ಮತದಾನ ದಿನದ ಅಗತ್ಯ ಸಿದ್ದತೆಗಳ ಬಗ್ಗೆ ಡಿಸಿ-ಸಿಇಓ ಸೂಚನೆ

0 37


ಶಿವಮೊಗ್ಗ: ವಿಧಾನಸಭೆ ಚುನಾವಣಾ ಮತದಾನದಂದು ಎಲ್ಲ ತಾಲ್ಲೂಕುಗಳ ಇಓ ಮತ್ತು ಪಿಡಿಓ ಗಳು ತಮ್ಮ ವ್ಯಾಪ್ತಿಯ ಮತಗಟ್ಟೆಗಳಲ್ಲಿ ಅತ್ಯಂತ ಕಾಳಜಿ ವಹಿಸಿ, ಮತಗಟ್ಟೆ ಅಧಿಕಾರಿಗಳು ಮತ್ತು ಮತದಾರರಿಗೆ ಅಗತ್ಯವಾದ ಮೂಲಭೂತ ವ್ಯವಸ್ಥೆಗಳನ್ನು ಉತ್ತಮ ರೀತಿಯಲ್ಲಿ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಹಾಗೂ ಜಿ.ಪಂ ಸಿಇಓ ಸ್ನೇಹಲ್ ಸುಧಾಕರ ಲೋಖಂಡೆ ಸೂಚನೆ ನೀಡಿದರು.


ಮೇ 10 ರಂದು ನಡೆಯುವ ವಿಧಾನಸಭಾ ಚುನಾವಣೆ ಮತದಾನದ ಸಿದ್ದತೆ ಕುರಿತು ಇಂದು ಎಲ್ಲ ತಾಲ್ಲೂಕುಗಳ ಇಓ ಮತ್ತು ಪಿಡಿಓ ಜೊತೆ ವಿಸಿ ಮೂಲಕ ಏರ್ಪಡಿಸಲಾಗಿದ್ದ ಸಭೆಯಲ್ಲಿ ಅವರು ಮಾತನಾಡಿದರು.


ಜಿಲ್ಲಾಧಿಕಾರಿಗಳು ಮಾತನಾಡಿ, ಇಓ ಗಳು ಮತಗಟ್ಟೆಗಳಲ್ಲಿ ಕನಿಷ್ಟ ಸೌಲಭ್ಯ ಭರವಸೆಗಳಾದ(ಎಎಂಎಫ್) ಶಾಮಿಯಾನ, ಕುಡಿಯುವ ನೀರು, ಪೋಲಿಂಗ್ ಅಧಿಕಾರಿಗಳಿಗೆ ಊಟದ ವ್ಯವಸ್ಥೆಯನ್ನು ಅತ್ಯಂತ ಕಾಳಜಿ ವಹಿಸಿ ಮಾಡಬೇಕು. ಪ್ರತಿ ಬೂತ್‍ಗಳಿಗೆ ಒಬ್ಬ ಸಹಾಯಕರನ್ನು ಈಗಲೇ ನೇಮಿಸಬೇಕು. ಹಾಗೂ ಕ್ಲಸ್ಟರ್ ಬೂತ್ ಮತ್ತು ರಿಮೋಟ್ ಮತಗಟ್ಟಗಳಿಗೆ ಭೇಟಿ ನೀಡಿ ಎಲ್ಲ ರೀತಿಯ ಅಗತ್ಯ ವ್ಯವಸ್ಥೆ ಮಾಡಬೇಕು.
ಕನಿಷ್ಟ ಸೌಲಭ್ಯಗಳನ್ನು ಖಾತ್ರಿಪಡಿಸಲು ಈಗಿನಿಂದಲೇ ಸಿದ್ದತೆ ಮಾಡಿಕೊಳ್ಳಬೇಕು. ಮತದಾನ ದಿನದಂದು ತಮ್ಮ ತಮ್ಮ ಗ್ರಾ.ಪಂ ವ್ಯಾಪ್ತಿಯಲ್ಲಿ ಅಗತ್ಯವಾದ ಎಲ್ಲ ರೀತಿಯ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಕ್ರಮ ವಹಿಸಬೇಕೆಂದು ಸೂಚನೆ ನೀಡಿದ ಅವರು ಇಓಗಳು ತಹಶೀಲ್ದಾರರೊಂದಿಗೆ ಸಮನ್ವಯ ಸಾಧಿಸಿ ಮತದಾನ ದಿನದ ಅಗತ್ಯ ತಯಾರಿ ಮಾಡಿಕೊಳ್ಳುವಂತೆ ತಿಳಿಸಿದರು.


