ಮಕ್ಕಳ ಸುಪ್ತ ಪ್ರತಿಭೆ ಹೊರತರಲು ಪ್ರತಿಭಾ ಕಾರಂಜಿ ಸಹಕಾರಿ ; ಬಿಇಒ ಹೆಚ್.ಆರ್. ಕೃಷ್ಣಮೂರ್ತಿ
ರಿಪ್ಪನ್‌ಪೇಟೆ : ಪ್ರತಿಯೊಂದು ಮಕ್ಕಳಲ್ಲೂ ಒಂದಲ್ಲ ಒಂದು ಪ್ರತಿಭೆ ಅಡಗಿರುತ್ತದೆ, ಅದನ್ನು ಹೊರಹಾಕಲು ಪ್ರತಿಭಾ ಕಾರಂಜಿ ಸಹಕಾರಿಯಾಗಿದೆ ಎಂದು ಹೊಸನಗರ ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್.ಆರ್ ಕೃಷ್ಣಮೂರ್ತಿ ಹೇಳಿದರು.
ಅವರು ಶುಕ್ರವಾರ ಕೋಡೂರು ಗ್ರಾಪಂ ವ್ಯಾಪ್ತಿಯ ಕರಿಗೆರಸು ಸ.ಹಿ.ಪ್ರಾ.ಶಾಲೆಯಲ್ಲಿ ಕೋಟೆತಾರಿಗ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪ್ರಾಸ್ತಾವಿಕವಾಗಿ ಮಾತನಾಡಿದರು.

ತಾಲೂಕಿನ ಒಟ್ಟು 19 ಕ್ಲಸ್ಟರ್ ನಲ್ಲಿ ಎಲ್ಲೂ ಮಾಡದ ಅದ್ದೂರಿ ಕಾರ್ಯಕ್ರಮ ಈ ಗ್ರಾಮದಲ್ಲಿ ನಡೆಯುತ್ತಿದೆ. ಶಾಲೆಯ ಸುತ್ತಮುತ್ತಲಿನ ವಾತಾವರಣ ಸುಂದರವಾಗಿದ್ದು ಸ್ಥಳೀಯರ ಸಹಕಾರದಿಂದ ತಳಿರು ತೋರಣಗಳಿಂದ ಶೃಂಗಾರ ಮಾಡಿರುವುದು ಇಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿದೆ. ಸರ್ಕಾರದ ಜೊತೆಗೆ ಸ್ಥಳೀಯ ಗ್ರಾಪಂ ಮತ್ತು ಗ್ರಾಮಸ್ಥರ ಸಹಕಾರ ಇದ್ದರೆ ಶಾಲಾಭಿವೃದ್ದಿ ಹೊಂದಲು ಸಾಧ್ಯವೆಂದ ಅವರು, ಹೊಸನಗರ ಶೈಕ್ಷಣಿಕವಾಗಿ ಮುಂದುವರೆದ ತಾಲೂಕು. ಈ ಬಾರಿ ಶೇ. 92.05 ಫಲಿತಾಂಶ ಬಂದಿದೆ. 17 ಶಾಲೆಗಳು ಶೇ.100 ಫಲಿತಾಂಶ ಪಡೆದಿವೆ. 20 ಕ್ಕಿಂತ ಹೆಚ್ಚು ಶಾಲೆಗಳು 90% ಫಲಿತಾಂಶ ಪಡೆದಿವೆ ಎಂದರು.
ಕೋಡೂರು ಗ್ರಾಪಂ ಅಧ್ಯಕ್ಷ ಉಮೇಶ್ ಮತ್ತು ಸದಸ್ಯರಾದ ಶೇಖರಪ್ಪ, ಮಂಜಪ್ಪ, ಜಯಪ್ರಕಾಶ್ ಶೆಟ್ಟಿ ಮಾತನಾಡಿ, ಪ್ರತಿಭೆಗೆ ತಕ್ಕ ಪ್ರೋತ್ಸಾಹ ದೊರೆತಾಗ ಸಾಧನೆಯ ಗುರಿ ತಲುಪಲು ಸಾಧ್ಯ. ಪ್ರತಿಭೆಗಳಿಲ್ಲದ ಸಮುದಾಯ ಜಡವಾಗುತ್ತದೆ. ಆದ್ದರಿಂದ ಪ್ರತಿಭೆ ಯಾರ ಸ್ವತ್ತೂ ಅಲ್ಲ ಎಂಬುದನ್ನು ಅರಿತು ಮಕ್ಕಳು ಸಾಧನೆಗೆ ಮುಂದಾಗಬೇಕೆಂದರು.
