ಬಾಬ ಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ |
ಜಾತಿ-ಮತ ಬಿಡಿ ಮಾನವತೆಗೆ ಜೀವ ಕೊಡಿ ಎಂದಿದ್ದರು ಅಂಬೇಡ್ಕರ್ ; ಮಹಾದೇವಸ್ವಾಮಿ


ಶಿವಮೊಗ್ಗ: ಜಾತಿ, ಮತ ಬಿಡಿ ಮಾನವತೆಗೆ ಜೀವ ಕೊಡಿ ಎನ್ನುವ ಮೂಲಕ ಡಾ.ಬಿ.ಆರ್.ಅಂಬೇಡ್ಕರ್‍ರವರು ಜಾತಿ-ಮತ ಮೀರಲು ಅವಶ್ಯಕವಾದ ಶಿಕ್ಷಣ, ಸಂಘಟನೆ ಮತ್ತು ಹೋರಾಟದ ಕುರಿತು ಸ್ಪಷ್ಟ ಚಿತ್ರಣ ನೀಡಿದ್ದರು ಎಂದು ಸಹ್ಯಾದ್ರಿ ಕಲಾ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಪ್ರೊ.ಮಹಾದೇವಸ್ವಾಮಿ ತಿಳಿಸಿದರು.


ನಗರದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಇಂದು ಏರ್ಪಡಿಸಲಾಗಿದ್ದ ಭಾರತ ರತ್ನ, ಸಂವಿಧಾನ ಶಿಲ್ಪಿ, ಬಾಬ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್‍ರವರ 132 ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು.
ಮೂಲ ನಿವಾಸಿ, ಅನ್ಯ ನಿವಾಸಿಗಳಿಬ್ಬರ ನಡುವಿನ ಸಾಮಾಜಿಕ ಅಂತರವೇ ಜಾತಿ. ಮತ ಎನ್ನುವುದು ಮನುಷ್ಯನನ್ನು ಮನುಷ್ಯನನ್ನಾಗಿ ನೋಡುವುದೇ ವಿನಃ ಪ್ರಾಣಿಗಳಿಗಿಂತ ಕೀಳಾಗಿ ಕಾಣುವುದಲ್ಲ. ಪರಸ್ಪರ ವ್ಯಕ್ತಿ ಗೌರವ ಹಾಗೂ ಆರ್ಥಿಕ, ಸಾಮಾಜಿಕ ಸಮಾನತೆ ನೀಡುವುದೇ ಉತ್ತಮ ಶಿಕ್ಷಣ.
ಜಾತಿ, ಮತದಾಚೆ ಬದುಕಲು ಕಲಿಸುವುದೇ ಸಂಘಟನೆ. ನೈತಿಕತೆ ಎಂಬುದು ನಾವು ರೂಢಿಸಿಕೊಳ್ಳುವ ವಿಧಾನ. ಆರ್ಥಿಕ, ಸಾಮಾಜಿಕ ಜನತಂತ್ರ ರೂಪುಗೊಳ್ಳಲು ನೈತಿಕ ವಿಧಾನದಲ್ಲಿ ಸಮಾಜ ಕಟ್ಟುವ ಕೆಲಸವೇ ಹೋರಾಟ ಎಂದಿದ್ದರು ಅಂಬೇಡ್ಕರ್.


ಸಮಾಜದ ಹಿತದೃಷ್ಟಿಯಿಂದ ಇಂತಹ ಶಿಕ್ಷಣ, ಸಂಘಟನೆ ಮತ್ತು ಹೋರಾಟದ ಮೂಲಕ ಹೇಗೆ ಹೆಜ್ಜೆ ಇಡಬೇಕೆಂದು ಅವರು ಸ್ಪಷ್ಟವಾಗಿ ತಿಳಿಸಿದ್ದರು. ಸಾಮಾಜಿಕ ಮತ್ತು ನೈತಿಕ ಬದ್ದತೆ ಇದ್ದಾಗ, ಪರಸ್ಪರ ನಂಬಿಕೆ ಬೆಳೆದಾಗ ಮಾತ್ರ ಸಮಾಜದ ಉನ್ನತಿ ಸಾಧ್ಯ ಎಂದಿದ್ದರು ಎಂದು ತಿಳಿಸಿದರು.


ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಮಾತನಾಡಿ, ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ನಮ್ಮ ಜನತಂತ್ರ ವ್ಯವಸ್ಥೆ ಇಷ್ಟು ಗಟ್ಟಿಯಾಗಿರಲು ಕಾರಣ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‍ವರು. ಅವರು ಕೇವಲ ನಮಗೆ ಸಂವಿಧಾನ ಮಾತ್ರ ನೀಡಿಲ್ಲ ಸದೃಢ ಅರ್ಥವ್ಯವಸ್ಥೆ ಬಗ್ಗೆ ಮುಂದಾಲೋಚನೆ ಮಾಡಿ ಒಳನೋಟವನ್ನು ನೀಡಿದ್ದಾರೆ.
ಸಂವಿಧಾನ ಜಾರಿಯಾದ ಮೊದಲ ದಿನವೇ ಎಲ್ಲರಿಗೂ ಸಮಾನವಾಗಿ ಮತದಾನದ ಹಕ್ಕನ್ನು ನೀಡಲಾಗಿದೆ. ಇದೊಂದು ದೊಡ್ಡ ಸಾಧನೆಯೇ ಸರಿ. ಏಕೆಂದರೆ ಎಷ್ಟೋ ಮುಂದುವರೆದ ರಾಷ್ಟ್ರಗಳು ಮಹಿಳೆಯರಿಗೆ ಮತದಾನದ ಹಕ್ಕನ್ನು ನೀಡಿರಲಿಲ್ಲ. ಆದರೆ ನಮ್ಮ ಸಂವಿಧಾನ ಜಾರಿಯಾದಗಿನಿಂದ ಎಲ್ಲರಿಗೂ ಸಮಾನವಾಗಿ ಮತದಾನದ ಹಕ್ಕನ್ನು ನೀಡಿದೆ. ನಾವೆಲ್ಲರೂ ಇದರ ಸದುಪಯೋಗ ಪಡೆಯಬೇಕು ಎಂದರು.