ಜಿಲ್ಲಾ ಪಂಚಾಯತ್ ಸಿಇಓ ಮಾತನಾಡಿ, ಇಓ ಗಳು ಪ್ರತಿ ಬೂತ್‍ಗಳಿಗೆ ಗ್ರಾ.ಪಂ ಯಿಂದ ಓರ್ವ ಸಿಬ್ಬಂದಿಯನ್ನು ಸಹಾಯಕರಾಗಿ ನೇಮಿಸಬೇಕು. ಮತದಾರರಿಗೆ ಅನುಕೂಲವಾಗುವಂತೆ ಶಾಮಿಯಾನ, ನೀರಿನ ವ್ಯವಸ್ಥೆ, ನಿರೀಕ್ಷಣಾ ಕೊಠಡಿ, ಫ್ಯಾನ್ ಮತ್ತು ಚೇರ್‍ಗಳ ವ್ಯವಸ್ಥೆ ಮಾಡಬೇಕು. ಹಾಗೂ ಮತದಾನ ದಿನದಂದು ಮತಗಟ್ಟೆಗಳ 500 ಮೀಟರ್ ವ್ಯಾಪ್ತಿಯಲ್ಲಿ ಸ್ವಚ್ಚತೆ ಕಾಪಾಡಬೇಕು. ಪಿಡಿಓ ಗಳು ಹಿಂದಿನ ದಿನವೇ ಸ್ವಚ್ಚತೆ ಕ್ರಮ ಕೈಗೊಂಡು ಈ ಬಗ್ಗೆ ಖಾತ್ರಿ ಪಡಿಸಿಕೊಳ್ಳಬೇಕು. ಮತಗಟ್ಟೆ ಅಧಿಕಾರಿ/ಸಿಬ್ಬಂದಿಗಳಿಗೆ ಊಟದ ವ್ಯವಸ್ಥೆ ಮಾಡಬೇಕು ಎಂದು ತಿಳಿಸಿದರು.


ಮತದಾನ ಪ್ರಮಾಣ ಹೆಚ್ಚಿಸಲು ರಾಜ್ಯಾದ್ಯಂತ ಸ್ವೀಪ್ ಚಟುವಟಿಕೆಗಳು ನಡೆಯುತ್ತಿದ್ದು ಮೇ 7 ರಂದು ಎಲ್ಲ ತಾಲ್ಲೂಕುಗಳ ಮುಖ್ಯ ಸರ್ಕಲ್‍ಗಳಲ್ಲಿ ಮತದಾನ ಜಾಗೃತಿ ಕುರಿತು ಮಾನವ ಸರಪಳಿ ನಿರ್ಮಿಸಬೇಕು. ವಿಜಯ ಪ್ರಕಾಶ್ ಹಾಡಿರುವ ಹಾಗೂ ಡಾ.ಪುನೀತ್ ರಾಜ್ ಕುಮಾರ್‍ರವರ ಮತದಾನ ಕುರಿತಾದ ವಿಡಿಯೋ ಪ್ರದರ್ಶನ ಮಾಡಿ ತಮಗೆ ವರದಿ ಸಲ್ಲಿಸಬೇಕು. ಹಾಗೂ ಸಖಿ, ಯುವ, ಎತ್ನಿಕ್ ಸೇರಿದಂತೆ ಇತರೆ ಮಾದರಿ ಮತಗಟ್ಟೆಗಳ ಸ್ಥಾಪನೆ ಕುರಿತು ಜನರಿಗೆ ತಿಳಿಸಬೇಕು.


ಮತದಾನದ ಆಹ್ವಾನ ಪತ್ರಿಕೆಯನ್ನು ಪ್ರತಿ ತಾಲ್ಲೂಕಿಗೆ ನೀಡಲಾಗುವುದು. ವಿಶೇಷವಾಗಿ ಅಂಗವಿಕಲ, 80 ವರ್ಷ ಮೀರಿದ, ಮಹಿಳೆ ಮತದಾರರು ಮತ್ತು ಕಡಿಮೆ ಮತದಾನ ಆದ ಕಡೆ ಈ ಆಹ್ವಾನ ಪತ್ರಗಳನ್ನು ಹಂಚಿ ಮತದಾನಕ್ಕೆ ಆಹ್ವಾನ ನೀಡಬೇಕು. ಒಟ್ಟಾರೆ ಮತದಾರರ ಅನುಭವವನ್ನು ಉತ್ತಮಗೊಳಿಸಲು ಒತ್ತು ನೀಡಬೇಕು, ಜೊತೆಗೆ ಪೊಲೀಂಗ್ ಅಧಿಕಾರಿ, ಪೊಲೀಸ್ ಸಿಬ್ಬಂದಿಗಳನ್ನು ಅತಿಥಿಗಳ ರೀತಿ ನೋಡಿಕೊಳ್ಳಬೇಕು. ಹಾಗೂ ಮತದಾರರ ಬಗ್ಗೆ ಕಾಳಜಿ ವಹಿಸಬೇಕೆಂದು ತಿಳಿಸಿದರು.


ಸಭೆಯಲ್ಲಿ ಐಎಎಸ್ ಪ್ರೊಬೇಷನರಿ ಅಧಿಕಾರಿ ದಲ್ಜೀತ್ ಕುಮಾರ್, ಸ್ವೀಪ್ ಜಿಲ್ಲಾ ನೋಡಲ್ ಅಧಿಕಾರಿ ಶ್ರೀಕಾಂತ್, ಎಲ್ಲ ತಾಲ್ಲೂಕುಗಳ ಇಓ ಮತ್ತು ಪಿಡಿಓ ಗಳು ಪಾಲ್ಗೊಂಡಿದ್ದರು.

Leave A Reply

Your email address will not be published.

error: Content is protected !!