ಬಾಲ ಕಾರ್ಮಿಕರನ್ನು ನೇಮಿಸಿಕೊಂಡವರ ವಿರುದ್ಧ ಪ್ರಕರಣ ದಾಖಲಿಸಲು ಡಿಸಿ ಸೂಚನೆ

ಶಿವಮೊಗ್ಗ : ಹೋಟೆಲ್, ಲಾಡ್ಜ್, ಗ್ಯಾರೇಜ್, ಮನೆಗೆಲಸ, ಇಟ್ಟಿಗೆಭಟ್ಟಿ, ಇತರೆಡೆ ಮಕ್ಕಳನ್ನು ಕೆಲಸಕ್ಕೆ ನೇಮಿಸಿಕೊಂಡವರ ವಿರುದ್ದ ಪ್ರಕರಣ ದಾಖಲಿಸಿ ಎಫ್‍ಐಆರ್ ಮಾಡಬೇಕೆಂದು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆರ್ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದರು.


ಇಂದು ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿಯ ಜಿಲ್ಲಾ ಕಾರ್ಯಕಾರಿ ಸಮಿತಿ ಹಾಗೂ ಮೇಲ್ವಿಚಾರಣೆ ಮತ್ತು ಜಾಗರೂಕತೆ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.


ಸಾಮಾನ್ಯವಾಗಿ ಹೋಟೆಲ್, ಬಾರ್ ಮತ್ತು ರೆಸ್ಟೋರೆಂಟ್, ಲಾಡ್ಜ್, ಗ್ಯಾರೇಜ್, ಮನೆಗೆಲಸ, ಸ್ವಚ್ಚತೆ ಕೆಲಸಗಳು, ಮಲೆನಾಡಿನ ಗ್ರಾಮೀಣ ಭಾಗದಲ್ಲಿ ಮಕ್ಕಳನ್ನು ಕೆಲಸಕ್ಕೆ ನೇಮಿಸಿಕೊಳ್ಳುವುದನ್ನು ಕಾಣುತ್ತಿದ್ದು, ಅಧಿಕಾರಿಗಳು ಇಂತಹ ಕಡೆ ಹೆಚ್ಚಿನ ಗಮನ ಹರಿಸಿ, ದಾಳಿ ನಡೆಸಿ ಮಕ್ಕಳನ್ನು ಮುಖ್ಯವಾಹಿನಿಗೆ ಕರೆ ತರಬೇಕು. ಸಂರಕ್ಷಿಸಲ್ಪಟ್ಟ ಮಕ್ಕಳನ್ನು ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರುಪಡಿಸಿ ಅವರಿಗೆ ಶಿಕ್ಷಣ ಹಾಗೂ ನಿಯಮಾನುಸಾರ ಇತರೆ ಸಮರ್ಪಕ ವ್ಯವಸ್ಥೆ ಮಾಡಬೇಕು. ಹಾಗೂ ಮಕ್ಕಳನ್ನು ಕೆಲಸಕ್ಕೆ ನೇಮಿಸಿಕೊಂಡ ಮಾಲೀಕರ ವಿರುದ್ದ ಪ್ರಕರಣಗಳನ್ನು ದಾಖಲಿಸಿ ಎಫ್‍ಐಆರ್ ಮಾಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.

“ಮಕ್ಕಳ ಶಾಲಾ ಡ್ರಾಪ್‍ಔಟ್‍ನ್ನು ಕಡಿಮೆ ಮಾಡಬೇಕು. ಈ ನಿಟ್ಟಿನಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಕನಿಷ್ಟ ಪಿಯುಸಿ ವರೆಗೆ ಮಕ್ಕಳು ಡ್ರಾಪ್‍ಔಟ್ ಆಗದಂತೆ ತಡೆದರೆ ಅವರು ಬಾಲಕಾರ್ಮಿಕರಾಗಿ ಅಲ್ಲಿ ಇಲ್ಲಿ ದುಡಿಯುವುದು ಕಡಿಮೆಯಾಗುತ್ತದೆ. ಆದ್ದರಿಂದ ಶಿಕ್ಷಣ ಇಲಾಖೆ, ಅಲ್ಪಸಂಖ್ಯಾತ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯವರು ಮಕ್ಕಳು ಶಾಲೆಯಿಂದ ಹೊರಗುಳಿಯದಂತೆ ಕ್ರಮ ವಹಿಸಬೇಕು.”
– ಡಾ.ಸೆಲ್ವಮಣಿ.ಆರ್, ಜಿಲ್ಲಾಧಿಕಾರಿಗಳು

