಯ ಪದಾಧಿಕಾರಿಗಳು ಇಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಗೃಹಮಂತ್ರಿಗಳಿಗೆ ಮನವಿ ಸಲ್ಲಿಸಿದರು.


ದಲಿತರ ಮೇಲೆ ದೌರ್ಜನ್ಯಗಳು ನಿರಂತರವಾಗಿ ನಡೆಯುತ್ತಲೇ ಇದೆ. ಶಿವಮೊಗ್ಗ ವಿಭಾಗ 2ರ ಡಿವೈಎಸ್‌ಪಿ ಸುರೇಶ್ ಎಂ. ಅವರು ಶಿವಮೊಗ್ಗಕ್ಕೆ ಬಂದ ನಂತರ ಪರಿಶಿಷ್ಟರ ಮೇಲಿನ ದೌರ್ಜನ್ಯ ಹೆಚ್ಚಗುತ್ತಿದೆ. ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳುತ್ತಿಲ್ಲ. ದಾಖಲಿಸಲೇಬೇಕೆಂಬ ಅನಿವಾರ್ಯ ಸ್ಥಿತಿ ಬಂದಾಗ ನಿರೀಕ್ಷಣಾ ಜಾಮೀನು ಪಡೆಯಲು ಅನುಕೂಲವಾಗುವಂತೆ ನೋಡಿಕೊಳ್ಳುತ್ತಾರೆ. ದೂರು ಕೊಟ್ಟವರನ್ನೆ ಬೆದರಿಸುತ್ತಾರೆ ಎಂದು ದೂರಿದರು.


ವಿನೋಬನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬಸವನಗಂಗೂರು ಗ್ರಾಮದ ಪರಿಶಿಷ್ಟ ಜನಾಂಗದ ಕೋಟಿ ಎಂಬುವರ ಮೇಲೆ ಅದೇ ಗ್ರಾಮದ ಅರುಣ್ ಮತ್ತು ಸಂಗಡಿಗರು ಅ.2ರಂದು ಮನೆಯಿಂದ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಬೆತ್ತಲೆಗೊಳಿಸಿ ಮದ್ಯ ಸುರಿದು ದೊಣ್ಣೆಗಳಿಂದ ಮಾರಣಾಂತಿಕ ಹಲ್ಲೆ ನಡೆಸಿ ಚಾಕುವಿನಿಂದ ತಿವಿದಿದ್ದಾರೆ. ಇವರ ವಿರುದ್ಧ ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದರೂ ಕೂಡ ಆರೋಪಿಗಳನ್ನು ಬಂಧಿಸದೆ ನಿರೀಕ್ಷಣಾ ಜಾಮೀನು ಪಡೆಯಲು ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಪ್ರತಿಭಟನಕಾರರು ತಿಳಿಸಿದ್ದಾರೆ.


ಕೊಲೆ ಪ್ರಯತ್ನ ಹಾಗೂ ದೌರ್ಜನ್ಯ ಪ್ರಕರಣದ ಆರೋಪಿಗಳನ್ನು ಬಂಧಿಸದೆ ಕರ್ತವ್ಯ ಲೋಪ ಎಸಗಿರುವ ಸುರೇಶ್ ಅವರನ್ನು ತಕ್ಷಣವೇ ವರ್ಗಾವಣೆ ಮಾಡಿ ತಪ್ಪಿತಸ್ಫರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.


ಪ್ರತಿಭಟನೆಯಲ್ಲಿ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಟಿ.ಹೆಚ್. ಹಾಲೇಶಪ್ಪ, ಪ್ರಮುಖರಾದ ಎಂ.ಬಿ. ಶಿವಕುಮಾರ್, ಎ.ಡಿ. ಆನಂದ್, ರಂಗಸ್ವಾಮಿ, ಪರಮೇಶ್ ಸೂಗೂರು, ಶೇಷಪ್ಪ, ಜಗ್ಗು, ಸೇರಿದಂತೆ ಹಲವರಿದ್ದರು.

Leave A Reply

Your email address will not be published.

error: Content is protected !!