ಅಂಬೇಡ್ಕರ್‍ರವರು ಅರ್ಥಶಾಸ್ತ್ರದಲ್ಲಿ ಒಳ್ಳೆಯ ಪುಸ್ತಕ ಬರೆದಿದ್ದಾರೆ. ಪ್ರಸ್ತುತ ಸನ್ನಿವೇಶದ ಬಗ್ಗೆ ಅಷ್ಟು ಹಿಂದೆಯೇ ಮುಂದಾಲೋಚನೆ ಮಾಡಿ ಬರೆದಿದ್ದಾರೆ. ಇವರು ಯುವಜನತೆಗೆ, ಸಾಧಕರಿಗೆ ಸ್ಪೂರ್ತಿಯಾಗಿದ್ದು, ನಾವೆಲ್ಲರೂ ಇವರ ಜೀವನ ಚರಿತ್ರೆಯನ್ನು ಓದಬೇಕು ಎಂದರು.
ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಮಾತನಾಡಿ, ಅಂಬೇಡ್ಕರ್‍ರವರ ಬಗ್ಗೆ ಮಾತನಾಡುವುದೇ ಹೆಮ್ಮೆಯ ವಿಚಾರ. ಅವರು ಎಂದಿಗೂ ಸ್ಮರಣೀಯ. ಹಿಂದುಳಿದವರು, ಬಡವರು ಮತ್ತು ಮಹಿಳೆಯರಿಗೆ ಶಿಕ್ಷಣದ ಅಗತ್ಯತೆ ಬಗ್ಗೆ ಒತ್ತಿ ಹೇಳಿದ್ದರು.
ಆಡು ಮುಟ್ಟದ ಸೊಪ್ಪಿಲ್ಲ ಎನ್ನುವ ರೀತಿ ಅವರು ತಿಳಿಯದ ಕ್ಷೇತ್ರಗಳಿಲ್ಲ ಎನ್ನಬಹುದು. ನೂರಾರು ಕ್ಷೇತ್ರಗಳ ಬಗ್ಗೆ ಅವರು ಅಧ್ಯಯನ ಮಾಡಿ ಬರೆದಿದ್ದಾರೆ. ಅದನ್ನು ಓದಿ ಅರ್ಥ ಮಾಡಿಕೊಂಡರೆ ನಮ್ಮ ಜೀವನ ಸಾರ್ಥಕವಾಗುತ್ತದೆ. ಮಾದರಿ ವ್ಯಕ್ತಿತ್ವ ಅವರದ್ದಾಗಿದ್ದು ಅವರೊಬ್ಬ ಜ್ಞಾನ ಭಂಡಾರ. ಅಂತಹ ಮಹಾನ್ ವ್ಯಕ್ತಿಯ ಮೌಲ್ಯಗಳನ್ನು ನಾವು ಅಳವಡಿಸಿಕೊಳ್ಳಬೇಕಿದೆ ಎಂದರು.


ನಮ್ಮ ಜೀವನದಲ್ಲಿ ನಾವು ಎಷ್ಟು ವ್ಯಕ್ತಿಗಳ ಜೀವನ ಕಟ್ಟಿದ್ದೇವೆ ಅನ್ನೋದು ನಮ್ಮ ಧ್ಯೇಯವಾಗಬೇಕು. ಹಾಗೂ ನಮ್ಮ ಸುತ್ತಮುತ್ತ ಶಿಕ್ಷಣದಿಂದ ವಂಚಿತರಾದವರನ್ನು ಗುರುತಿಸಿ ಅವರ ಮನವೊಲಿಸಿ ಶಿಕ್ಷಣದಲ್ಲಿ ತೊಡಗಿಸಬೇಕು. ಜೊತೆಗೆ ನಾವೆಲ್ಲರೂ ಸಂವಿಧಾನವನ್ನು ಓದಿಕೊಳ್ಳಬೇಕು. ಅದರಲ್ಲಿ ಮುಖ್ಯವಾಗಿ ಮೂಲಭೂತ ಹಕ್ಕುಗಳು, ಕರ್ತವ್ಯಗಳು ಹಾಗೂ ರಾಜ್ಯನೀತಿಯ ನಿರ್ದೇಶನ ತತ್ವಗಳನ್ನು ಪ್ರತಿಯೊಬ್ಬರೂ ಓದಿ ತಿಳಿದುಕೊಳ್ಳಬೇಕೆಂದರು.


ಕಾರ್ಯಕ್ರಮದಲ್ಲಿ ಜಿ.ಪಂ ಸಿಇಓ ಸ್ನೇಹಲ್ ಎಸ್ ಲೋಖಂಡೆ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಶ್ರೀನಿವಾಸ್, ದಲಿತ ಸಂಘರ್ಷ ಸಮಿತಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಮುಖಂಡರು, ಜಿಲ್ಲಾ ಮಟ್ಟದ ಅಧಿಕಾರಿಗಳು, ಸಾರ್ವಜನಿಕರು ಪಾಲ್ಗೊಂಡಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,792FollowersFollow
0SubscribersSubscribe
- Advertisement -spot_img

Latest Articles

error: Content is protected !!