ಎಲ್ಲ ತಾಲ್ಲೂಕುಗಳಲ್ಲಿ ಬಾಲಕಾರ್ಮಿಕರ ಕುರಿತು ತಪಾಸಣೆ ಕೈಗೊಳ್ಳಬೇಕು. ಮಕ್ಕಳನ್ನು ಸಾಮಾನ್ಯವಾಗಿ ಕೆಲಸಕ್ಕೆ ನಿಯೋಜಿಸುವಂತಹ ಸ್ಥಳಗಳನ್ನು ಗುರುತಿಸಿ ದಾಳಿಗಳನ್ನು ಕೈಗೊಂಡು, ತಕ್ಷಣ ಪ್ರಕರಣ ದಾಖಲಿಸಬೇಕು. ಹೆಚ್ಚೆಚ್ಚು ಪ್ರಕರಣ ದಾಖಲಿಸಿ, ಎಫ್‍ಐಆರ್ ಮಾಡಿದಂತೆ ಬಾಲಕಾರ್ಮಿಕತೆಯನ್ನು ಕಡಿಮೆ ಮಾಡಬಹುದು. ಆದ್ದರಿಂದ ಈ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಬೇಕು. ಬಾಲಕಾರ್ಮಿಕ ಮುಕ್ತ ವಲಯವನ್ನಾಗಿಸುವ ಕ್ರಿಯಾ ಯೋಜನೆ ಅನುಷ್ಟಾನದೊಂದಿಗೆ ಎಂಎಸ್‍ಡಬ್ಲ್ಯೂ ವಿದ್ಯಾರ್ಥಿಗಳ ಒಟ್ಟಿಗೆ ಕಾರ್ಮಿಕ ಇಲಾಖೆ ಅಧಿಕಾರಿಗಳು ಬಾಲಕಾರ್ಮಿಕರ ಸರ್ವೇ ಕಾರ್ಯ ಕೈಗೊಂಡಲ್ಲಿ ಸರ್ವೇ ಜೊತೆ ಸಮುದಾಯದಲ್ಲಿ ಜಾಗೃತಿಯೂ ಮೂಡಿಸಿದಂತೆ ಆಗುತ್ತದೆ. ಆದ್ದರಿಂದ ಎಂಎಸ್‍ಡಬ್ಲ್ಯೂ ವಿದ್ಯಾರ್ಥಿಗಳೊಂದಿಗೆ ವ್ಯವಸ್ಥಿತವಾಗಿ ಸಮೀಕ್ಷೆ ನಡೆಸುವಂತೆ ತಿಳಿಸಿದರು.


ಜಿಲ್ಲೆಯಲ್ಲಿ 2,83,391 ಅಸಂಘಟಿತ ಕಾರ್ಮಿಕರು ಇ-ಶ್ರಮ್ ಯೋಜನೆಯಡಿ ನೋಂದಣಿ ಮಾಡಿಸಿಕೊಂಡಿದ್ದು, ಸಿಎಸ್‍ಸಿಯವರೊಂದಿಗೆ ಗ್ರಾಮ್ ಒನ್‍ಗಳಲ್ಲಿ ಸಹ ನೋಂದಣಿ ಪ್ರಕ್ರಿಯೆ ಚುರುಕುಗೊಳಿಸಿ ನೋಂದಣಿಯನ್ನು ಹೆಚ್ಚಿಸಬೇಕು ಎಂದರು.


ಜಿಲ್ಲಾ ಕಾರ್ಮಿಕ ಅಧಿಕಾರಿ ಸುಮಾ ಹೆಚ್.ಎಸ್ ಮಾತನಾಡಿ, ಬಾಲಕಾರ್ಮಿಕ ಪದ್ದತಿ ನಿರ್ಮೂಲನೆಗಾಗಿ ಕ್ರಿಯಾ ಯೋಜನೆ ರೂಪಿಸಿ ಜಿಲ್ಲೆಯಾದ್ಯಂತ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. 2022 ರ ಏಪ್ರಿಲ್‍ನಿಂದ 2023 ರ ಮಾರ್ಚ್‍ವರೆಗೆ ಜಿಲ್ಲೆಯಲ್ಲಿ 853 ತಪಾಸಣೆ ಕೈಗೊಳ್ಳಲಾಗಿದ್ದು, 18 ಕಾರ್ಮಿಕರನ್ನು ರಕ್ಷಿಸಲಾಗಿದೆ. 04 ಪ್ರಕರಣಗಳಿಗೆ ಎಫ್‍ಐಆರ್ ದಾಖಲಿಸಲಾಗಿದೆ ಎಂದರು.


ಸಭೆಯಲ್ಲಿ ಎಎಸ್‍ಪಿ ಅನಿಲ್‍ಕುಮಾರ್ ಭೂಮರೆಡ್ಡಿ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ, ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿಯ ಯೋಜನಾ ನಿರ್ದೇಶಕ ರಘುನಾಥ್, ಕಾರ್ಮಿಕ ಇಲಾಖೆ ಅಧಿಕಾರಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,802FollowersFollow
0SubscribersSubscribe
- Advertisement -spot_img

Latest Articles

error: Content is protected !!