Karnataka Assembly Election | Shivamogga | ಮತದಾರರಿಗೆ ಆಮಿಷ ಒಡ್ಡುವುದು ಶಿಕ್ಷಾರ್ಹ ಅಪರಾಧ ; ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ

0 0

ಶಿವಮೊಗ್ಗ: ಚುನಾವಣೆ ಸಂದರ್ಭದಲ್ಲಿ ಮತದಾರರಿಗೆ ನಗ, ನಗದು ಇನ್ನಿತರ ಸಾಮಾಗ್ರಿಗಳನ್ನು ನೀಡಿ ಆಮಿಷ ಒಡ್ಡುವುದು ಹಾಗೂ ಅದನ್ನು ಪಡೆಯುವುದು ಅಪರಾಧವಾಗಿದ್ದು, ಅಂತಹ ಕೃತ್ಯಗಳು ಕಾನೂನು ಪ್ರಕಾರ ಶಿಕ್ಷಾರ್ಹವಾಗಿದೆ ಎಂದು ಘೋಷಿಸಿ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಅವರು ಆದೇಶ ಹೊರಡಿಸಿದ್ದಾರೆ.

ಮತದಾರರಿಗೆ ಆಮಿಷ ಒಡ್ಡಲು ಯಾವುದೇ ರೀತಿಯಲ್ಲಿ ಹಣ ವರ್ಗಾಯಿಸುವುದು, ವಿವಿಧ ಸಾಧನ ಸಾಮಾಗ್ರಿಗಳ ವಿತರಣೆ, ಗಿಫ್ಟ್ ಓಚರ್‌ಗಳು, ಸಿಮ್ ಕಾರ್ಡ್ ಬ್ಯಾಲೆನ್ಸ್, ಪ್ರವಾಸಕ್ಕೆ ಏರ್ಪಾಡು ಮಾಡುವುದು, ಆಹಾರ ಪದಾರ್ಥಗಳ ವಿತರಣೆ, ಮದ್ಯ ಮತ್ತಿತರ ಪಾನೀಯಗಳ ವಿತರಣೆ, ವಾಹನಗಳಿಗೆ ಯಾವುದೇ ರೀತಿಯಲ್ಲಿ ಇಂಧನ ಭರಿಸುವುದು ಐಪಿಸಿ ಹಾಗೂ ಪ್ರಜಾಪ್ರತಿನಿಧಿ ಕಾಯ್ದೆ 1951 ಅಡಿ ಶಿಕ್ಷಾರ್ಹ ಅಪರಾಧವಾಗಿದೆ.

ಜನರು ಸೂಕ್ತ ದಾಖಲೆ ಅಥವಾ ಸಮಜಾಯಿಷಿಕೆ ಇಲ್ಲದೆ 50ಸಾವಿರ ರೂ. ಗಿಂತ ಅಧಿಕ ನಗದನ್ನು ಕೊಂಡೊಯ್ಯಬಾರದು. ಯಾವುದೇ ಸಾಧನ, ಸಾಮಾಗ್ರಿಗಳನ್ನು ಸೂಕ್ತ ದಾಖಲೆಗಳಿಲ್ಲದೆ ದೊಡ್ಡ ಪ್ರಮಾಣದಲ್ಲಿ ಸಂಗ್ರಹಿಸಿಡುವುದು ಅಥವಾ ಸಾಗಾಟ ಮಾಡಬಾರದು ಎಂದು ಅವರು ಆದೇಶದಲ್ಲಿ ತಿಳಿಸಿದ್ದಾರೆ.

ಜಾಹೀರಾತು ನಿರ್ಬಂಧ:

ಚುನಾವಣಾ ಸಂದರ್ಭದಲ್ಲಿ ಯಾವುದೇ ವ್ಯಕ್ತಿ ಸಾರ್ವಜನಿಕ ಸ್ಥಳದಲ್ಲಿ ಅಥವಾ ಸಾರ್ವಜನಿಕರಿಗೆ ಕಾಣಿಸುವ ರೀತಿಯಲ್ಲಿ ಸಕ್ಷಮ ಪ್ರಾಧಿಕಾರದ ಪೂರ್ವಾನುಮತಿಯಿಲ್ಲದೆ ಜಾಹೀರಾತುಗಳನ್ನು ಪ್ರಚುರಪಡಿಸುವುದನ್ನು ನಿಷೇಧಿಸಿ ಜಿಲ್ಲಾಧಿಕಾರಿ ಅವರು ಆದೇಶ ಹೊರಡಿಸಿದ್ದಾರೆ.

