ಬಿಜೆಪಿ ರಾಜ್ಯಾಧ್ಯಕ್ಷರ ಹುದ್ದೆ ಮುಳ್ಳಿನ ಹಾಸಿಗೆ ; ಶಾಸಕ ಬೇಳೂರು ಗೋಪಾಲಕೃಷ್ಣ

0 594

ಶಿವಮೊಗ್ಗ : ಬಿಜೆಪಿ ರಾಜ್ಯಾಧ್ಯಕ್ಷರ ಹುದ್ದೆ ಮುಳ್ಳಿನ ಹಾಸಿಗೆ ಎಂದು ಕಾಂಗ್ರೆಸ್ ಶಾಸಕ ಬೇಳೂರು ಗೋಪಾಲಕೃಷ್ಣ ಅಭಿಪ್ರಾಯಿಸಿದ್ದಾರೆ.


ಅವರು ಇಂದು ಸುದ್ದಿಗಾರ ರೊಂದಿಗೆ ಮಾತನಾಡಿ, ನಮ್ಮ ಜಿಲ್ಲೆಯವರೇ ಆದ ಅದರಲ್ಲೂ ಬಿ.ಎಸ್. ಯಡಿಯೂರಪ್ಪನವರ ಪುತ್ರ ಬಿ.ವೈ. ವಿಜಯೇಂದ್ರ ಅವರಿಗೆ ರಾಜ್ಯಾಧ್ಯಕ್ಷ ಸ್ಥಾನ ಸಿಕ್ಕಿದ್ದು ನಮಗೆ ಸಂತೋಷವೇ ಆಗಿದೆ. ಅದನ್ನು ಸ್ವಾಗತಿಸುತ್ತೇವೆ. ಬಿಜೆಪಿ ವರಿಷ್ಠರಿಗೆ 6 ತಿಂಗಳ ನಂತರವಾದರೂ ಜ್ಞಾನೋದಯವಾಗಿದೆ ಎಂದರು. ಆದರೆ ಈ ಹುದ್ದೆ ಹೂವಿನ ಹಾಸಿಗೆಯಲ್ಲ. ಮುಳ್ಳಿನ ಹಾಸಿಗೆ. ಪಕ್ಷದ ಘಟಾನುಘಟಿಗಳು ಹಿರಿಯರನ್ನು ಬಿಟ್ಟು ಕಿರಿಯರಾದ ವಿಜಯೇಂದ್ರ ಅವರಿಗೆ ನೀಡಲಾಗಿದೆ. ಈಗಾಗಲೇ ಬಿಜೆಪಿಯ ಕೆಲವರಿಗೆ ಅಸಮಾಧಾನವಾಗಿದೆ ಈ ಹಿಂದೆ ಯತ್ನಾಳ್‌ ಅವರು ಇದೇ ಬಿ.ಎಸ್. ಯಡಿಯೂರಪ್ಪ ಹಾಗೂ ವಿಜಯೇಂದ್ರರ ವಿರುದ್ಧ ಆರೋಪ ಹೊರಿಸಿದ್ದರು.‌ ಕೋಟಿಗಟ್ಟಲೆ ಹಣ ಭ್ರಷ್ಟಾಚಾರ‌ ಮಾಡಿದ್ದಾರೆ ಎಂದಿದ್ದರು. ಈಗ ಅವರು ಸುಮ್ಮನಿರಲು ಹೇಗೆ ಸಾಧ್ಯ ಎಂದರು.

ನಿಮ್ಮ ಮತ್ತು ಉಸ್ತುವಾರಿ ಸಚಿವ ಮಧು ಬಂಗಾರಪ್ಪನವರ‌ ನಡುವಿನ ಶೀತಲ ಸಮರ ಎಲ್ಲಿಗೆ ಬಂತು ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಸಣ್ಣಪುಟ್ಟ ಭಿನ್ನಾಭಿಪ್ರಾಯಗಳಿವೆ. ಕಾಂಗ್ರೆಸ್‌ನವರು ನನ್ನ ವಿರುದ್ಧ ದೂರು ಕೊಟ್ಟಿದ್ದಾರೆ ಎಂದು ಹೇಳಲಾಗಿದೆ. ಈ ಬಗ್ಗೆ ನಾನು ಚರ್ಚೆ ಮಾಡುವುದಿಲ್ಲ. ಈಗಾಗಲೇ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳು ನನ್ನೊಂದಿಗೆ ಮಾತನಾಡಿದ್ದಾರೆ. ಎಲ್ಲವೂ ಸರಿಹೋಗತ್ತೆ. ಇಷ್ಟಾದರೂ ನನ್ನ ಬಾಯಿ ಮುಚ್ಚಿಸಲು ಆಗುವುದಿಲ್ಲ ಎಂದು ಮಾರ್ಮಿಕವಾಗಿ ಉತ್ತರಿಸಿದರು.

Leave A Reply

Your email address will not be published.

error: Content is protected !!