ಮುಳುಗಡೆ ಸಂತ್ರಸ್ತರ ಒಕ್ಕಲೆಬ್ಬಿಸುವ ಕೆಲಸ ತಕ್ಷಣ ನಿಲ್ಲಿಸಿ

0 0

ಶಿವಮೊಗ್ಗ: ಮುಳುಗಡೆ ಸಂತ್ರಸ್ತರ ಒಕ್ಕಲೆಬ್ಬಿಸುವ ಕೆಲಸವನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ತಕ್ಷಣವೇ ನಿಲ್ಲಿಸಬೇಕು. ಸರ್ಕಾರದ ತೀರ್ಮಾನ ಆಗುವವರೆಗೂ ಸಂತ್ರಸ್ತರ ಜಮೀನುಗಳನ್ನು ಆಕ್ರಮಿಸಿಕೊಳ್ಳಬಾರದು ಎಂದು ಅಪೆಕ್ಷ್ ಬ್ಯಾಂಕ್ ಮಾಜಿ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ, ಜಿ.ಪಂ. ಮಾಜಿ ಸದಸ್ಯ ಬಿ.ಆರ್. ಜಯಂತ್ ಇಂದು ಜಂಟಿ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.


ಆರ್‌ಎಂ ಮಂಜುನಾಥ ಗೌಡ ಮಾತನಾಡಿ, ಶರಾವತಿ, ಚಕ್ರ, ಸಾವೆಹಕ್ಲು, ಮುಂತಾದ ಮುಳುಗಡೆ ಪ್ರದೇಶದ ರೈತರು ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಸರ್ಕಾರದ ವಿವಿಧ ಆದೇಶಗಳ ಮೂಲಕ 1959-69ರ ಮಧ್ಯದ ಅವಧಿಯಲ್ಲಿ ಸುಮಾರು 9,934 ಅರಣ್ಯ ಪ್ರದೇಶದಲ್ಲಿ ಸಾಗುವಳಿ ಮಾಡಿಕೊಂಡಿರುತ್ತಾರೆ. ಈ ಅರಣ್ಯ ಜಮೀನುಗಳು ಕಂದಾಯ ಇಲಾಖೆಗೆ ಹಸ್ತಾಂತರವಾಗಿವೆ. ಆದರೆ ಅರಣ್ಯ ಸಂರಕ್ಷಣಾ ಕಾಯಿದೆ 1980ರ ಪ್ರಕಾರ ಕೇಂದ್ರ ಸರ್ಕಾರದ ಅನುಮತಿ ಪಡೆದಿಲ್ಲ ಎಂಬ ಕಾರಣಕ್ಕಾಗಿ ರಾಜ್ಯ ಹೈಕೋರ್ಟ್ ಸರ್ಕಾರದ ಕ್ರಮವನ್ನು ವಜಾಗೊಳಿಸಿರುತ್ತದೆ ಎಂದರು.


ಇದರಿಂದ ಅರಣ್ಯ ಇಲಾಖೆಯವರು ಮಾನವಿಯತೆ ಇಲ್ಲದೆ ಸಾಗುವಳಿದಾರರ ಜಮೀನುಗಳನ್ನು ವಶಪಡಿಸಿಕೊಳ್ಳುವುದು, ಬೇಲಿ ಕೀಳುವುದು, ಕೇಸು ದಾಖಲಿಸುವುದು ಸೇರಿದಂತೆ ಕಿರುಕುಳ ನೀಡುತ್ತಾ ಬಂದಿದ್ದಾರೆ. ಕೇಂದ್ರ ಸರ್ಕಾರ ಕೂಡ ಇದನ್ನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಕಾಗೋಡು ತಿಮ್ಮಪ್ಪನವರು ಪ್ರಯತ್ನಿಸಿದರೂ ಕೂಡ ಕಾಯಿದೆ ಆಗಲಿಲ್ಲ. ಸುಮಾರು 65 ವರ್ಷಗಳಿಂದ ಸಂತ್ರಸ್ತರ ಬದುಕು ಮೂರಾಬಟ್ಟೆಯಾಗಿದೆ ಎಂದರು.
ಅರಣ್ಯ ಅಧಿಕಾರಿಗಳು ಕೂಡ ಮಾನವೀಯತೆ ಇಲ್ಲದೆ ರೈತರ ವಿರುದ್ದ ದಬ್ಬಾಳಿಕೆ ನಡೆಸುತ್ತಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೂಕೂಡ ಬಿಜೆಪಿ ಸರ್ಕಾರದ ಗುಂಗಿನಲ್ಲಿಯೇ ಇನ್ನೂ ಇದ್ದಾರೆ. ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರು ಹಲವು ಬಾರಿ ಸಂತ್ರಸ್ತರ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಸಭೆಗಳನ್ನು ನಡೆಸಿದ್ದಾರೆ.ಸೆ.14ರಂದು ಉನ್ನತ ಮಟ್ಟದ ಸಭೆ ನಡೆಸಲಿದ್ದಾರೆ ಎಂದರು.


