ಬಿಜೆಪಿಗೆ ಸ್ಪಷ್ಟ ಬಹುಮತ ನೀಡುವಂತೆ ಶೋಭಾ ಕರಂದ್ಲಾಜೆ ಮನವಿ

0 47

ಶಿವಮೊಗ್ಗ : ಕಳೆದ ಬಾರಿ ಬಹುಮತದ ಸರ್ಕಾರ ಇರಲಿಲ್ಲ. ಈ ಬಾರಿ ಪೂರ್ಣ ಬಹುಮತದ ಸರ್ಕಾರ ರಚನೆಗೆ ಮತದಾರರು ಆಶೀರ್ವಾದ ಮಾಡುವಂತೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮನವಿ ಮಾಡಿದರು.

ಜಿಲ್ಲಾ ಬಿಜೆಪಿ ಚುನಾವಣಾ ಕಾರ್ಯಾಲಯದಲ್ಲಿ ಇಂದು
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಶಾಸಕರು ಅಸಮಾಧಾನಗೊಂಡು ಆ ಪಕ್ಷದ ವಿರುದ್ಧವೇ ತಿರುಗಿ ಬಿದ್ದಿದ್ದರು. ಅವರನ್ನು ಸೇರಿಸಿಕೊಂಡು ಸರ್ಕಾರ ಮಾಡುವ ಹೊಣೆಗಾರಿಕೆ ಬಿಜೆಪಿಯದ್ದಾಗಿತ್ತು. ಆದರೆ ಈ ಬಾರಿ ಅಂತಹ ಸ್ಥಿತಿ ನಿರ್ಮಾಣ ಮಾಡದೆ ಬಿಜೆಪಿಗೆ ಬಹುಮತ ನೀಡುವಂತೆ ಹೇಳಿದರು.

ಈ ಬಾರಿ ಚುನಾವಣೆ ಅಭಿವೃದ್ದಿ ಆಧಾರದ ಮೇಲೆ ನಡೆಯುತ್ತಿದ್ದು, ಲೋಕಸಭೆ ಚುನಾವಣೆಗೆ ಶಕ್ತಿ ತುಂಬುವುದು, ರಾಜ್ಯದಲ್ಲಿ ಅಪೂರ್ಣ ಕಾಮಗಾರಿಗಳನ್ನು ಪೂರ್ಣ ಮಾಡುವುದು ಪ್ರಮುಖ ಆದ್ಯತೆ ಆಗಿದೆ. ನಮ್ಮ ನಾಯಕರು ಮಾಡಿದ ಶಿಲಾನ್ಯಾಸಗಳನ್ನು ಪೂರ್ಣ ಮಾಡುವುದೇ ಮೊದಲ ಆದ್ಯತೆಯಾಗಿದೆ ಎಂದರು.

ವಸತಿ, ಕುಡಿಯುವ ನೀರು, ರೈಲ್ವೆ, ಹೆದ್ದಾರಿ, ನೀರಾವರಿ ಯೋಜನೆ, ವಿಮಾನ ನಿಲ್ದಾಣಗಳು ನಿರ್ಮಾಣವಾಗಿವೆ. ರಾಜ್ಯದಲ್ಲಿ 54 ಲಕ್ಷ ರೈತರು ಕಿಸಾನ್ ಸಮ್ಮಾನ್ ಯೋಜನೆಯ ಲಾಭ ಪಡೆಯುತ್ತಿದ್ದಾರೆ. ದೇಶದ ರಕ್ಷಣೆ ಅಗತ್ಯವಾಗಿದೆ. ಯಾವುದೇ ಯೋಜನೆಯನ್ನು ಕೇಂದ್ರ ನೇರವಾಗಿ ಜಾರಿ ಮಾಡುವುದಿಲ್ಲ. ರಾಜ್ಯ ಸರ್ಕಾರಗಳು ಭೂಮಿ ನೀಡಬೇಕು. ಈ ನಿಟ್ಟಿನಲ್ಲಿ ಡಬಲ್ ಎಂಜಿನ್ ಸರ್ಕಾರ ಕೆಲಸ ಮಾಡುತ್ತಿದೆ. ಮತ್ತೊಮ್ಮೆ ಕೆಲಸ ಮಾಡಲು ಅವಕಾಶ ನೀಡುವಂತೆ ಮನವಿ ಮಾಡಿದರು.

ಪ್ರಧಾನಿ ಮೋದಿಯವರು ಈಗಾಗಲೇ ರಾಜ್ಯದಲ್ಲಿ ಪ್ರವಾಸ ಮಾಡಿದ್ದಾರೆ. ಇನ್ನು ಕೆಲವು ದಿನ ರಾಜ್ಯ ಪ್ರವಾಸ ಮಾಡಲಿದ್ದಾರೆ. ಕಾರ್ಯಕರ್ತರಲ್ಲಿ ಕಾರ್ಯಕರ್ತರಾಗಿ ಮೋದಿ ಕೆಲಸ ಮಾಡುತ್ತಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್, ಮುಖಂಡರಾದ ಎಂ.ಬಿ. ಭಾನುಪ್ರಕಾಶ್, ಆರ್.ಕೆ. ಸಿದ್ದರಾಮಣ್ಣ, ಕೆ.ಜಿ. ಕುಮಾರಸ್ವಾಮಿ, ಶಿವರಾಜ್, ಕೆ.ವಿ.ಅಣ್ಣಪ್ಪ, ಶ್ರೀನಾಥ್ ಇತರರಿದ್ದರು.

Leave A Reply

Your email address will not be published.

error: Content is protected !!