ಬಿಜೆಪಿಯವರಿಗೆ ಜನರೇ ತಕ್ಕ ಶಿಕ್ಷೆ ನೀಡುತ್ತಾರೆ ; ಮಧು ಬಂಗಾರಪ್ಪ

0 0

ಶಿವಮೊಗ್ಗ : ಭಾರತ, ಇಂಡಿಯಾ ಎಂದು ಭಾವನಾತ್ಮಕ ವಿಷಯವನ್ನು ಹಿಡಿದುಕೊಂಡು ಬಿಜೆಪಿಯವರು ಆಟ ಆಡಲು ಹೋದರೆ ಜನರೇ ತಕ್ಕ ಶಿಕ್ಷೆ ನೀಡುತ್ತಾರೆ ಎಂದು ಪ್ರಾಥಮಿಕ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.

ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಷ್ಟು ದಿನ ರಾಮಕೃಷ್ಣನನ್ನು ಹಿಡಿದುಕೊಂಡಿದ್ದರು ಈಗ ಅದನ್ನು ಬಿಟ್ಟು ಇಂಡಿಯಾ, ಭಾರತ ವಿಷಯ ಹಿಡಿದುಕೊಂಡಿದ್ದಾರೆ. ಬಿಜೆಪಿ ಅವರಿಗೆ ಮಾಡಲು ಕೆಲಸವಿಲ್ಲ. ನಿಜವಾದ ಭಾರತೀಯರನ್ನೇ ಮರೆತಿದ್ದಾರೆ. ಹಿಂದೆ ನಡೆದ ಚುನಾವಣೆ ಸಂದರ್ಭದಲ್ಲಿ ಇದನ್ನೇ ಮಾಡಿದ್ದರು. ಆದರೆ ಭಾವನಾತ್ಮಕ ವಿಚಾರಗಳನ್ನು ಹಿಡಿದುಕೊಂಡರೆ ಉಪಯೋಗವಾಗುವುದಿಲ್ಲ ಎಂದು ತಿರುಗೇಟು ನೀಡಿದರು.

ಈಗ ನಾವೆಲ್ಲರೂ ಸುಖವಾಗಿದ್ದೇವೆ. ತೊಂದರೆ ಆಗುವುದಾದರೂ ಏನು ಅರ್ಥವಾಗುತ್ತಿಲ್ಲ. ಅಧಿಕಾರ ಇದೆಯೆಂದು ಹೀಗೆ ಮಾಡಿದರೆ ಜನರೇ ತಕ್ಕ ಪಾಠ ಕಲಿಸುತ್ತಾರೆ ಎಂದರು.

ಇಂಡಿಯಾ ಎಂಬ ಹೆಸರಿಗೆ ಯಾವುದೇ ಹಿನ್ನೆಲೆ ಇಲ್ಲ ಎಂದು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಮಧು ಬಂಗಾರಪ್ಪ, ಮೊದಲು ಅವರ ಹಿನ್ನೆಲೆ ಏನು ಎಂದು ತಿಳಿದುಕೊಳ್ಳಲಿ. ರಾಷ್ಟ್ರವನ್ನು ಪ್ರತಿನಿಧಿಸುವ ಕ್ರೀಡಾಪಟುಗಳು ಇಂಡಿಯಾ ಹೆಸರಿನಲ್ಲಿ ದೇಶವನ್ನು ಪ್ರತಿನಿಧಿಸುತ್ತಿದ್ದಾರೆ. ಎವರೆಸ್ಟ್ ಶಿಖರದ ಮೇಲು ಇಂಡಿಯಾ ಎಂಬ ಹೆಸರು ಅಚ್ಚೊತ್ತಿದೆ. ಬಿಜೆಪಿಯವರು ಸುಮ್ಮನೆ ಭಾವನಾತ್ಮಕ ಆಟ ಆಡುವುದನ್ನು ನಿಲ್ಲಿಸಿ ಒಳ್ಳೆಯ ಕೆಲಸ ಏನಾದರೂ ಮಾಡಿದ್ದರೆ ಅದನ್ನು ಹೇಳಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸನಾತನ ಧರ್ಮ ಕುರಿತು ತಮಿಳುನಾಡು ಸಿಎಂ ಸ್ಟಾಲಿನ್ ಪುತ್ರ ಉದಯ ನಿಧಿ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಸಚಿವರು, ಅವರು ಯಾವ ರೀತಿಯಲ್ಲಿ ಹೇಳಿಕೆ ನೀಡಿದ್ದಾರೋ ನನಗೆ ಅದರ ಬಗ್ಗೆ ಮಾಹಿತಿ ಇಲ್ಲ. ಆ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ ಟೀಕೆ ಮಾಡಲು ಹೋಗುವುದಿಲ್ಲ ಎಂದರು.

Leave A Reply

Your email address will not be published.

error: Content is protected !!