ಬಿ.ಆರ್. ಜಯಂತ್ ಮಾತನಾಡಿ, ಮುಳುಗಡೆ ಸಂತ್ರಸ್ತರಿಗೆ ಆಶಾಕಿರಣದಂತೆ ಲೋಕಸಭೆಯಲ್ಲಿ ಅರಣ್ಯ ಸಂರಕ್ಷಣಾ ಕಾಯಿದೆ 1980ಕ್ಕೆ ಆ.4ರಂದು ತಿದ್ದುಪಡಿಯಾಗಿ ಗೆಜೆಟ್ ನೋಟಿಫಿಕೇಷನ್ ಕೂಡ ಆಗಿದೆ. ಇದರ ಅನ್ವಯ ಸೆಕ್ಷನ್ 4, 1 (ಎ) ಮತ್ತು ಬಿ ಕಲಂಗಳಲ್ಲಿ ವಿವಿರಿಸಿದ ಅರಣ್ಯ ಭೂಮಿ ಮಾತ್ರ ಕಾಯಿದೆಯ ಪ್ರಕಾರ ಅರಣ್ಯ ಸಂರಕ್ಷಣಾ ಕಾಯಿದೆ ವ್ಯಾಪ್ತಿಗೆ ಬರುತ್ತದೆ. ಹಾಗಾಗಿ 1996 ಡಿಸೆಂಬರ್ 12ರಂದು ಅಥವಾ ಅದಕ್ಕಿಂತ ಮುಂಚೆ ರಾಜ್ಯ ಸರ್ಕಾರಗಳು ಅರಣ್ಯೇತರ ಉದ್ದೇಶಕ್ಕಾಗಿ ಬಿಡುಗಡೆಗೊಳಿಸಿದ ಅರಣ್ಯಭೂಮಿ ತಿದ್ದುಪಡಿ ಕಾಯಿದೆ 1980ರಿಂದ ಹೊರಗಿಡಲಾಗಿದೆ. ಅಂದರೆ ಅದನ್ನು ಕೈಬಿಡಲಾಗಿದೆ ಎಂದರು.


ಈ ಕಾನೂನಿ ಅನ್ವಯ ಓಡಿಸ್ಸಾ ಸರ್ಕಾರ ಈಗಾಗಲೇ ತನ್ನ ರಾಜ್ಯದಲ್ಲಿ ಇದಕ್ಕೆ ಜೀವ ನೀಡಿ ಜಾರಿಗೆ ತಂದಿದೆ. ಅದೇ ಕಾನೂನನ್ನು ದೇಶದ ಎಲ್ಲಾ ರಾಜ್ಯಗಳಿಗೂ ವಿಸ್ತರಿಸಬಹುದಾಗಿದೆ. ಕರ್ನಾಟಕ ಸರ್ಕಾರ ಕೂಡ ಈ ಕಾಯಿದೆಯ ಅನ್ವಯ ರಾಜ್ಯದ ಮುಳುಗಡೆ ಸಂತ್ರಸ್ತರಿಗೆ ನ್ಯಾಯ ಒದಗಿಸಬಹುದಾಗಿದೆ. ಮತ್ತು ಒದಗಿಸಬೇಕು ಎಂದು ಒತ್ತಾಯಿಸಿದರು.


ರಾಜ್ಯ ಸರ್ಕಾರ 1959 ಮತ್ತು 69ರ ಮಧ್ಯದಲ್ಲಿ 9934 ಎಕರೆ ಅರಣ್ಯ ಭೂಮಿಯನ್ನು ಅರಣ್ಯ ಸಂರಕ್ಷಣಾ ಕಾಯಿದೆಯಿಂದ ಹೊರತುಪಡಿಸಲಾಗಿದ್ದು, ರಾಜ್ಯ ಸರ್ಕಾರ ಭೂಮಿ ಹಂಚಿಕೆಗೆ ಕ್ರಮ ಕೈಗೊಳ್ಳಬೇಕು ಎಂದರು.
ಹಾಗೆಯೇ ಈ ತಿದ್ದುಪಡಿ ಕಾಯಿದೆ ಅನ್ವಯ ಡೀಮ್ಡ್ ಫಾರೆಸ್ಟ್ ಎಂದು ಕಂದಾಯ ಇಲಾಖೆಗೆ ಸೇರಿದ್ದ ಸೊಪ್ಪಿನಬೆಟ್ಟ, ಖುಷ್ಕಿ, ಬ್ಯಾಣ, ಕಾನು ಇತ್ಯಾದಿ ಭೂಮಿಯನ್ನು ಕಾಯಿದೆಯಿಂದ ಹೊರಗಿಡಲಾಗಿದೆ. ಆದ್ದರಿಂದ ಈ ಭೂಮಿಯನ್ನು ಕೂಡ ಕಂದಾಯ ಇಲಾಖೆ ವ್ಯಾಪ್ತಿಗೆ ತಂದು ಸಂತ್ರಸ್ತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ದುಗ್ಗಪ್ಪ ಗೌಡ, ಚಂದ್ರಭೂಪಾಲ್, ಮಂಜುನಾಥಬಾಬು ಮತ್ತು ಮುಳುಗಡೆ ಸಂತ್ರಸ್ತರು ಇದ್ದರು.

Leave A Reply

Your email address will not be published.

error: Content is protected !!