ಬರಗಾಲ ಘೋಷಣೆ ಮಾಡುವಲ್ಲಿ ರಾಜ್ಯ ಸರ್ಕಾರ ಮೀನಾ-ಮೇಷ ಎಣಿಸುತ್ತಿದೆ ; ಬಿವೈಆರ್

0 128

ಶಿವಮೊಗ್ಗ: ಬರಗಾಲ ಘೋಷಣೆ ಮಾಡುವಲ್ಲಿ ರಾಜ್ಯ ಸರ್ಕಾರ ಮೀನಾ-ಮೇಷ ಎಣಿಸುತ್ತಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.


ಅವರು ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಮಳೆ ಕೈಕೊಟ್ಟಿದೆ. ಈಗ ಬಂದರೂ ಏನೂ ಲಾಭವಿಲ್ಲ. ರೈತರು ಸಂಕಷ್ಟದಲ್ಲಿದ್ದಾರೆ. ರಾಜ್ಯ ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿಯೇಇಲ್ಲವಾಗಿದೆ ಬರಗಾಲವಿದ್ದರೂ ಕೂಡ ಘೋಷಣೆಗೆ ವಿಳಂಬ ಮಾಡುತ್ತಿದ್ದಾರೆ.


ಕಳೆದ 100 ದಿನಗಳಲ್ಲಿ 60ಕ್ಕೂ  ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೃಷಿಸಚಿವರು ಇದು ರೈತರು ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿಲ್ಲ ಎಂದು ಹೇಳುತ್ತಿದ್ದಾರೆ. ಇದು ಸರಿಯಲ್ಲ. ಅಲ್ಲದೆ ಕೇಂದ್ರ ಸರ್ಕಾರ ಕೃಷಿ ಸಮ್ಮಾನ್ ಯೋಜನೆಯಡಿ 6000 ರೂ.ಗಳನ್ನು ನೀಡುತ್ತಿತ್ತು. ಅದಕ್ಕೆ ಬಿಜೆಪಿ ಸರ್ಕಾರ ಇದಕ್ಕೆ ನಾಲ್ಕು ಸಾವಿರ ರೂ. ಸೇರಿಸಿ ರೈತರಿಗೆ ನೀಡುತ್ತಿತ್ತು. ಆದರೆ ಕಾಂಗ್ರೆಸ್ ಸರ್ಕಾರ ಈ ನಾಲ್ಕು ಸಾವಿರ ರೂ.ಗಳನ್ನು ಕೂಡ ವಾಪಾಸು ಪಡೆದಿದೆ ಎಂದು ದೂರಿದರು.


ರೈತರ ವಿಷಯದಲ್ಲಿ ರಾಜ್ಯ ಸರ್ಕಾರ ಚೆಲ್ಲಾಟವಾಡುತ್ತಿದೆ. ಮೂಗಿಗೆ ತುಪ್ಪ ಸವರು ಕೆಲಸ ಮಾಡುತ್ತಿದೆ. ಕೇಂದ್ರದ ಕಡೆ ಕೈತೋರಿಸುತ್ತಿದೆ. ಸರ್ಕಾರದ ಈ ರೈತ ವಿರೋಧಿ ನೀತಿಯನ್ನು ಖಂಡಿಸಿ ಸೆ.11ರಂದು ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ ಹಮ್ಮಿಕೊಂಡಿದ್ದು, ಶಿವಮೊಗ್ಗದಲ್ಲಿ ಕೂಡ ಪ್ರತಿಭಟನೆ ನಡೆಯಲಿದೆ ಎಂದರು.

Leave A Reply

Your email address will not be published.

error: Content is protected !!