ಭ್ರೂಣ ಲಿಂಗ ಪತ್ತೆ ; ಸ್ಕ್ಯಾನಿಂಗ್ ಯಂತ್ರ ವಶ !

0 7


ಶಿವಮೊಗ್ಗ : ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆರ್ ಇವರ ಸೂಚನೆ ಮೇರೆಗೆ ಪಿಸಿ & ಪಿಎನ್‍ಡಿಟಿ ಕಾಯಿದೆಯ ಅನ್ವಯ ಡಿಐಎಂಸಿ ತಂಡವು ಸಾಗರದ ಚಾಮರಾಜಪೇಟೆಯ ಸಂಜೀವಿನಿ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ಕೈಗೊಂಡು ಸ್ಕ್ಯಾನಿಂಗ್‍ಗೆ ಸಂಬಂಧಿಸಿದ ದಾಖಲೆಗಳು ಮತ್ತು ಸ್ಕ್ಯಾನಿಂಗ್ ಯಂತ್ರವನ್ನು ವಶಪಡಿಸಿಕೊಂಡು ಸೀಲ್ ಮಾಡಲಾಗಿರುತ್ತದೆ.


ಮಾರ್ಚ್ 18 ರಂದು ಸಾಗರ ತಾಲ್ಲೂಕಿನ ಸೈದೂರು ಗ್ರಾಮ ಪಂಚಾಯಿತಿಯಲ್ಲಿ ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ’ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳು ಗ್ರಾ.ಪಂ ವ್ಯಾಪ್ತಿಯ ತಡಗಳಲೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಆಸ್ಪತ್ರೆಗೆ ಚಿಕಿತ್ಸೆಗೆಂದು ಬಂದ ಗರ್ಭಿಣಿಯ ಆರೋಗ್ಯವನ್ನು ವಿಚಾರಿಸಿದಾಗ, ತಪಾಸಣೆಗೆಂದು ಇಲ್ಲಿಗೆ ಬಂದಿರುತ್ತೇನೆ, ಈ ಹಿಂದೆ ಸಂಜೀವಿನಿ ಆಸ್ಪತ್ರೆ, ಸಾಗರ ಇಲ್ಲಿ ತಪಾಸಣೆ ಮಾಡಿಸಿದ್ದು, ಆ ಸಂದರ್ಭದಲ್ಲಿ ತನಗೆ ಗಂಡು ಮಗು ಆಗುವುದಾಗಿ ತಿಳಿಸಿರುತ್ತಾರೆ ಎಂದು ಜಿಲ್ಲಾಧಿಕಾರಿಗಳಿಗೆ ಹೇಳಿರುತ್ತಾರೆ.


ಅದರನ್ವಯ ಜಿಲ್ಲಾಧಿಕಾರಿಗಳು ಪಿಸಿ & ಪಿಎನ್‍ಡಿಟಿ ಸಕ್ಷಮ ಪ್ರಾಧಿಕಾರದಡಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಡಿಐಎಂಸಿ ತಂಡವು ಪಿಸಿ & ಪಿಎನ್‍ಡಿಟಿ ಕಾಯ್ದೆಯನ್ವಯ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದನ್ವಯ ಪರಿಶೀಲನೆ ನಡೆಸಿ ಸ್ಕ್ಯಾನಿಂಗ್ ಯಂತ್ರವನ್ನು ಸೀಜ್ ಮಾಡಲಾಗಿರುತ್ತದೆ.


ಪಿಸಿ & ಪಿಎನ್‍ಡಿಟಿ ಸಲಹಾ ಸಮಿತಿಯಲ್ಲಿ ಈ ವಿಚಾರವನ್ನು ಮಂಡಿಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಡಿಹೆಚ್‍ಓ ಡಾ.ರಾಜೇಶ್ ಸುರಗಿಹಳ್ಳಿ ತಿಳಿಸಿದ್ದಾರೆ.

Leave A Reply

Your email address will not be published.

error: Content is protected !!