ಶಿವಮೊಗ್ಗ : ನಿನ್ನೆ ಮಧ್ಯಾಹ್ನ ಯಶವಂತಪುರ-ಶಿವಮೊಗ್ಗದ ಇಂಟರ್‌ಸಿಟಿ ರೈಲಿನ ಎಸಿ ಬೋಗಿಯಲ್ಲಿ ವ್ಯಕ್ತಿಯೋರ್ವರ ಮೃತದೇಹ ಪತ್ತೆಯಾಗಿದೆ.
ಸಾವನ್ನಪ್ಪಿದ ವ್ಯಕ್ತಿಯನ್ನ ಶಿವಮೊಗ್ಗದ ಯೂನಿಯನ್ ಬ್ಯಾಂಕ್‌ನ ವ್ಯವಸ್ಥಾಪಕ ಅಶೋಕ್ ಚೌಧರಿ ಎಂದು ಗುರುತಿಸಲಾಗಿದೆ. ದುರಂತ ಎಂದರೆ ಈ ವ್ಯಕ್ತಿ ನಿನ್ನೆ ಬೆಂಗಳೂರಿಗೆ ಪ್ರಯಾಣಿಸುವ ವೇಳೆ ಎಸಿ ಬೋಗಿಯಲ್ಲಿದ್ದ ಶೌಚಾಲಯಕ್ಕೆ ಹೋದಾಗ ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿದ್ದಾರೆ ಎನ್ನಲಾಗಿದ್ದು, ದುರದೃಷ್ಟವಶಾತ್ ಯಾರ ಗಮನಕ್ಕೂ ಬಾರದೆ ಬೆಂಗಳೂರಿನಿಂದ ವಾಪಾಸ್ ಶಿವಮೊಗ್ಗಕ್ಕೆ ರೈಲು ಬಂದ ನಂತರ ಅವರ ಸಾವು ಬೆಳಕಿಗೆ ಬಂದಿದೆ.
ನಿನ್ನೆ ಬೆಳಗ್ಗೆ ರೈಲು ಸಂಖ್ಯೆ 16579 ಕ್ರಮ ಸಂಖ್ಯೆಯಲ್ಲಿ ಅಶೋಕ್ ಚೌಧರಿ ಶವ ಹಾಗೆ ಯಶವಂತಪುರದಿಂದ ಶಿವಮೊಗ್ಗಕ್ಕೆ ಬೋಗಿಯ ಶೌಚಾಲಯದಲ್ಲಿಯೇ ಬಂದಿದೆ. ಮಧ್ಯಾಹ್ನ 2.20ರ ವೇಳೆಗೆ ರೈಲನ್ನು ಸ್ವಚ್ಛಗೊಳಿಸಲು ಸಿಬ್ಬಂದಿಗಳು ಮುಂದಾದಾಗ ಶೌಚಾಲಯದ ಒಳಭಾಗದಲ್ಲಿ ಲಾಕ್ ಆಗಿತ್ತು. ಶೌಚಾಲಯದ ಒಳಭಾಗದಲ್ಲಿ ಲಾಕ್ ಆಗಿದ್ದಕ್ಕೆ ಸಿಬ್ಬಂದಿಗಳಿಗೆ ಅನುಮಾನ ಬಂದಿದೆ. ನಂತರ ರೈಲ್ವೆಯ ಆರ್.ಪಿ.ಎಫ್ ಮತ್ತು ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆರ್.ಪಿ.ಎಫ್ ಮತ್ತು ಪೊಲೀಸರು ಸ್ಥಳಕ್ಕೆ ಹೋಗಿ ನೋಡಿದಾಗ ಅಶೋಕ್ ಚೌಧರಿ ಶವವಾಗಿ ಪತ್ತೆಯಾಗಿದ್ದಾರೆ.
ಅಸ್ಸಾಂನಿಂದ ಶಿವಮೊಗ್ಗಕ್ಕೆ ಅಶೋಕ್ ಚೌಧರಿಯವರ ಕುಟುಂಬ ಬರಲಿದೆ ಎಂಬ ಕಾರಣಕ್ಕೆ ನಿನ್ನೆ ಅಶೋಕ್ ಚೌಧರಿ 16578 ಕ್ರಮ ಸಂಖ್ಯೆಯ ಶಿವಮೊಗ್ಗ- ಯಶವಂತಪುರ ರೈಲಿಗೆ ತೆರಳಿದ್ದರು. ಅವರ ಕುಟುಂಬವು ಅಸ್ಸಾಂನಿಂದ ಬೆಂಗಳೂರಿಗೆ ವಿಮಾನ ನಿಲ್ದಾಣದಲ್ಲಿ ಬಂದಿದ್ದು ಅವರನ್ನ ರೈಲಿನಲ್ಲಿ ಶಿವಮೊಗ್ಗಕ್ಕೆ ಕರೆತರಲು ಹೋಗುವಾಗ ದುರ್ಘಟನೆ ಸಂಭವಿಸಿದೆ.