ಮಾಜಿ ಸೈನಿಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದವರ ವಿರುದ್ದ ಕಠಿಣ ಕಾನೂನು ಕ್ರಮಕ್ಕೆ ಆಗ್ರಹ

0 0

ಶಿವಮೊಗ್ಗ: ಮಾಜಿ ಸೈನಿಕ ಪಿ.ವೈ. ರವಿ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದವರ ವಿರುದ್ದ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ರಾಜ್ಯ ಉಪಾಧ್ಯಕ್ಷ ಸುಭಾಷ್ ಚಂದ್ರ ತೇಜಸ್ವಿ ಒತ್ತಾಯಿಸಿದರು.


ಅವರು ಇಂದು ಮೀಡಿಯಾ ಹೌಸ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರವಿ ಅವರು ಮಾಜಿ ಸೈನಿಕರಾಗಿದ್ದು, ಸುಮಾರು 18 ವರ್ಷಗಳ ಕಾಲ ದೇಶ ಸೇವೆ ಮಾಡಿ ಶಿಕಾರಿಪುರ ತಾಲೂಕಿನ ಕಪ್ಪನಹಳ್ಳಿಯಲ್ಲಿ ಕೃಷಿ ಕಾಯಕ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಸಾಮಾಜಿಕ ಹೋರಾಟಗಾರರಾಗಿರುವ ಇವರ ಮೇಲೆ ಸ್ಥಳೀಯ ಕೆಲವರು ವಿನಾಕಾರಣ ನಿಂದಿಸಿ ಜಗಳ ಮಾಡುತ್ತಾ ಇರುತ್ತಾರೆ. ಆ.11ರಂದು ಇದೇ ಕಾರಣಕ್ಕಾಗಿ ತಮ್ಮ ಹೊಲದಲ್ಲಿ ಕೆಲಸ ಮಾಡುತ್ತಿದ್ದ ರವಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ದೂರಿದರು.
ರವಿ ಅವರು ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ತೀವ್ರವಾಗಿ ಗಾಯಗೊಂಡಿದ್ದಾರೆ. ದುಶ್ಕರ್ಮಿಗಳು ಅವರನ್ನು ಕತ್ತಿ ಸಲಾಕೆಗಳಿಂದ ಹಲ್ಲೆ ಮಾಡಿದ ಪರಿಣಾಮವಾಗಿ ತಲೆ ಪೂರ್ತಿ ಒಡೆದುಹೋಗಿದ್ದು, ದೇಶ ರಕ್ಷಣೆಗಾಗಿ ಪ್ರಾಣ ತ್ಯಾಗ ಮಾಡಲು ಸಿದ್ಧರಿದ್ದ ಮಾಜಿ ಸೈನಿಕನಿಗೆ ತನ್ನ ಪ್ರಾಣ ರಕ್ಷಿಸಿಕೊಳ್ಳಲಾಗದ ಸ್ಥಿತಿ ಬಂದಿರುವುದು ದುರ್ದೈವವಾಗಿದೆ ಎಂದರು.


ತಮ್ಮ ಮೇಲೆ ನಡೆದ ಹಲ್ಲೆಯ ವಿಚಾರವಾಗಿ ರಕ್ಷಣೆ ಕೋರಿ ರವಿ ಅವರು ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದರೂ ಕೂಡ ಪೊಲೀಸರು ಹಲ್ಲೆ ಮಾಡಿದವರ ವಿರುದ್ಧ ದೂರು ದಾಖಲಿಸಿಕೊಳ್ಳದೆ ಹಲ್ಲೆಗೊಳಗಾದ ಮಾಜಿ ಸೈನಿಕನ ವಿರುದ್ಧವೇ ಮೊಕದ್ದಮೆ ದಾಖಲಿಸಿರುವುದು ಅತ್ಯಂತ ವಿಷಾದವಾಗಿದೆ. ಇದನ್ನು ನಮ್ಮ ಸಂಘ ಖಂಡಿಸುತ್ತದೆ. ಕ್ರಮ ತೆಗೆದುಕೊಳ್ಳದ ಶಿಕಾರಿಪುರ ಡಿವೈಎಸ್ಪಿಯವರ ವಿರುದ್ಧ ಮಾಜಿ ಸೈನಿಕರ ಸಂಘ ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತದೆ. ಮತ್ತು ಜಿಲ್ಲಾಧಿಕಾರಿಗಳಿಗೆ , ಜಿಲ್ಲಾ ರಕ್ಷಣಾಧಿಕಾರಿಗಳಿಗೆ, ಸಂಸದರಿಗೆ ಕ್ರಮಕ್ಕೆ ಆಗ್ರಹಿಸಿ ಮನವಿ ಸಲ್ಲಿಸಲಾಗುವುದು ಎಂದರು.


ಹಲ್ಲೆಗೊಳಗಾದ ಮಾಜಿ ಸೈನಿಕನ ಪತ್ನಿ ಸಿ. ಶ್ರುತಿ ಮಾತನಾಡಿ, ರವಿ ಅವರು ಸಾಮಾಜಿಕ ಹೋರಾಟಗಾರರಾಗಿದ್ದರು. ಭ್ರಷ್ಟಾಚಾರ ಸಹಿಸುತ್ತಿರಲಿಲ್ಲ. ಗ್ರಾಮ ಪಂಚಾಯಿತಿಯಲ್ಲಿ ನಡೆದ ಕೆಲವು ವಿಷಯಗಳಿಗೆ ಸಂಬಂಧಿಸಿದಂತೆ ಅವರು ಪ್ರಶ್ನೆ ಮಾಡಿದ್ದೇ ತಪ್ಪಾಗಿದೆ. ಗ್ರಾಪಂ. ಅಧ್ಯಕ್ಷರು ಮತ್ತು ಸದಸ್ಯರು ಇವರ ಹೋರಾಟವನ್ನು ಸಹಿಸದೆ ಈ ರೀತಿ ಹಲ್ಲೆ ನಡೆಸಿದ್ದಾರೆ. ನೆಮ್ಮದಿಯಾಗಿ ನಮ್ಮನ್ನು ಬದುಕಲು ಬಿಡುತ್ತಿಲ್ಲ. ಜಾತಿ ನಿಂದನೆ ಕೇಸು ಹಾಕುವ ಬೆದರಿಕೆ ಹಾಕುತ್ತಿದ್ದಾರೆ. ನಮಗೆ ರಕ್ಷಣೆಯೇ ಇಲ್ಲವಾಗಿದೆ. ನನಗೂ ಕೂಡ ಕಿರುಕುಳ ನೀಡಿದ್ದಾರೆ. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ತಮ್ಮ ಅಳಲನ್ನು ವ್ಯಕ್ತಪಡಿಸಿದರು.


ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸೈನಿಕರ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಆರ್. ದಿನೇಶ್, ರಾಜ್ಯ ಸಂಚಾಲಕ ವಾಸಪ್ಪ, ಉಪಾಧ್ಯಕ್ಷ ಮಾಲತೇಶ್, ಸದಸ್ಯರಾದ ಪುಟ್ಟರಾಜು, ಶಂಕ್ರಾನಾಯ್ಕ, ಸತೀಶ್ ಹೆಚ್.ಬಿ., ಜ್ಞಾನೇಶ್ವರ್ ಸೇರಿದಂತೆ ಹಲವರಿದ್ದರು.

Leave A Reply

Your email address will not be published.

error: Content is protected !!