ಮಕ್ಕಳು ಭಯ, ಅಂಜಿಕೆ, ನಾಚಿಕೆಯಿಂದ ಹೊರಬಂದು ಯಾವುದೇ ಸಮಸ್ಯೆಯನ್ನು ಧೈರ್ಯದಿಂದ ಎದುರಿಸುವಂತಾಗಬೇಕು. ಆಗ ಬದುಕು ಜಡವಾಗದೇ ಸಾಧನೆಯ ಕೇಂದ್ರವಾಗುತ್ತದೆ. ಜಗತ್ತು ಸ್ಪರ್ಧಾತ್ಮಕವಾಗಿ ಮುಂದುವರೆಯುತ್ತಿದ್ದು, ಯಾವುದೇ ಸ್ಥಾನವನ್ನು ಸ್ಪರ್ಧೆಯಿಂದಲೇ ಗಳಿಸಬೇಕಿದೆ. ಈ ನಿಟ್ಟಿನಲ್ಲಿ ಮಕ್ಕಳನ್ನು ಅಣಿಗೊಳಿಸಬೇಕು. ಯಾರಲ್ಲಿ ಪ್ರತಿಭೆ ಇರುತ್ತದೆಯೋ ಅಂಥವರನ್ನು ಸನ್ಮಾನ ಹುಡುಕಿಕೊಂಡು ಬರುತ್ತದೆ ಎಂದು ತಿಳಿಸಿದರು.
ಕೋಡೂರು ಗ್ರಾಪಂ ಮಾಜಿ ಅಧ್ಯಕ್ಷ ಜಯಂತ್ ಮಾತನಾಡಿ, ಎಲ್ಲರ ಸಹಕಾರ ಇದ್ದರೆ ಯಾವುದೇ ಕಾರ್ಯಕ್ರಮ ಮಾಡಲು ಸಾಧ್ಯ. ಸ್ಪರ್ಧೆಯಲ್ಲಿ ಭಾಗವಹಿಸುವಿಕೆ ಮುಖ್ಯ, ಗೆಲುವು ಮುಖ್ಯವಲ್ಲ ಎಂದರು.
ಚಿಕ್ಕಜೇನಿ ಗ್ರಾಪಂ ಅಧ್ಯಕ್ಷ, ರಾಜು ಎನ್.ಪಿ. ಮತ್ತು ಸದಸ್ಯರಾದ ವೆಂಕಟಾಚಲ, ಶಾರದಮ್ಮ ಮಾತನಾಡಿ, ಅಕ್ಷರ ಕಲಿಕೆಯಿಂದ ಮಾತ್ರ ಶಿಕ್ಷಣ ಸಾಧ್ಯವಿಲ್ಲ. ವ್ಯಕ್ತಿತ್ವ ವಿಕಸನಕ್ಕೆ ಸಾಂಸ್ಕೃತಿಕ ಚಟುವಟಿಕೆಗಳು ಪೂರಕವಾಗಿವೆ ಎಂದರು.
ಕೋಡೂರು ಗ್ರಾಪಂ ಅಧ್ಯಕ್ಷ ಉಮೇಶ್ ಮತ್ತು ಚಿಕ್ಕಜೇನಿ ಗ್ರಾಪಂ ಅಧ್ಯಕ್ಷ ರಾಜು ಎನ್.ಪಿ ಉದ್ಘಾಟಿಸಿದ ಕಾರ್ಯಕ್ರಮದಲ್ಲಿ ಎಸ್.ಡಿ.ಎಂ.ಸಿ ಅಧ್ಯಕ್ಷ ವೀರಭದ್ರಪ್ಪ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯರಾದ ಚಂದ್ರಕಲಾ, ಗ್ರಾಪಂ ಮಾಜಿ ಸದಸ್ಯೆ ನಾಗವೇಣಿ ವಸಂತ್, ಶಿಕ್ಷಣ ಇಲಾಖೆಯ ಕರಿಬಸಪ್ಪ, ಜಗದೀಶ್ ಕಾಲಿನಲ್ಲಿ, ಬಸವಣ್ಯಪ್ಪ, ಮಾಲ್ತೇಶ್, ಶಿವಪ್ಪ ಹೆಚ್.ಸಿ, ಧರುಣೇಶ್, ಕ್ಲಸ್ಟರ್ ವ್ಯಾಪ್ತಿಯ ಎಲ್ಲಾ ಶಾಲೆಯ ಶಿಕ್ಷಕರು, ಎಸ್.ಡಿ.ಎಂ.ಸಿ ಅಧ್ಯಕ್ಷರು, ಸದಸ್ಯರು ಮತ್ತಿತರರು ಇದ್ದರು.
ವಿದ್ಯಾರ್ಥಿಗಳಾದ ಕವನ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಶಿಕ್ಷಕ ಕೃಷ್ಣಅರ್ಕಾಚಾರ್ ನಿರೂಪಿಸಿದರು. ಸಿ.ಆರ್.ಪಿ ಸಂತೋಷ್ ಸ್ವಾಗತಿಸಿದರು. ಶಿಕ್ಷಕಿ ವಾಣಿ ವಂದಿಸಿದರು.