ಮುದ್ರಣ ನಿರ್ಬಂಧ:

ಚುನಾವಣಾ ಸಂದರ್ಭದಲ್ಲಿ ಯಾವುದೇ ಚುನಾವಣಾ ಕರಪತ್ರ, ಪ್ಲೆಕಾರ್ಡ್, ಬ್ಯಾನರ್, ಬಂಟಿಂಗ್ಸ್, ಫೆಕ್ಸ್, ಪೋಸ್ಟರ್ ಇತ್ಯಾದಿಗಳನ್ನು ಮುದ್ರಿಸುವ ಸಂದರ್ಭದಲ್ಲಿ ಅದರಲ್ಲಿ ಮುದ್ರಕರ ಹೆಸರು, ವಿಳಾಸ, ಮುದ್ರಣ ಸಂಖ್ಯೆ ಇತ್ಯಾದಿ ವಿವರಗಳನ್ನು ಕಡ್ಡಾಯವಾಗಿ ನಮೂದಿಸಿರಬೇಕು ಎಂದು ಜಿಲ್ಲಾಧಿಕಾರಿ ಅವರು ಆದೇಶ ಹೊರಡಿಸಿದ್ದಾರೆ.

ಮುದ್ರಣ ಕುರಿತಾಗಿ ಮಾಹಿತಿಯನ್ನು ನಿಗದಿತ ನಮೂನೆಯಲ್ಲಿ 3ದಿನಗಳ ಒಳಗಾಗಿ ಹಾಗೂ ಸಾಮಾಗ್ರಿಯ ಪ್ರತಿಯನ್ನು ಕಡ್ಡಾಯವಾಗಿ ಜಿಲ್ಲಾಧಿಕಾರಿ ಕಚೇರಿಗೆ ಒದಗಿಸಬೇಕು. ಇದರ ಉಲ್ಲಂಘನೆ ಪ್ರಜಾಪ್ರತಿನಿಧಿ ಕಾಯ್ದೆ 1951 ರ 127 (ಎ) ಉಲ್ಲಂಘನೆಯಾಗಿದೆ ಎಂದು ಅವರು ಆದೇಶದಲ್ಲಿ ತಿಳಿಸಿದ್ದಾರೆ.

ಪೂರ್ವಾನುಮತಿ ಕಡ್ಡಾಯ:

ಚುನಾವಣಾ ಜಾಹೀರಾತುಗಳನ್ನು ಕೇಬಲ್ ನೆಟ್‌ವರ್ಕ್ ಅಥವಾ ಟಿವಿ ಚಾನೆಲ್‌ಗಳಲ್ಲಿ ಪ್ರಸಾರ ಮಾಡುವ ಪೂರ್ವದಲ್ಲಿ ಕಡ್ಡಾಯವಾಗಿ ಸಕ್ಷಮ ಪ್ರಾಧಿಕಾರದಿಂದ ಅನುಮತಿಯನ್ನು ಪಡೆದಿರಬೇಕು ಎಂದು ಜಿಲ್ಲಾಧಿಕಾರಿ ಅವರು ಹೊರಡಿಸಿರುವ ಆದೇಶದಲ್ಲಿ ತಿಳಿಸಿದ್ದಾರೆ.

ಸುಗಮ ಮತ್ತು ನ್ಯಾಯಯುತ ಚುನಾವಣಾ ಪ್ರಕ್ರಿಯೆಗಾಗಿ ಈಗಾಗಲೇ ಸ್ಟಾಟಿಕ್ ಸರ್ವೆಯಲೆನ್ಸ್ ತಂಡಗಳು, ವಿಡಿಯೋ ವೀಕ್ಷಣಾ ತಂಡಗಳು ಹಾಗೂ ಫ್ಲಯಿಂಗ್ ಸ್ಕ್ವಾಡ್‌ಗಳನ್ನು ರಚಿಸಲಾಗಿದೆ. ಮುಕ್ತ, ಪಾರದರ್ಶಕ ಹಾಗೂ ಶಾಂತಿಯುತವಾಗಿ ಚುನಾವಣೆ ನಡೆಸಲು ಸಾರ್ವಜನಿಕರು ಸಹಕಾರ ನೀಡುವಂತೆ ಅವರು ಕೋರಿದ್ದಾರೆ.

Leave A Reply

Your email address will not be published.

error: Content is protected !!